ಕುಂದಾಪ್ರ ಡಾಟ್ ಕಾಂ ಸುದ್ದಿ.
ಗಂಗೊಳ್ಳಿ: ಕರ್ನಾಟಕ ರಾಜ್ಯದಲ್ಲಿರುವ ಎಲ್ಲಾ ಗ್ರಾಮ ಪಂಚಾಯತ್‌ನ ಸದಸ್ಯರಿಗೆ ಪ್ರಥಮ ಬಾರಿಗೆ ಗೌರವ ಧನವನ್ನು ಮಂಜೂರು ಮಾಡಿಸಿದ್ದ ಸಚಿವ, ವಿಧಾನ ಪರಿಷತ್ ಸದಸ್ಯರಾದ ಕೋಟ ಶ್ರೀನಿವಾಸ ಪೂಜಾರಿಯವರು ವಿಧಾನ ಪರಿ?ತ್‌ನಲ್ಲಿ ಸಭಾ ನಾಯಕರಾಗಿ 1,000 ರೂ. ಇದ್ದ ಗೌರವ ಧನವನ್ನು 2,000ರೂ.ಗೆ ಹೆಚ್ಚಿಸುವುದಾಗಿ ಭರವಸೆಯನ್ನೂ ನೀಡಿದ್ದಾರೆ. ಇತಿಹಾಸದಲ್ಲಿ ಪಂಚಾಯತ್ ರಾಜ್ ವ್ಯವಸ್ಥೆ ಸಬಲೀಕರಣಕ್ಕೆ ಗ್ರಾಮ ಪಂಚಾಯತ್‌ಗಳು ಸರಕಾರದಂತೆ ಕೆಲಸವನ್ನು ಮಾಡಬೇಕೆನ್ನುವ ಕಲ್ಪನೆಯನ್ನು ನೀಡಿ ನಿರಂತರವಾಗಿ ಗ್ರಾಮ ಪಂಚಾಯತ್ ಮತ್ತು ಪಂಚಾಯತ್ ರಾಜ್ ಅಭಿವೃದ್ಧಿಗೋಸ್ಕರ ದುಡಿದಿರುವ ಕೋಟ ಶ್ರೀನಿವಾಸ ಪೂಜಾರಿ ಎಲ್ಲರೂ ಒಟ್ಟಾಗಿ ಒಂದಾಗಿ ಪೂರ್ಣ ಬಹುಮತದಿಂದ ಅವರನ್ನು ಗೆಲ್ಲಿಸಬೇಕು ಎಂದು ಬೈಂದೂರು ಶಾಸಕ ಬಿ.ಎಂ.ಸುಕುಮಾರ್ ಶೆಟ್ಟಿ ಹೇಳಿದರು.
ಅವರು ತ್ರಾಸಿಯ ಶ್ರೀ ಮಹಾಗಣಪತಿ ಸಭಾಭವನದಲ್ಲಿ ಬಿಜೆಪಿ ಬೈಂದೂರು ಮಂಡಲ ವತಿಯಿಂದ ಸೋಮವಾರ ಜರಗಿದ ಬಿಜೆಪಿ ಗಂಗೊಳ್ಳಿ ಮಹಾಶಕ್ತಿ ಕೇಂದ್ರ ವ್ಯಾಪ್ತಿಯ ಗ್ರಾಮ ಪಂಚಾಯತ್ ಸದಸ್ಯರ ಚುನಾವಣಾ ಪೂರ್ವಸಿದ್ಧತಾ ಸಭೆಯನ್ನುದ್ದೇಶಿಸಿ ಮಾತನಾಡಿದರು.
