ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಆಯುರ್ವೇದದಿಂದ ಯಾವುದೇ ಅಡ್ಡಪರಿಣಾಮಗಳಿಲ್ಲ. ಪೌಷ್ಠಿಕ ಆಹಾರ ಸೇವನೆಯು ಆಯುರ್ವೇದದ ಭಾಗವಾಗಿದೆ. ಹಾಗಾಗಿ ಗರ್ಭಿಣಿಯರು ಪೌಷ್ಠಿಕ ಆಹಾರ ಸೇವಿಸಿ ಸರ್ಕಾರದ ಪ್ರಯೋಜನಗಳನ್ನು ಪಡೆದುಕೊಳ್ಳಬೇಕು ಎಂದು ಬೈಂದೂರು ಶಾಸಕ ಬಿ. ಎಂ. ಸುಕುಮಾರ್ ಶೆಟ್ಟಿ ಹೇಳಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಶು ಅಭಿವೃದ್ಧಿ ಯೋಜನೆ ಕುಂದಾಪುರ, ಆರೋಗ್ಯ ಇಲಾಖೆ, ಆಯುಷ್ ಇಲಾಖೆ, ಗ್ರಾಮ ಪಂಚಾಯತ್ ಕಿರಿಮಂಜೇಶ್ವರ ಹಾಗೂ ರೋಟರಿ ಕ್ಲಬ್ ಬೈಂದೂರು ಇವರ ಸಂಯುಕ್ತ ಆಶ್ರಯದಲ್ಲಿ ನಾಗೂರು ಶ್ರೀ ಗೋಪಾಲಕೃಷ್ಣ ಕಲಾ ಮಂದಿರ ಒಡೆಯರ ಮಠದಲ್ಲಿ ಜರಗಿದ ಪೋಷಣ್ ಮಾಸಾಚರಣೆ ಸಮಾರೋಪ ಸಮಾರಂಭ ಉದ್ಘಾಟಿಸಿ, ಗರ್ಭಿಣಿಯರಿಗೆ ಆಯುಷ್ ಕಿಟ್ ವಿತರಿಸಿ ಅವರು ಮಾತನಾಡಿದರು.
ಕಿರಿಮಂಜೇಶ್ವರ ಗ್ರಾಪಂ ಅಧ್ಯಕ್ಷೆ ಗೀತಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಬೈಂದೂರು ತಹಶೀಲ್ದಾರ್ ಶೋಭಾಲಕ್ಷ್ಮೀ ಶುಭಾಶಂಸನೆಗೈದರು. ಕಾಲ್ತೋಡು ಸರಕಾರಿ ಆಯುಷ್ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ವೀಣಾ ಕಾರಂತ್ ಅವರು ನಮ್ಮ ಸುತ್ತಮುತ್ತಲಿರುವ ಪೌಷ್ಠಿಕ ಆಹಾರಗಳ ಬಗ್ಗೆ ಮಾಹಿತಿ ನೀಡಿ ಗರ್ಭೀಣಿಯರಿಗೆ ಹಾಗೂ ಕಡಿಮೆ ತೂಕದ ಮಕ್ಕಳಿಗೆ ಆಯುಷ್ ಇಲಾಖೆಯಿಂದ ಕೊಡಮಾಡಿದ ಔಷಧಗಳ ಸೇವನೆಯ ಬಗ್ಗೆ ತಿಳಿಸಿದರು. ಬೈಂದೂರು ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಭಾರತಿ, ಕಿರಿಮಂಜೇಶ್ವರ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ನಿಶಾ, ಗ್ರಾಪಂ ಉಪಾಧ್ಯಕ್ಷ ಶೇಖರ ಖಾರ್ವಿ, ಪಿಡಿಒ ರಾಜೇಶ, ಬೈಂದೂರು ರೋಟರಿ ಕ್ಲಬ್ ಅಧ್ಯಕ್ಷ ಡಾ.ಪ್ರವೀಣ ಶೆಟ್ಟಿ, ಒಡೆಯರ ಮಠದ ಮಂಜುನಾಥ ಉಡುಪ, ಜಹೀರ್ ಅಹಮ್ಮದ್ ನಾಕುದಾ ಉಪಸ್ಥಿತರಿದ್ದರು.
ಡಾ.ವೀಣಾ ಕಾರಂತ ಸ್ವಾಗತಿಸಿದರು. ಹಿರಿಯ ಮೇಲ್ವಿಚಾರಕಿ ಭಾಗೀರಥಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಪ್ರಭಾವತಿ ಶೆಡ್ತಿ ಕಾರ್ಯಕ್ರಮ ನಿರ್ವಹಿಸಿದರು. ಪೋಷಣ್ ಅಭಿಯಾನ ಯೋಜನಾಧಿಕಾರಿ ಮಂಜುನಾಥ ವಂದಿಸಿದರು.