ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಚಂದ್ರಯಾನಕ್ಕೆ ತಯಾರಿ ನಡೆಸುತ್ತಿರುವ ನಮ್ಮ ದೇಶದಲ್ಲಿ ಬಹುದೊಡ್ಡ ವರ್ಗವೊಂದು ಇನ್ನೂ ಮೌಢ್ಯದ ಕೂಪದಲ್ಲೇ ನರಳಾಡುತ್ತಿರುವುದು ಬೇಸರದ ವಿಚಾರ. ವಿದ್ಯಾವಂತರೆಂದು ಹೇಳಿಕೊಳ್ಳುವ ಜನರು ಸಹ ವೈಚಾರಿಕವಾಗಿ, ವೈಜ್ಞಾನಿಕವಾಗಿ ಚಿಂತನೆ ನಡೆಸದೇ ನಡೆದುಬಂದ ಸಂಪ್ರದಾಯ ಎನ್ನುವ ನೆಪದಲ್ಲಿ ಮೂಢನಂಬಿಕೆಗಳನ್ನು ಬೆಳೆಸಿಕೊಂಡು ಬರುತ್ತಿದ್ದಾರೆ. ಇಂತಹ ವಿಷಯದಲ್ಲಿ ಜನಜಾಗೃತಿ ಮೂಡಿಸುವ ಹಾಗೂ ಶಿಕ್ಷಕರು, ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮನೋಭಾವ ಬೆಳೆಸುವ ಕಾರ್ಯ ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತಿನ ಮೂಲಕ ನಡೆಯಲಿ ಎಂದು ಹಿರಿಯ ವಿಚಾರವಾದಿ ಎಸ್.ಜನಾರ್ದನ್ ಮರವಂತೆ ಆಶಯ ವ್ಯಕ್ತಪಡಿಸಿದರು.
ಅವರು ಕಂಬದಕೋಣೆಯ ಸಂವೇದನಾ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತಿನ ಉಡುಪಿ ಜಿಲ್ಲಾ ಘಟಕದ ಉದ್ಘಾಟನೆ ಮತ್ತು ಕವಿ ಪ್ರೊ. ಎಂ. ಗೋಪಾಲಕೃಷ್ಣ ಅಡಿಗರ 104ನೇ ಜನ್ಮದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತಿನ ಉಡುಪಿ ಜಿಲ್ಲಾ ಘಟಕದ ಅಧ್ಯಕ್ಷ ಡಾ. ಸುಬ್ರಹ್ಮಣ್ಯ ಭಟ್ ಬೈಂದೂರು, ಆರೋಗ್ಯಕರ ಸಮಾಜವನ್ನು ಕಟ್ಟುವುದೇ ನಮ್ಮ ಉದ್ದೇಶ, ನಂಬಿಕೆಯಿಂದ ಜೀವನ ಕಟ್ಟಿಕೊಳ್ಳಬೇಕೇ ಹೊರತು ಮೌಢ್ಯದಿಂದಲ್ಲ. ಮೂಢನಂಬಿಕೆ ಹೆಚ್ಚಾದಂತೆ ಮೋಸ ಹೋಗುವ ಸಾಧ್ಯತೆಗಳು ಹೆಚ್ಚುತ್ತವೆ. ನಮ್ಮ ಓದು ಕೇವಲ ವೃತ್ತಿಗಾಗಿಯಲ್ಲ, ಪ್ರತಿಯೊಂದು ವಿಷಯದಲ್ಲೂ ಸರಿಯಾದ ಅಧ್ಯಯನಶೀಲ ದೃಷ್ಟಿ ನಮ್ಮಲ್ಲಿದ್ದರೆ ಬದುಕು ಅರ್ಥಪೂರ್ಣವಾದೀತು ಎಂದರು.

ಕನ್ನಡ ಸಾಹಿತ್ಯದ ನವ್ಯದ ಹರಿಕಾರ ಕವಿ ಪ್ರೊ| ಎಂ. ಗೋಪಾಲಕೃಷ್ಣ ಅಡಿಗರ ಸಾಹಿತ್ಯದಲ್ಲಿ ವೈಜ್ಞಾನಿಕ ಚಿಂತನೆ ಎನ್ನುವ ವಿಷಯವಾಗಿ ಹಿರಿಯ ಚಿಂತಕ ಡಾ. ಕಿಶೋರಕುಮಾರ ಶೆಟ್ಟಿ ಉಪನ್ಯಾಸ ನೀಡಿದರು.
ಕ.ರಾ.ವೈ.ಸಂ.ಪರಿಷತ್ತಿನ ಉಡುಪಿ ಜಿಲ್ಲಾ ಗೌರವಾಧ್ಯಕ್ಷ ಜಗನ್ನಾಥ ಪನಸಾಲೆ ಜನವಾಡ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಪರಿಷತ್ತಿನ ಧ್ಯೇಯೋದ್ದೇಶಗಳನ್ನು ವಿವರಿಸಿದರು. ಕಾರ್ಯಕ್ರಮದಲ್ಲಿ ಬೈಂದೂರು ಉಪ್ಪುಂದ ಲಯನ್ಸ್ ಕ್ಲಬ್ ಅಧ್ಯಕ್ಷ ವಿಜಯ ಶೆಟ್ಟಿ, ಹೆಮ್ಮಾಡಿ ಮೀನುಗಾರರ ಸಹಕಾರಿ ಸಂಘದ ಪ್ರಧಾನ ವ್ಯವಸ್ಥಾಪಕ ಉದಯಕುಮಾರ ಹಟ್ಟಿಯಂಗಡಿ, ವಂಡ್ಸೆ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಚಂದ್ರ ನಾಯ್ಕ್ ಎಚ್., ಹಿರಿಯ ಸಾಹಿತಿ ಕೆ. ಪುಂಡಲೀಕ ನಾಯಕ್, ಎಂ. ಜನಾರ್ದನ ಅಡಿಗ, ಕ.ರಾ.ವೈ.ಸಂ.ಪರಿಷತ್ತಿನ ಕೋಶಾಧ್ಯಕ್ಷ ಪ್ರಕಾಶ ಹೆಬ್ಬಾರ್, ಸಂಚಾಲಕ ಸುಕುಮಾರ ಮುನಿಯಾಲ, ನಿರ್ದೇಶಕರಾದ ಬೈಕಾಡಿ ಮಂಜುನಾಥ ರಾವ್ ಶಿವಪುರ, ವೆಂಕಟೇಶ ಭಟ್ ಚೇಂಪಿ, ಸೀತಾನದಿ ವಿಠ್ಠಲ ಶೆಟ್ಟಿ, ಮೊದಲಾದವರು ಉಪಸ್ಥಿತರಿದ್ದರು.
ಶಿಕ್ಷಕ ಗಿರೀಶ ಶ್ಯಾನುಭಾಗ್ ಸ್ವಾಗತಿಸಿ, ಸಂಘಟನಾ ಕಾರ್ಯದರ್ಶಿ ರವೀಂದ್ರ ಎಚ್ ವಂದಿಸಿದರು, ಬೈಂದೂರು ಘಟಕದ ಅಧ್ಯಕ್ಷ ಗಣಪತಿ ಹೋಬಳಿದಾರ ಕಾರ್ಯಕ್ರಮ ನಿರೂಪಿಸಿದರು.