ವಿಧಾನ ಪರಿಷತ್ ಚುನಾವಣಾ ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿಯವರು ಮಾತನಾಡಿ ನನ್ನ ಮಿತಿಯೊಳಗೆ 13 ವರ್ಷಗಳಿಂದ ನಿರಂತರವಾಗಿ ಗ್ರಾಮ ಪಂಚಾಯತ್ ಸದಸ್ಯರ ಸಹಿತ ಇತರ ಸ್ಥಳೀಯಾಡಳಿತ ಸಂಸ್ಥೆಗಳ ಪ್ರತಿನಿಧಿಗಳ ಪರವಾಗಿ ಕೆಲಸಗಳನ್ನು ಮಾಡಿದ್ದೇನೆ ಎಂಬ ವಿಶ್ವಾಸವಿದೆ. ಬಿಜೆಪಿಯಿಂದ ನಾನೊಬ್ಬನೇ ಅಭ್ಯರ್ಥಿಯಾಗಿದ್ದು, 1 ಅಂಕೆಯನ್ನು ಮಾತ್ರ ಬರೆಯುವ ಮೂಲಕ ಒಂದೇ ಮತವನ್ನು ಚಲಾಯಿಸಿ ಪಂಚಾಯತ್ ರಾಜ್ ಸಬಲೀಕರಣಕ್ಕಾಗಿ ನನ್ನನ್ನು ಮತ್ತೊಮ್ಮೆ ಆಯ್ಕೆ ಮಾಡಬೇಕೆಂದು ಮನವಿ ಮಾಡುತ್ತೇನೆ ಎಂದರು.
ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ರವರು ಮಾತನಾಡಿ, ಡಿ.10ರಂದು ನಡೆಯಲಿರುವ ವಿಧಾನ ಪರಿ?ತ್ ಚುನಾವಣೆಯಲ್ಲಿ ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯತ್ ಸದಸ್ಯರು, ಅತ್ಯಂತ ಜಾಗರೂಕರಾಗಿ, ಪಂಚಾಯತ್ ರಾಜ್ ವ್ಯವಸ್ಥೆಯಲ್ಲಿ ಅಪಾರ ಅನುಭವ ಹೊಂದಿರುವ ಬಿಜೆಪಿಯ ಏಕೈಕ ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿಯವರಿಗೆ ಮಾತ್ರ ಪ್ರಥಮ ಪ್ರಾಶಸ್ತ್ಯದ ಮತವನ್ನು ನೀಡಿ ಅವರನ್ನು ಅತ್ಯಂತ ಹೆಚ್ಚಿನ ಮತಗಳ ಅಂತರದಿಂದ ಗೆಲ್ಲಿಸಬೇಕು ಎಂದರು.
ಬಿಜೆಪಿ ಬೈಂದೂರು ಮಂಡಲ ಅಧ್ಯಕ್ಷ ದೀಪಕಕುಮಾರ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಬಿಜೆಪಿ ವಿಭಾಗೀಯ ಪ್ರಭಾರಿ ಉದಯಕುಮಾರ್ ಶೆಟ್ಟಿ, ಬೈಂದೂರು ಬಿಜೆಪಿ ಪ್ರಭಾರಿ ಕಿಶೋರ್ ಕುಮಾರ್ ಕುಂದಾಪುರ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಆನಂದ ಖಾರ್ವಿ, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಕುತ್ಯಾರು ನವೀನ್ ಶೆಟ್ಟಿ, ಸದಾನಂದ ಉಪ್ಪಿನಕುದ್ರು, ಬಿಜೆಪಿ ಮುಖಂಡ ಪ್ರವೀಣ ಶೆಟ್ಟಿ ಗುರ್ಮೆ, ಬಿಜೆಪಿ ಬೈಂದೂರು ಮಂಡಲ ಉಪಾಧ್ಯಕ್ಷ ವಿನೋದ ಭಂಡಾರಿ, ಗಂಗೊಳ್ಳಿ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ರವಿ ಶೆಟ್ಟಿಗಾರ್, ಪಕ್ಷದ ಪ್ರಮುಖರು, ಗ್ರಾಪಂ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.
ಬೈಂದೂರು ಬಿಜೆಪಿ ಪ್ರಧಾನ ಕಾರ್ಯದರ್ಶಿ ಪ್ರಿಯದರ್ಶಿನಿ ದೇವಾಡಿಗ ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು. ಕಾರ್ಯದರ್ಶಿ ಪ್ರಕಾಶ ಪೂಜಾರಿ ಜೆಡ್ಡು ವಂದಿಸಿದರು.