ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಅರವತ್ತೇಳು ವರ್ಷಗಳ ನಂತರ ಬಂದಿರುವ ಇದು ನಮ್ಮೆಲ್ಲರ ಜೀವಮಾನದಲ್ಲೊಮ್ಮೆ ಸೇವೆಗೆ ಸಿಕ್ಕಿರುವ ಅಪೂರ್ವ ಅವಕಾಶ. ಇಲ್ಲಿ ಸಂಭಾವನೆ, ಲಾಭ – ನಷ್ಟಗಳು ನಗಣ್ಯ. ನಮ್ಮ ಶರೀರ ಇರುವವರೆಗೆ ನಮಗೆ ಇನ್ನೊಬ್ಬರು ಏನಾದರೂ ಕೊಡಬಹುದು. ಆದರೆ ಶರೀರ ತೊರೆದ ಮೇಲೆಯೂ ನಮಗೆ ಕೊಡುವವನು ಆ ಕೋಟಿಲಿಂಗೇಶ್ವರ ಮಾತ್ರ. ಆದ್ದರಿಂದ ಕೋಟೇಶ್ವರ ಮತ್ತಿತರ ಎಲ್ಲ ಮಾಗಣೆಗಳವರೂ ಜಾತಿ, ಮತ ಬೇಧ ಮರೆತು ಈ ಮಹಾನ್ ಕಾರ್ಯಗಳಲ್ಲಿ ತೊಡಗಿಸಿಕೊಂಡು ಯೋಜಿತ ಉತ್ಸವಗಳನ್ನು ಯಶಸ್ವಿಗೊಳಿಸಬೇಕು” – ಎಂದು ಕೋಟೇಶ್ವರದ ಮಹತೊಬಾರ ಶ್ರೀ ಕೋಟಿಲಿಂಗೇಶ್ವರ ದೇವಾಲಯದ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಗೋಪಾಡಿ ಶ್ರೀನಿವಾಸ ರಾವ್ ಮನವಿ ಮಾಡಿದರು.
ಕ್ಷೇತ್ರದಲ್ಲಿ ಫೆ. 7 ರಿಂದ 17 ರವರೆಗೆ ಆಯೋಜಿಸಲಾದ ಶ್ರೀ ಕೋಟಿಲಿಂಗೇಶ್ವರ ದೇವಾಲಯದ ನೂತನ ಧ್ವಜಸ್ತಂಭ ಪ್ರತಿಷ್ಠಾಪನೆ, ಬ್ರಹ್ಮಕಲಶೋತ್ಸವ ಮತ್ತು ಶ್ರೀಮನ್ಮಹಾರಥೋತ್ಸವಗಳ ಚಪ್ಪರ ಮುಹೂರ್ತವನ್ನು ಶುಕ್ರವಾರ ಬೆಳಿಗ್ಗೆ ನೆರವೇರಿಸಿ ಅವರು ಮಾತನಾಡಿದರು.
ಧರ್ಮಪತ್ನಿ ರುಕ್ಮಿಣೀ ಸಹಿತವಾಗಿ ಅವರು ಅಲಂಕೃತ ಚಪ್ಪರದ ಕಂಬಕ್ಕೆ, ತಂತ್ರಿ ಪ್ರಸನ್ನ ಕುಮಾರ ಐತಾಳರ ನೇತೃತ್ವದಲ್ಲಿ ಪೂಜೆ ನೆರವೇರಿಸಿದರು. ರುಕ್ಮಿಣಿಯವರು ಕಂಬಕ್ಕೆ ಅರಸಿನ – ಕುಂಕುಮ, ಮಂಗಳ ದೃವ್ಯಗಳನ್ನು ಲೇಪಿಸಿದರು. ನಂತರ ದಂಪತಿ ಜೊತೆಯಾಗಿ ಕಂಬವನ್ನು ನೆಡುವುದರ ಮೂಲಕ ಚಪ್ಪರ ನಿರ್ಮಾಣ ಕಾರ್ಯಗಳಿಗೆ ಸಾಂಕೇತಿಕ ಚಾಲನೆ ನೀಡಿದರು.
ದೇವಳ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಎಂ. ಪ್ರಭಾಕರ ಶೆಟ್ಟಿ, ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯದರ್ಶಿ ಸುರೇಶ್ ಬೆಟ್ಟಿನ್, ಕಾರ್ಯನಿರ್ವಹಣಾಧಿಕಾರಿ ಗಣೇಶ್ ಗೌಡ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಕೋಣಿ ಕೃಷ್ಣದೇವ ಕಾರಂತ, ಕಾರ್ಯದರ್ಶಿ ಪ್ರಭಾಕರ ಗಾಣಿಗ, ಶಿಲ್ಪಿ ರಾಜಗೋಪಾಲ ಆಚಾರ್ಯ, ಪ್ರಕಾಶ್ ಜಿ. ಪೂಜಾರಿ, ಮಂಜು ಬಿಲ್ಲವ, ಚೆನ್ನ ಮೇಸ್ತ್ರಿ, ವಿವಿಧ ಸಮಿತಿಗಳ ಸದಸ್ಯರು, ಸುಬ್ಬಣ್ಣ ಶೆಟ್ಟಿ, ವಿಠಲ್ ಭಟ್, ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಚಂದ್ರಿಕಾ ಧನ್ಯ, ಮಂಜುನಾಥ ಆಚಾರ್ಯ, ಭಾರತಿ, ಶಾರದಾ ಇನ್ನಿತರರು ಉಪಸ್ಥಿತರಿದ್ದರು.
ಈಗಾಗಲೇ ಶ್ರೀ ಕೋಟಿಲಿಂಗೇಶ್ವರ ದೇವಾಲಯದ ಗರ್ಭಗುಡಿ, ಎಡನಾಳಿಗಳನ್ನು ನವೀಕರಿಸಿ, ಮೇಲ್ಛಾವಣಿಗೆ ತಾಮ್ರ ಹೊದೆಸಲಾಗಿದೆ. 73 ಅಡಿ ಎತ್ತರದ ನೂತನ ಧ್ವಜಸ್ತ0ಭವನ್ನು ಜೋಡಿಸಲಾಗಿದ್ದು, ಸ್ಥಿರೀಕರಣ ಕಾರ್ಯ ನಡೆದಿದೆ. ನೂತನ ಪಾಕಶಾಲೆ ನಿರ್ಮಿಸಲಾಗಿದೆ. ಫೆ.10ರಂದು ನೂತನ ಧ್ವಜಸ್ತ0ಭ ಪ್ರತಿಷ್ಠಾಪನೆ, 15 ರಂದು ಬ್ರಹ್ಮಕಲಶೋತ್ಸವ, ಮಹಾಅನ್ನಸಂತರ್ಪಣೆ, 16 ರಂದು ಶ್ರೀಮನ್ಮಹಾರಥೋತ್ಸವ, ಮಹಾಅನ್ನಸಂತರ್ಪಣೆ ಇತ್ಯಾದಿ ಸಮಾರಂಭಗಳು ವಿವಿಧ ಧಾರ್ಮಿಕ – ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿವೆ.