ಕುಂದಾಪ್ರ ಡಾಟ್ ಕಾಂ ಸುದ್ದಿ
ಕುಂದಾಪುರ: ಸಮಾಜವನ್ನು ಜೋಡಿಸುವ ಕಾರ್ಯ ಇಂದಿನ ಜರೂರಾಗಿದೆ. ಬಣ್ಣ, ಕಲಾಪ್ರಪಂಚ, ಕ್ರೀಡೆಯಲ್ಲಿ ಯಾವುದೇ ಪರಿಬೇಧಗಳಿಲ್ಲದ ಸಮಾಜ ಒಗ್ಗೂಡಿಸುವ ತಾಕತ್ತಿದೆ. ಸಣ್ಣ ಗೆರೆಗಳ ಕಾರ್ಟೂನಿಗೂ ಸಮಾಜ ತಿದ್ದುವ ಅಪಾರವಾದ ಶಕ್ತಿಯಿದೆ ಎಂದು ಚಿತ್ರ ನಟ ಡಾಲಿ ಧನಂಜಯ ಹೇಳಿದರು.
ಅವರು ಕುಂದಾಪುರದ ಅಥರ್ವ ಕಾಂಪ್ಲೆಕ್ಸ್‌ನಲ್ಲಿ ಶುಕ್ರವಾರ ‘ಭಾರತ ಮುಂದಿನ 75 ವರ್ಷಗಳು ಥೀಮ್‌ನೊಂದಿಗೆ ನಡೆಯುತ್ತಿರುವ ಮೂರು ದಿನಗಳ ಕಾರ್ಟೂನ್ ಹಬ್ಬ ಉದ್ಘಾಟಿಸಿ ಮಾತನಾಡಿ ಕಲಾವಿದ ಸ್ವತಂತ್ರವಾಗಿ ತನ್ನ ಕಲ್ಪನೆಯಲ್ಲಿ ಸಮಾಜದ ಆಗುಹೋಗುಗಳನ್ನು ಚಿತ್ರಿಸಿದರೆ, ಅಭಿನಯದಲ್ಲಿ ಬೇರೆ ಬೇರೆ ಮಜಗಳ ಮೂಲಕ ಅಭಿವ್ಯಕ್ತಿ ಸಾಧ್ಯ. ಯಾವುದೇ ಕಲಾವಿದರಾದರೂ ಅವರಲ್ಲಿ ಸಮಾಜಕ್ಕೆ ಉತ್ತಮ ಸಂದೇಶ ನೀಡುವ ಶಕ್ತಿಯಿದೆ ಎಂದರು.
ಕಲಾವಿದ ಬಾದಲ್ ನಂಜುಂಡ ಸ್ವಾಮಿ ರಚಿಸಿದ ಪುನೀತ್ ರಾಜಕುಮಾರ್ ಚಿತ್ರಕ್ಕೆ ಸಹಿ ಹಾಕುವ ಮೂಲಕ ಡಾಲಿ ಧನಂಜಯ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಸಂಸದ, ಲೇಖಕ ಶಶಿ ತರೂರು, ಖ್ಯಾತ ವಕೀಲ ಪ್ರಶಾಂತ್ ಭೂಷಣ್ ಅವರು ವೀಡಿಯೋ ಸಂದೇಶ ನೀಡಿದರು.
ಕಾರ್ಯಕ್ರಮದಲ್ಲಿ ಹಿರಿಯ ಸಾಹಿತಿ ಎಎಸ್‌ಎನ್ ಹೆಬ್ಬಾರ್, ವಕೀಲ ಕಾಂಗ್ರೆಸ್ ನಾಯಕ ಸುಧೀರ್ ಕುಮಾರ್ ಮುರೋಳಿ, ಸಂಘಟಕ ಬಿಜೆಪಿ ನಾಯಕ ಕಿಶೋರ್ ಕುಮಾರ್ ಕುಂದಾಪುರ ಉಪಸ್ಥಿತರಿದ್ದರು.
ಉಪನ್ಯಾಸಕ ಪ್ರದೀಪ್ ಶೆಟ್ಟಿ ಕೆಂಚನೂರು ಕಾರ್ಯಕ್ರಮ ನಿರೂಪಿಸಿದರು. ಕಾರ್ಟೂನಿಸ್ಟ್ ಸತೀಶ್ ಆಚಾರ್ಯ ಸ್ವಾಗತಿಸಿದರು, ಅತಿಥಿಗಳನ್ನು ಗೌರವಿಸಿದರು.