ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೋಟ: ಲೇಖಕನಾದವನು ಸದಾ ಸೃಜನಶೀಲತೆಯೊಂದಿಗೆ ಓದುಗರಿಗೆ ನವನವೀನ ವಿಚಾರಗಳು ತಿಳಿಸುತ್ತಿರಬೇಕು. ಸಾಮಾನ್ಯವಾಗಿ ಸುದೀರ್ಘವಾಗಿರುವ ಪುಸ್ತಕದ ಓದು ಜ್ಞಾನಶೀಲ ಮಾತ್ರವಲ್ಲ ಪರಿವರ್ತನಾಶೀಲವೂ ಆಗಿರಬೇಕು. ಹೀಗಿನ ಆಶಯಕ್ಕೆ ಪೂರಕವಾಗಿ ಮನಲೋಕದಲ್ಲಿ ಪ್ರಕಟವಾಗಿರುವ ಎಲ್ಲ ಲೇಖನಗಳು ಇತಿಹಾಸದ ರೋಚಕ ಮಾಹಿತಿಗಳು ಮತ್ತು ವರ್ತಮಾನದ ವಾಸ್ತವಗಳಿಂದ ಕೂಡಿದೆ ಎಂದು ಮಂಗಳೂರಿನ ಹಿರಿಯ ಲೇಖಕಿ-ಸಂಶೋಧಕಿ ರೋಹಿಣಿ ಬಿ ಎಮ್ ಹೇಳಿದರು
ಅವರು ಗಾಂಧಿ ವಿಚಾರ ವೇದಿಕೆ ಬ್ರಹ್ಮಾವರ ಘಟಕ ಹಾಗೂ ಮಿತ್ರ ಮಂಡಳಿ ಕೋಟ ಸಹಯೋಗದೊಂದಿಗೆ ಕೋಟ ಕನ್ನಡ ಸಾಹಿತ್ಯ ಪರಿಷತ್ತಿನ ಕಛೇರಿಯಲ್ಲಿ ಭಾನುವಾರ ಆಯೋಜಿಸಲಾದ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಮುಷ್ತಾಕ್ ಹೆನ್ನಾಬೈಲ್ ರವರ “ಮನಲೋಕ” ಕೃತಿಯನ್ನು ಬಿಡುಗಡೆ ಮಾಡಿ ಮಾತನಾಡಿ ಸಾಹಿತ್ಯಲೋಕದಲ್ಲಿ ದಿನದಿಂದ ದಿನಕ್ಕೆ ಓದುಗರ ಪ್ರೀತಿಗೆ ಪಾತ್ರರಾಗುತ್ತಿರುವ ವಿಶಿಷ್ಟ ಶೈಲಿಯ ಲೇಖಕ ಮುಷ್ತಾಕ್ ಹೆನ್ನಾಬೈಲರ ಭಾಷೆ, ವಿಚಾರ, ವಿವೇಕವು ಮುಂಬರುವ ದಿನಗಳಲ್ಲಿ ಕನ್ನಡದ ಸಮಸ್ತ ಓದುಗರಿಗೆ ಸದಾಕಾಲ ರೋಮಾಂಚಕ ಮೂಡಿಸುವುದು ನಿಶ್ಚಿತ. ಅವರೊಬ್ಬ ನಾನು ಕಂಡ ಅದ್ಭುತ ಅಧ್ಯಯನಶೀಲ ಪರಿಪೂರ್ಣ ಲೇಖಕ ಎಂದರು.
ಗಾಂಧಿ ವಿಚಾರ ವೇದಿಕೆಯ ಬ್ರಹ್ಮಾವರ ಘಟಕವನ್ನು ಗಾಂಧಿ ವಿಚಾರ ವೇದಿಕೆಯ ಮಾತೃ ಸಮಿತಿಯ ಅಧ್ಯಕ್ಷ ಶ್ರೀಧರ ಭಿಡೆ ಉದ್ಘಾಟಿಸಿದರು. ಲೇಖಕ ಸೋಮಪ್ರಕಾಶ್ ಆರ್ಯರವರ ಮಂಟೆಸ್ವಾಮಿ ಮಹಾಕಾವ್ಯ ಕೃತಿಯನ್ನು ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ನಿವೃತ್ತ ಕುಲಪತಿ ಡಾ. ಚಿನ್ನಪ್ಪ ಗೌಡ ಬಿಡುಗಡೆಗೊಳಿಸಿದರು. ಕಾರ್ಯಕ್ರಮದಲ್ಲಿ ಸಾಹಿತ್ಯ ಪರಿಷತ್ ವತಿಯಿಂದ ಲೇಖಕರನ್ನು ಸಮ್ಮಾನಿಸಲಾಯಿತು. ಉಡುಪಿ ಜಲ್ಲಾ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗರು ಸಭೆಯ ಅಧ್ಯಕ್ಷತೆಯನ್ನು ವಹಿಸಿದರು.
ಮಹಾಲಕ್ಷ್ಮಿ ಸೋಮಯಾಜಿ ಪ್ರಾರ್ಥಿಸಿದರು. ಲೇಖಕ ಅರವಿಂದ ಚೊಕ್ಕಾಡಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸುಜಯೀಂದ್ರ ಹಂದೆ ಧನ್ಯವಾದಗೈದರು. ಶ್ರೀಪತಿ ಹೇರ್ಳೆ ನಿರೂಪಿಸಿದರು.