ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಮೂರು ವರ್ಷದ ಪೋರ ಆರ್ಯನ್ ಹೆಸರು ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್‌ನಲ್ಲಿ ದಾಖಲಾಗಿದೆ. ದೇಶಗಳು, ರಾಜ್ಯಗಳು, ರಾಜಧಾನಿ, ಜಿಲ್ಲೆ, ಬಣ್ಣ, ವರ್ಣಮಾಲೆ ಸೇರಿದಂತೆ ಹಲವು ವಿಷಯಗಳ ಬಗ್ಗೆ ಪಟಪಟನೆ ಉತ್ತರಿಸುವ ಹಾಗೂ ಗುರುತಿಸುವ ಆರ್ಯನ್, ಅಧಿಕ ಜ್ಞಾಪನಾ ಶಕ್ತಿಯ ಕಾರಣಕ್ಕೆ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಸೇರಿ ಈ ದಾಖಲೆ ಮಾಡಿದ್ದಾನೆ. ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ ತಾಲೂಕು ಕೋಡಿಯ ಕೋಟೆಮನೆ ನಾಗೆಂದ್ರ ಹಾಗೂ ಅಂಜಲಿ ದಂಪತಿಗಳ ಏಕೈಕ ಪುತ್ರ ಆರ್ಯನ್. ಇವರ ಕುಟುಂಬ ಬೆಂಗಳೂರಿನಲ್ಲಿ ನೆಲೆಸಿದ್ದು, ಆರ್ಯನ್ ಬಹಳ ಚುರುಕಾಗಿರುವುದನ್ನು ಗಮನಿಸಿ ಆತನ ತಾಯಿ ಅಂಜಲಿ ಒಂದೊಂದೇ ವಿಷಯವನ್ನು ಕಲಿಸುತ್ತಾ ಬಂದಿದ್ದಾರೆ. ಸ್ನೇಹಿತರ ಸಲಹೆಯಂತೆ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್‌ಗೆ ಅರ್ಜಿ ಸಲ್ಲಿಸಲಾಗಿತ್ತು.
2 ವರ್ಷ 11 ತಿಂಗಳು ಇರುವಾಗಲೇ ಆರ್ಯನ್‌ನ ಜ್ಞಾಪಕಶಕ್ತಿಯ ಪರೀಕ್ಷೆ ನಡೆದಿದ್ದು, ಅಂತಿಮವಾಗಿ ಆತನ ಹೆಸರಿನಲ್ಲಿ ದಾಖಲೆಯೊಂದು ದಾಖಲಾಗಿದೆ. ಆರ್ಯನ್ 2 ವರ್ಷ 11 ತಿಂಗಳ ಮಗುವಾಗಿದ್ದಾಗಲೇ ಸಾಮಾನ್ಯ ಜ್ಞಾನ ಗರಿಷ್ಟ ಮಟ್ಟದಲ್ಲಿತ್ತು ಒಂದರಿಂದ ನೂರರವರಗೆ ಸರಾಗವಾಗಿ ಹೇಳುತ್ತಾನೆ, ಸಾಮಾನ್ಯ ಜ್ಞಾನದ 50 ಪ್ರಶ್ನೆಗಳಿಗೆ ಸ್ಪಷ್ಟವಾಗಿ ಉತ್ತರಿಸುತ್ತಾನೆ. ದೇಶದ ರಾಜಧಾನಿ, ರಾಜ್ಯ ರಾಜಧಾನಿ ಮತ್ತು ವಿವಿಧ ದೇಶಗಳು ಹಾಗೂ ಅವುಗಳ ರಾಷ್ಟ್ರ ಧ್ವಜ, ಮಗ್ಗಿ , ಕನ್ನಡ ವರ್ಣಮಾಲೆ, ಪಂಚೇದ್ರಿಯಗಳು, ದಿಕ್ಕುಗಳು, ಕಾಲಗಳು, ಸೌರಮಂಡಲದ ಗ್ರಹಗಳು, ಪಂಚಪಾಂಡವರ ಹೆಸರುಗಳು, ಪ್ರಾಣಿ-ಪಕ್ಷಿಗಳು, ಹಣ್ಣು-ತರಕಾರಿಗಳು ರಾಜಕಾರಣಿಗಳು ಹಾಗೂ ದೇಶದ ಪ್ರತಿಭಾನ್ವಿತ ವ್ಯಕ್ತಿಗಳ ಭಾವಚಿತ್ರವನ್ನು ಗುರುತಿಸುತ್ತಾನೆ. ಬಣ್ಣಗಳು ಆಕೃತಿಗಳನ್ನು ಗುರುತಿಸುತ್ತಾನೆ. ದೇಶದ ಎಲ್ಲಾ ರಾಷ್ಟ್ರಪತಿಗಳ ಹೆಸರನ್ನು ಹೇಳುತ್ತಾನೆ. ದೇಶದ ರಾಷ್ಟ್ರಗೀತೆ ದೇಶಭಕ್ತಿಗೀತೆ ಮತ್ತು ದೇಶದ ಶ್ಲೋಕಗಳನ್ನು ಸರಾಗವಾಗಿ ಸ್ಪಷ್ಟವಾಗಿ ಉಚ್ಚರಿಸುತ್ತಾ ಹೇಳುತ್ತಾನೆ.ಕೃತಿಗಳು ಹಾಗೂ ಲೇಖಕರ ಹೆಸರುಗಳನ್ನು ಹೇಳುತ್ತಾನೆ. ಇದರೊಂದಿಗೆ ಯೋಗ, ಧ್ಯಾನ, ನೃತ್ಯವನ್ನು ಮಾಡುವ ಕಲಾ ನೈಪುಣ್ಯತೆಯನ್ನು ಹೊಂದಿರುತ್ತಾನೆ..
ನಾಗೇಂದ್ರ ಅವರು ಸಿನೆಮಾ ಕ್ಷೇತ್ರದಲ್ಲಿ ನಟನಾಗಿ ಗುರುತಿಸಿಕೊಂಡಿದ್ದರೇ, ಅಂಜಲಿ ಶಿಕ್ಷಕಿಯಾಗಿದ್ದಾರೆ. ತಮ್ಮ ಮಗುವಿನ ಪ್ರತಿಭೆಯನ್ನು ಗುರುತಿಸಿ ಪೋಷಿಸಿದ್ದರಿಂದ ಈ ಸಾಧನೆ ಸಾಧ್ಯವಾಗಿದೆ ಎಂದು ಅವರು ತಮ್ಮ ಸಂತಸ ಹಂಚಿಕೊಂಡಿದ್ದಾರೆ.