ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ/ಬೈಂದೂರು: ಕೋವಿಡ್ – ಓಮಿಕ್ರಾನ್ ನಿಯಂತ್ರಿಸುವ ನಿಟ್ಟಿನಲ್ಲಿ ರಾಜ್ಯ ಸರಕಾರ ಜಾರಿಗೊಳಿಸಿದ ವೀಕೆಂಡ್ ಕರ್ಪ್ಯೂಗೆ ಶನಿವಾರ ಕುಂದಾಪುರ ಹಾಗೂ ಬೈಂದೂರು ತಾಲೂಕಿನಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ನಗರ ಪ್ರದೇಶಗಳಲ್ಲಿ ಅಗತ್ಯ ವಸ್ತುಗಳ ಸೇವೆಯನ್ನು ಹೊರತುಪಡಿಸಿ ಬಹುಪಾಲು ಅಂಗಡಿ ಮುಂಗಟ್ಟುಗಳು ಬಂದ್ ಆಗಿದ್ದವು. ಜನಸಂಚಾರವೂ ವಿರಳವಾಗಿತ್ತು. ಗ್ರಾಮೀಣ ಭಾಗದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಜನಸಂಚಾರ ವಿರಳವಾಗಿದ್ದರೂ, ನಿಗದಿತ ಕಾರ್ಯಕ್ರಮಗಳು ನಡೆದವು. ಅಂಗಡಿಗಳನ್ನು ಅರ್ಧ ತೆರೆದು ವ್ಯವಹಾರ ನಡೆಸುತ್ತಿರುವುದು ಸಹಜವಾಗಿತ್ತು.
ಕುಂದಾಪುರದ ನಗರದಲ್ಲಿ ವಿರಳ ಬಸ್ ಸಂಚಾರವಿದ್ದರೂ, ಪ್ರಯಾಣಿಕರು ಹೆಚ್ಚಿನ ಸಂಖ್ಯೆಯಲ್ಲಿ ಕಂಡು ಬರಲಿಲ್ಲ. ಅಂಗಡಿ ಮುಂಗಟ್ಟು ತರೆದಿದ್ದರೂ ಗ್ರಾಹಕರ ಇರಲಿಲ್ಲ. ಶನಿವಾರ ಸಂತೆ ರದ್ದಾಗಿದ್ದು, ಸಂಗಮ ಬಳಿ ಸಣ್ಣಪುಟ್ಟ ತರಕಾರಿ ಮೀನು ಮಾರಾಟ ನಡೆಯಿತು. ಹೂ, ಹಣ್ಣು ಹಂಪಲು, ತರಕಾರಿ ಅಂಗಡಿಗಳು ಕೂಡಾ ಬಿಕೋ ಎನ್ನುವಂತೆ ಇತ್ತು. ಶಿರೂರು ಚೆಕ್ ಪೋಸ್ಟ್ ಬಳಿ ತಪಾಸಣೆ ನಡೆಸಿ ವಾಹನಗಳನ್ನು ಬಿಡಲಾಗುತ್ತಿತ್ತು. ಕುಂದಾಪುರ ನಗರದ ಶಾಸ್ತ್ರೀವೃತ್ತ ಸಹಿತ ಕೆಲವೆಡೆ ಪೊಲೀಸರು, ವಾಹನಗಳ ತಪಾಸಣಾ ಕಾರ್ಯವನ್ನು ನಡೆಸಿದರು. ಆಯಕಟ್ಟಿನ ಜಾಗದಲ್ಲಿ ಬಿಗು ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.
ಬೆಳಿಗ್ಗಿನ ಸಮಯ ಕೆಲವು ಅಂಗಡಿಗಳು ಅರ್ಧ ತೆರೆದು ವ್ಯಾಪಾರ ನಡೆಸುತ್ತಿರುವುದು ಕಂಡುಬಂದವು. ಗ್ರಾಮಾಂತರ ಪ್ರದೇಶದಲ್ಲಿ ಬಹುತೇಕ ಅಂಗಡಿಗಳು ತೆರೆದಿದ್ದವಾದರೂ ನಂತರದಲ್ಲಿ ಎಲ್ಲವನ್ನೂ ಬಂದ್ ಮಾಡಲಾಗಿತ್ತು.
ಕುಂದಾಪುರ ಸಹಾಯಕ ಕಮಿಷನರ್ ಕೆ. ರಾಜು, ಡಿವೈಎಸ್ಪಿ ಶ್ರೀಕಾಂತ್ ಕೆ. ನಗರದ ವಿವಿಧೆಡೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಪಿಎಸ್ಐ ಸದಾಶಿವ ಗವರೋಜಿ, ಟ್ರಾಫಿಕ್ ಪೊಲೀಸರು ಗಸ್ತು ನಡೆಸಿದರು. ಬೈಂದೂರು ತಾಲೂಕಿನಲ್ಲಿ ವೃತ್ತ ನಿರೀಕ್ಷಕ ಸಂತೋಷ್ ಕಾಯ್ಕಿಣಿ ಪಿಎಸ್ಐ ಪವನ್ ನಾಯಕ್ ಗಸ್ತು ನಡೆಸಿದರು. ಪೊಲೀಸರು ಹಾಗೂ ಪುರಸಭೆ ವತಿಯಿಂದ ಮೈಕ್ ಮೂಲಕ ಕೋವಿಡ್ ಜಾಗೃತಿ, ನಿಯಮಾವಳಿ ಪಾಲನೆ ಬಗ್ಗೆ ಅರಿವು ಮೂಡಿಸುವ ಕಾರ್ಯ ನಡೆಯಿತು.


















