ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಭಾರತ ರತ್ನ ಪಂಡಿತ್ ಭೀಮಸೇನ್ ಜೋಶಿಯವರ ಜನ್ಮ ಶತಮಾನೋತ್ಸವವನ್ನು ಧಾರವಾಡದ ಜಿ.ಬಿ. ಜೋಶಿ ಮೆಮೋರಿಯಲ್ ಟ್ರಸ್ಟ್ ಹಾಗೂ ಕ್ಷಮತಾ ಹುಬ್ಬಳ್ಳಿ ಸಂಸ್ಥೆಯು ಜೊತೆಯಾಗಿ ಆಚರಿಸುತ್ತಿದ್ದು, ಇದರ ಅಂಗವಾಗಿ ಅ.17ರ ಸಂಜೆ 5:30ಕ್ಕೆ ಕುಂದಾಪುರದ ಭಂಡಾರ್ಕಾರ್ಸ್ ಕಾಲೇಜಿನ ಆರ್ ಎನ್ ಶೆಟ್ಟಿ ಸಭಾಂಗಣದಲ್ಲಿ ನಾಡಿನ ಪ್ರಖ್ಯಾತ ಕಲಾವಿದ ಪಂಡಿತ್ ಗಣಪತಿ ಭಟ್ಟ ಹಾಸಣಗಿಯವರ ಹಿಂದೂಸ್ತಾನಿ ಶಾಸ್ತ್ರೀಯ ಗಾಯನ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ಕಲಾವಿದ ಪಂಡಿತ್ ಗಣಪತಿ ಭಟ್ಟ ಹಾಸಣಗಿಯವರ ಹಿಂದೂಸ್ತಾನಿ ಶಾಸ್ತ್ರೀಯ ಗಾಯನಕ್ಕೆ ತಬಲಾದಲ್ಲಿ ಶ್ರೀಧರ ಮಾಂಡ್ರೆ ಮತ್ತು ಹಾರ್ಮೋನಿಯಂನಲ್ಲಿ ಗುರುಪ್ರಸಾದ ಹೆಗಡೆ ಸಾಥ್ ನೀಡಲಿದ್ದಾರೆ. ಖ್ಯಾತ ಗಾಯಕ, ವಿದ್ವಾನ್ ಸತೀಶ್ ಭಟ್ ಮಾಳಕೊಪ್ಪ ಅವರ ಇವರ ಹಿಂದೂಸ್ತಾನಿ ಶಾಸ್ತ್ರೀಯ ಗಾಯನ ಕೂಡ ಇದ್ದು, ಇವರಿಗೆ ಶ್ರೀ ಗುರುರಾಜ ಹೆಗಡೆ ಆಡುಕಳ ಮತ್ತು ಸತೀಶ ಹೆಗ್ಗಾರ ತಬಲಾ ಮತ್ತು ಹಾರ್ಮೋನಿಯಂ ಸಾಥ್ ನೀಡಲಿದ್ದಾರೆ.
ಕೇಂದ್ರ ಸರಕಾರದ ಸಂಸ್ಕೃತಿ ಇಲಾಖೆ, ಇನ್ಫೋಸಿಸ್ ಫೌಂಡೇಶನ್, ಭಾರತೀಯ ಜೀವ ವಿಮಾ ನಿಗಮ ಮತ್ತು ಎಲ್ಲೈಸಿ ಹೌಸಿಂಗ್ ಫೈನಾನ್ಸ್ ಲಿಮಿಟೆಡ್ ಸಂಸ್ಥೆಗಳ ಪ್ರಧಾನ ಪ್ರಾಯೋಜಕತ್ವದಲ್ಲಿ ಆಯೋಜಿಸಲಾಗಿರುವ ಕಾರ್ಯಕ್ರಮದಲ್ಲಿ ಸಂಗೀತಾಸಕ್ತರು ಮಾಸ್ಕ್ ಧರಿಸಿ, ಅಂತರ ಕಾಪಾಡಿಕೊಂಡು ಭಾಗವಹಿಸುವಂತೆ ಸ್ಥಳೀಯ ಆಯೋಜಕರಾದ ಗುರುಪರಂಪರಾ ಸಂಗೀತ ಸಭಾದ ವಿಶ್ವಸ್ಥರಾದ ಡಾ. ರೂಪಶ್ರೀ ಮರವಂತೆ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಾರ್ಯಕ್ರಮವು ಯುಟ್ಯೂಬ್ ಮೂಲಕ ನೇರಪ್ರಸಾರವಾಗಲಿದ್ದು https://www.youtube.com/vividlipi/live ಲಿಂಕ್ ಬಳಸಿ ಆಸಕ್ತರು ನೋಡಬಹುದಾಗಿದೆ.