ಕುಂದಾಪ್ರ ಡಾಟ್ ಕಾಂ ವರದಿ.
ಕುಂದಾಪುರ: ಮಲ್ಯಾಡಿಯ ರಸ್ತೆಗಳಲ್ಲಿ ನಾಲ್ಕು ದಶಕಗಳ ಕಾಲ ಸಂಚರಿಸಿ, ಶೆಡ್ ಸೇರಿದ್ದ ಲಾರಿಯೊಂದು ಇದೀಗ ಧರ್ಮಸ್ಥಳದ ವಸ್ತು ಸಂಗ್ರಹಾಲಯವನ್ನು ಅಲಂಕರಿಸಿದೆ. ಮಂಜೂಷಾ ಮ್ಯೂಸಿಯಂಗೆ ಭೇಟಿ ನೀಡುವವರಿಗೆ ಇನ್ನು ತೆಕ್ಕಟ್ಟೆ ಗ್ರಾಮದ ಮಲ್ಯಾಡಿಯ ಶ್ರೀ ಮಹಾದೇವಿ ಪ್ರಸಾದ ಹೆಸರಿನ ಲಾರಿಯೂ ಕಾಣಸಿಗಲಿದೆ.
ಕುಂದಾಪುರ ಭೂ ಅಭಿವೃದ್ಧಿ ಬ್ಯಾಂಕ್ ಅಧ್ಯಕ್ಷ, ಉದ್ಯಮಿಯೂ ಆಗಿರುವ ಮಲ್ಯಾಡಿ ಶಿವರಾಮ ಶೆಟ್ಟಿ ಅವರು 1973ರ 12 10ಡಿ (ಟ್ವೆಲ್ ಟೆನ್ ಡಿ) ಮಾಡಲ್ ಲಾರಿಯನ್ನು ಕುಂದಾಪುರದ ಸಿಲ್ವೆಸ್ಟರ್ ಅಲ್ಮೆಡಾ ಅವರಿಂದ 1976ರಲ್ಲಿ ಖರೀಸಿದ್ದರು. ಮುಂದೆ 36 ವರ್ಷಗಳ ಕಾಲ ನಿರಂತರ ದುಡಿದ ಲಾರಿಯ ಸ್ಪೇರ್‌ಪಾರ್ಟ್ಸ್ ಸಿಗದ ಕಾರಣ ಶಿವರಾಮ ಶೆಟ್ಟಿ ಅವರು ಮನೆ ಮುಂದೆ ಶೆಡ್ ಮಾಡಿ ನಿಲ್ಲಿಸಿದ್ದರು.
ಕೆಲ ಸಮಯದ ಹಿಂದೆ ಶಿವರಾಮ ಶೆಟ್ಟರ ಮನೆಯಲ್ಲಿ ಧರ್ಮಸ್ಥಳ ಮೇಳದ ಸೇವೆಯಾಟಕ್ಕಾಗಿ ಬಂದಿದ್ದ ಮೇಳದ ಮ್ಯಾನೇಜರ್ ಈ ಲಾರಿಯನ್ನು ಕಂಡು ಲಾರಿ ಪೋಟೋವನ್ನು ಧರ್ಮಸ್ಥಳ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಅವರಿಗೆ ಕಳುಹಿಸಿ ಮಾಹಿತಿ ನೀಡಿದ್ದರು. ಹಳೆ ವಸ್ತುಗಳು, ವಾಹನಗಳ ಬಗ್ಗೆ ವಿಶೇಷ ಆಸಕ್ತಿ ಹೊಂದಿರುವ ಹೆಗ್ಗಡೆಯವರು ವಸ್ತು ಸಂಗ್ರಹಾಲಯಕ್ಕೆ ತರಲು ಸೂಚಿಸಿದರು.
ಎರಡು ದಿನಗಳ ಹಿಂದೆ ಮಲ್ಯಾಡಿ ಶಿವರಾಮ ಶೆಟ್ಟಿ ಅವರು ಧರ್ಮಸ್ಥಳ ಕ್ಷೇತ್ರಕ್ಕೆ ಲಾರಿ ನೀಡುವುದು ಭಾಗ್ಯ ಎಂದು ಭಾವಿಸಿ ಲಾರಿಯನ್ನು ಮತ್ತೆ ಸಂಚಾರಕ್ಕೆ ಸಜ್ಜುಗೊಳಿಸಿ, ತಾವೇ ಲಾರಿಯಲ್ಲಿ ತೆರಳಿ ಸೋಮವಾರ ಡಾ. ವಿರೇಂದ್ರ ಹೆಗ್ಗಡೆ ಅವರ ಭೇಟಿ ಮಾಡಿ ಹಸ್ತಾಂತರ ಮಾಡಿದ್ದಾರೆ. ಲಾರಿ ಸುಸ್ಥಿತಿಯಲ್ಲಿರುವುದನ್ನು ಕಂಡು ಹೆಗ್ಗಡೆಯವರೂ ಖುಷಿಪಟ್ಟಿದ್ದಾರೆ.
ನಲವತ್ತು ವರ್ಷಗಳ ಕಾಲ ಲಾರಿ ನನ್ನ ಒಡನಾಡಿಯಾಗಿತ್ತು. ಸ್ಪೇರ್‌ಪಾರ್ಟ್ ಸಿಗದ ಕಾರಣ ಶೆಡ್ ನಿರ್ಮಿಸಿ ನಿಲ್ಲಿಸಲಾಗಿತ್ತು. ಧರ್ಮಸ್ಥಳದ ವಸ್ತು ಸಂಗ್ರಹಾಲಯಕ್ಕೆ ಕೊಂಡೊಯ್ಯುವ ಸಲುವಾಗಿ ಲಾರಿಯನ್ನು ಮತ್ತೆ ಅಣಿಗೊಳಿಸಿ ಕೊಂಡೊಯ್ದೆವು. ಆರೇಳು ವರ್ಷದಿಂದ ನಿಂತಿದ್ದ ಲಾರಿ ಒಮ್ಮೆಲೇ ಸ್ಟಾರ್ಟ್ ಆಯಿತು. ಹೆಗ್ಗಡೆಯವರೇ ಲಾರಿ ನೋಡಲು ಬರುವುದಾಗಿ ತಿಳಿಸಿದ್ದರು. ನಾವೇ ಸಿದ್ಧಗೊಳಿಸಿ ತರುವುದಾಗಿ ತಿಳಿಸಿ ಅದರಂತೆ ಕೊಂಡೊಯ್ದಿದ್ದೇವೆ. ನಾಲ್ಕು ಗಂಟೆಯಲ್ಲಿ ಮಲ್ಯಾಡಿಯಿಂದ ಧರ್ಮಸ್ಥಳ ತಲುಪಿದ್ದೇವೆ. ಧರ್ಮಸ್ಥಳದಲ್ಲಿ ಖಾವಂದರು ಕೂಡ ಲಾರಿಯನ್ನು ನೋಡಿ ಖುಷಿಪಟ್ಟರು. ಮಂಜೂಷಾ ವಸ್ತು ಸಂಗ್ರಹಾಲಯ ಸೇರಿರುವ ಬಗ್ಗೆ ಖುಷಿಯಿದೆ – ಮಲ್ಯಾಡಿ ಶಿವರಾಮ ಶೆಟ್ಟಿ ಉದ್ಯಮಿ

