ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೊಲ್ಲೂರು: ಜಡ್ಕಲ್ ಬೀಸಿನಪಾರೆಯ ಮೂಕಾಂಬಿಕಾ ಪ್ರೌಢಶಾಲೆಯುಲ್ಲಿ ಜಿಲ್ಲಾಧಿಕಾರಿಗಳ ನಡೆ ಗ್ರಾಮದ ಕಡೆ ಅಭಿಯಾನದಲ್ಲಿ ಸಾರ್ವಜನಿಕರ ಅಹವಾಲು ಸ್ವೀಕರಿಸಿ ನಮ್ಮ ಬಳಿ ಆಗೋದನ್ನ ನಾವೇ ಪರಿಹರಿಸುತ್ತೇವೆ, ಸಾಧ್ಯವಾಗದಿದ್ದರೆ ಸರಕಾರಕ್ಕೆ ಬರೆಯುತ್ತೇವೆ ಎಂದು ಉಡುಪಿ ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ ಹೇಳಿದರು.
ಗ್ರಾಮದಲ್ಲಿ ಅಧಿಕಾರಿಗಳು ಹಾಗೂ ಅಹವಾಲುದಾರರಿಗೆ ಮನವಿ, ಸ್ಪಷ್ಟನೆಯ ಬಳಿಕ ಪ್ರತಿಕ್ರಿಯಿಸಿದ ಅವರು ವಿಕಲಚೇತನರ ಬಸ್‌ಪಾಸ್ ರಾಜ್ಯ ಹಾಗೂ ಖಾಸಗಿ ಬಸ್‌ಗಳಿಗೂ ವಿಸ್ತರಣೆ, ಅಂಗನವಾಡಿ ತೆರೆಯಲು ಅವಕಾಶವಿದ್ದರೆ ಸರಕಾರದ ಗಮನಕ್ಕೆ, ಜಡ್ಕಲ್ ಗ್ರಾಮದಲ್ಲಿ ಸ್ಮಶಾನಕ್ಕೆ ಸರಕಾರಿ ಜಾಗ ಗುರುತಿಸಿದ್ದು ಗಡಿ ಗುರುತು ಮಾಡಲು ತಹಶಿಲ್ದಾರರಿಗೆ ಸೂಚನೆ, ನ್ಯಾಯಾಲದಲ್ಲಿರುವ ಜಾಗದ ವ್ಯಾಜ್ಯಗಳಿಗೆ ಅಭಿಯಾನದಲ್ಲಿ ಪರಿಹಾರ ನೀಡಲು ಸಾಧ್ಯವಿಲ್ಲ ಎಂದರು.
ವಿಕಲಚೇತನ ರಾಜು ಪೂಜಾರಿ ಅವರ ಬಸ್ ಪಾಸ್ ಕಿ.ಮೀ ವ್ಯಾಪ್ತಿ ವಿಸ್ತರಣೆ ಹಾಗೂ ಖಾಸಗಿ ಬಸ್ಸಿನಲ್ಲಿ ಕೂಡ ವಿಕಲಚೇತನರಿಗೆ ಬಸ್ ಪಾಸ್ ನೀಡಬೇಕು ಹಾಗೂ ಎಪಿಎಲ್ ಕಾರ್ಡುದಾರರಿಗೂ ಪಿಂಚಣಿ ದೊರೆಯಬೇಕು ಎಂಬ ಬೇಡಿಕೆಯ ಬಗ್ಗೆ ಪ್ರತಿಕ್ರಿಯೆ ನೀಡಿದ ಜಿಲ್ಲಾಧಿಕಾರಿ, ಕೆಎಸ್‌ಆರ್‌ಟಿಸಿ ಪಾಸ್ ಬಗ್ಗೆ ಸರಕಾರದ ಗಮನಕ್ಕೆ ತರಲಾಗುವುದು, ಖಾಸಗಿ ಬಸ್ ಪಾಸ್ ಬಗ್ಗೆ ಆರ್‌ಟಿಓ ಸಭೆಯಲ್ಲಿ ಚರ್ಚಿಸಲಾಗುವುದು ಎಂದರು. ಕುಂದಾಪ್ರ ಡಾಟ್ ಕಾಂ ಸುದ್ದಿ.
ಮೆಕ್ಕೆಯಲ್ಲಿ ಅಂಗನವಾಡಿ ಕೇಂದ್ರಕ್ಕೆ ಸಾರ್ವಜನಿಕರು ಬೇಡಿಕೆ ಇಟ್ಟಿದ್ದು, ಸಮಾಜಕಲ್ಯಾಣ ಇಲಾಖೆಯ ಅಧಿಕಾರಿಗಳನ್ನು ಉದ್ದೇಶಿಸಿ ಅಂಗನವಾಡಿ ಆರಂಭಿಸಲು ಸಾಧ್ಯವಿದ್ದರೆ ಗಮನಕ್ಕೆ ತನ್ನಿ ಸರಕಾರಕ್ಕೆ ಮಾಹಿತಿ ನೀಡುತ್ತೇವೆ. ಆಗದಿದ್ದರೆ ಹಿಂಬರಹ ನೀಡಿ. ಮಿನಿ ಅಂಗನವಾಡಿ ತೆರೆಯಲು ಅವಕಾಶ ಮಾಡಿಕೊಡಿ ಎಂದು ಸೂಚಿಸಿದರು.
ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಸ್ಮಶಾನಕ್ಕಾಗಿ ಸರಕಾರಿ ಜಾಗ ಗುರುತಿಸುವಂತೆ ಪಂಚಾಯತ್ ಅಧ್ಯಕ್ಷರ ವಿನಂತಿಗೆ, ಡಿಸಿ ಅವರು ಸ್ಥಳದಲ್ಲಿದ್ದ ವಿಎ ಅವರನ್ನು ಕರೆದು ಸರಕಾರಿ ಜಾಗದ ಮಾಹಿತಿ ಪಡೆದು ಮುದೂರು ಮತ್ತು ಜಡ್ಕಲ್‌ನಲ್ಲಿ ತಲಾ ಒಂದು ಎಕರೆ ಜಾಗ ಮೀಸಲಿಸಿರುವ ಬಗ್ಗೆ ಮಾಹಿತಿ ಪಡೆದರು. ಇದಕ್ಕೆ ತಕ್ಷಣ ಸ್ಥಳಗುರುತು ಮಾಡಲು ಆದೇಶಿಸುವಂತೆ ತಹಶೀಲ್ದಾರರಿಗೆ ಸೂಚಿಸಿದರು.
ಮೂದೂರಿನಲ್ಲಿರುವ ಆರೋಗ್ಯ ಕೇಂದ್ರದಲ್ಲಿ ಸಿಬ್ಬಂದಿ ಇಲ್ಲದಿರುವುದರಿಂದ ಸಾರ್ವಜನಿಕರಿಗೆ ಸಮಸ್ಯೆಯಾಗುತ್ತಿದೆ ಎಂಬ ಸಾರ್ವಜನಿಕರ ಅಹವಾಲಿಗೆ ಇಲ್ಲಿಗೆ ಸಿಬ್ಬಂದಿಗಳು ಬರಲು ತಯಾರಿಲ್ಲ. ಯಾರಾದರೂ ಸ್ಟಾಫ್‌ನರ್ಸ್ ಇಲ್ಲಿ ಕರ್ತವ್ಯ ನಿರ್ವಹಿಸಲು ಆಸಕ್ತರಿರುವುದು ಗಮನಕ್ಕೆ ತಂದರೆ ಕೂಡಲೇ ಇಲ್ಲಿಗೆ ವರ್ಗಾಯಿಸಿಕೊಡಲಾಗುವುದು ಎಂದರು.
ಲೋ-ಓಲ್ಟೇಜ್, ಕೊರೋನಾ ವ್ಯಾಕ್ಸಿನ್, 94ಸಿ, ಅಕ್ರಮ ಸಕ್ರಮ, ಕಾಡುಪ್ರಾಣಿಗಳ ಹಾವಳಿ, ಜಾಗದ ದಾಖಲಾತಿಯ ವಿಚಾರಗಳು ಸಭೆಯಲ್ಲಿ ಚರ್ಚೆಗೆ ಬಂದವು. ಕುಂದಾಪ್ರ ಡಾಟ್ ಕಾಂ ಸುದ್ದಿ.
ಡಿಸಿಗೆ ಅದ್ದೂರಿ ಸ್ವಾಗತ:
ಜಡ್ಕಲ್ ಗ್ರಾಪಂಗೆ ಬೆಳಿಗ್ಗೆ 10ಗಂಟೆಗೆ ಆಗಮಿಸಿದ ಜಿಲ್ಲಾಧಿಕಾರಿಗಳಿಗೆ ಗ್ರಾಮದ ಮಹಿಳೆಯರು ಪುಪ್ಪವೃಷ್ಟಿಯ ಮೂಲಕ ಸ್ವಾಗತಿಸಿದರು. ಜಡ್ಕಲ್ ಗ್ರಾಪಂ ಅಧ್ಯಕ್ಷೆ ವನಜಾಕ್ಷಿ ಶೆಟ್ಟಿ ಡಿಸಿ ಅವರನ್ನು ಬರಮಾಡಿಕೊಂಡರು. ಗ್ರಾಪಂನಲ್ಲಿ ಕೆಲ ಸಮಸ್ಯೆ ಕಳೆದ ಡಿಸಿ ಜಡ್ಕಲ್ ಹಾಗೂ ಮುದೂರು ಗ್ರಾಮದ ಬಗ್ಗೆ ಹಾಗೂ ಅಲ್ಲಿನ ಸಮಸ್ಯೆಗಳ ಬಗ್ಗೆ ಮಾಹಿತಿ ಪಡೆದುಕೊಂಡರು.
ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು, ಕುಂದಾಪುರ ಉಪವಿಭಾಗಾಧಿಕಾರಿ ರಾಜು ಕೆ., ಬೈಂದೂರು ತಹಶಿಲ್ದಾರ್ ಶೋಭಾಲಕ್ಷ್ಮೀ ಎಚ್. ಎಸ್., ಬೈಂದೂರು ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಭಾರತಿ, ಜಡ್ಕಲ್ ಗ್ರಾಪಂ ಅಧ್ಯಕ್ಷೆ ವನಜಾಕ್ಷಿ ಶೆಟ್ಟಿ, ಉಪಾಧ್ಯಕ್ಷ ಲಕ್ಷ್ಮಣ ಶೆಟ್ಟಿ, ಇನ್ನಿತರರು ಉಪಸ್ಥಿತರಿದ್ದರು.
ಇದನ್ನೂ ಓದಿ:
► ಗ್ರಾಮೀಣ ಜನರ ಸಮಸ್ಯೆ ನೇರವಾಗಿ ಆಲಿಸಿ ಪರಿಹರಿಸಲು ಜಿಲ್ಲಾಧಿಕಾರಿ ನಡೆ ಹಳ್ಳಿಯ ಕಡೆ ಅಭಿಯಾನ – ಉಡುಪಿ ಡಿಸಿ – https://kundapraa.com/?p=53666 .