ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಯುನೈಟೆಡ್ ಕಿಂಗ್‌ಡಂನ ಮಧ್ಯಪ್ರಾಂತದ ಡೆನ್ಬಿಯಲ್ಲಿ ಆಲ್ ಕೌಂಟಿ ಕನ್ನಡ ಅಸೋಸಿಯೇಶನ್ ಆಶ್ರಯದಲ್ಲಿ ಭಾನುವಾರ ನಡೆದ ಕನ್ನಡಿಗರ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯದಲ್ಲಿ ನೈಋತ್ಯ ಇಂಗ್ಲೆಂಡ್ ತಂಡ ಜಯಶಾಲಿಯಾಯಿತು.
ಸೀಮಿತ ಓವರುಗಳ ಈ ಸ್ಪರ್ಧೆಯಲ್ಲಿ ಸ್ಕಾಟ್ಲೆಂಡ್, ಐರ್ಲೆಂಡ್, ವೇಲ್ಸ್, ಆಗ್ನೇಯ ಇಂಗ್ಲೆಂಡ್, ನೈಋತ್ಯ ಇಂಗ್ಲೆಂಡ್, ಆಂಗ್ಲಿಕನ್ ಇಂಗ್ಲೆಂಡ್, ಮಿಡ್ಲ್ಯಾಂಡ್ಸ್‌ನ ಕನ್ನಡಿಗರ ತಂಡಗಳು ಸ್ಪರ್ಧಿಸಿದ್ದುವು. ವಿಜೇತ ತಂಡವು ಸೆಮಿ ಫೈನಲ್‌ನಲ್ಲಿ ಮಿಡ್ಲ್ಯಾಂಡ್ಸ್ ತಂಡವನ್ನು ಮತ್ತು ಫೈನಲ್‌ನಲ್ಲಿ ಆಂಗ್ಲಿಕನ್ ಇಂಗ್ಲೆಂಡ್ ತಂಡವನ್ನು ಸೋಲಿಸಿತು.
ವಿಜೇತ ತಂಡದಲ್ಲಿ ಕುಂದಾಪುರ ಮೂಲದ ಪರೀಕ್ಷಿತ್ ಶೆಟ್ಟಿ ಮತ್ತು ಯೋಗೀಂದ್ರ ಮರವಂತೆ ಇದ್ದರು. ಪರೀಕ್ಷಿತ್ ಶೆಟ್ಟಿ ನೈಋತ್ಯ ಇಂಗ್ಲೆಂಡ್‌ನ ಬ್ರಿಸ್ಟಲ್‌ನಲ್ಲಿ ಉನ್ನತ ವ್ಯಾಸಂಗ ಮಾಡುತ್ತಿದ್ದಾರೆ ಮತ್ತು ಯೋಗೀಂದ್ರ ಮರವಂತೆ ಏರ್‌ಬಸ್ ವಿಮಾನ ತಯಾರಿ ಕಂಪನಿಯಲ್ಲಿ ತಂತ್ರಜ್ಞ ಆಗಿದ್ದಾರೆ. ಪರೀಕ್ಷಿತ್ ಶೆಟ್ಟಿ ಪರಿಣಿತ ಯುವ ಆಲ್‌ರೌಂಡರ್. ಎಲ್ಲ ಪಂದ್ಯಗಳ ಬ್ಯಾಟಿಂಗ್, ಬೌಲಿಂಗ್, ಪೀಲ್ಡಿಂಗ್‌ನಲ್ಲಿ ಅಮೋಘ ಪ್ರದರ್ಶನ ನೀಡಿದ ಅವರು ಪಂದ್ಯ ಶ್ರೇಷ್ಠ ಆಟಗಾರ ಮತ್ತು ಅತ್ಯುತ್ತಮ ದಾಂಡಿಗ ಪ್ರಶಸ್ತಿ ಪಡೆದರು.