ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ತಾಲೂಕಿನ ಕಂಬದಕೋಣೆ ತಾಲೂಕಿನ ಹಳಗೇರಿಯ ಜಾಗವನ್ನು ಕೈಗಾರಿಕಾ ವಲಯವಾಗಿ ಅಭಿವೃದ್ಧಿಪಡಿಸಿ ಸೀಪುಡ್ ಪಾರ್ಕ್ ಮಾಡುವುದನ್ನು ವಿರೋಧಿಸಿ ನಾಗೂರಿನಲ್ಲಿ ಗುರುವಾರ ಹಮ್ಮಿಕೊಂಡ ‘ಪರಿಸರ ರಕ್ಷಿಸಿ ಜೀವನ ಉಳಿಸಿ’ ಅಭಿಯಾನ ಉದ್ಘಾಟನೆಗೊಂಡಿತು.
ಮುಂಬೈನ ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿ ಸಂಸ್ಥಾಪಕ ತೋನ್ಸೆ ಜಯಕರ್ ಶೆಟ್ಟಿ ಅಭಿಯಾನ ಉದ್ಘಾಟಿಸಿ ಮಾತನಾಡಿ ಉಡುಪಿ ಜಿಲ್ಲೆಗೆ ಹೆಚ್ಚು ಕೈಗಾರಿಕೆಗಳನ್ನು ತರುವ ಬಗ್ಗೆ ನಮ್ಮ ವಿರೋಧವಿಲ್ಲ. ಆದರೆ ಪರಿಸರ, ಜನಜೀವನ ನಾಶ ಮಾಡಿ ಕೈಗಾರಿಕೆ ಸ್ಥಾಪಿಸುವುದು ಖಂಡನಾರ್ಹ. ಕೈಗಾರಿಕಾ ವಲಯದ ಜಾಗವನ್ನು ವೈಜ್ಞಾನಿಕವಾಗಿ ಆಯ್ದುಕೊಳ್ಳುವುದು ಬಹುಮುಖ್ಯ ಎಂದರು.
ಹಳಗೇರಿಯಲ್ಲಿ ಕೈಗಾರಿಕಾ ವಲಯದ ನಿರ್ಧಾರದಿಂದ ಪರಿಸರ ಹಾಗೂ ಸುಮಾರು ಎಂಟು ಗ್ರಾಮಗಳ ಜನರಿಗೆ ತೊಂದರೆಯಾಗಲಿದೆ ಸಮಿತಿಯವರು ಮನಗಂಡಿದ್ದು, ಇದರಿಂದಾಗುವ ತೊಂದರೆಗಳ ಬಗ್ಗೆ ಸರ್ಕಾರಕ್ಕೆ ತಿಳಿಸಲಾಗುವುದು. ನೊಂದ ಜನರಿಗೆ ನ್ಯಾಯ ಒದಗಿಸಬೇಕೇಂಬ ನೆಲೆಯಲ್ಲಿ ಸಮಾನ ಮನಸ್ಕರು ಒಂದಾಗಿ ಸ್ಥಾಪಿಸಿದ ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿ ಪ್ರಗತಿಪರ ಚಿಂತಕರ ಚಾವಡಿಯಾಗಿದೆ. ನಮ್ಮ ಹೋರಾಟ ಸ್ವ-ಹಿತಾಸಕ್ತಿಗಾಗಿ ಅಥವಾ ವೈಯಕ್ತಿಕವಾಗಿರದೇ ಸಾಮಾಜಿಕ ನ್ಯಾಯದಿಂದ ಕೂಡಿದ್ದು, ಇಲ್ಲಿನ ಜನರ ಪರಿಸರ ರಕ್ಷಣೆ ಹೋರಾಟಕ್ಕೆ ನಮ್ಮ ಸಂಪೂರ್ಣ ಬೆಂಬಲವಿದೆ ಎಂದು ಘೋಷಿಸಿದರು.
ಸಮಿತಿ ಅಧ್ಯಕ್ಷ ಎಲ್. ವಿ. ಅಮೀನ್ ಅಧ್ಯಕ್ಷತೆ ವಹಿಸಿ ಮಾತನಾಡಿ ಜಗತ್ತಿನ ತಾಪಮಾನ ದಿನದಿಂದ ದಿನಕ್ಕೆ ಒಂದೇ ಸವನೆ ಏರುತ್ತಿದೆ. ಇದರಿಂದಾಗಿ ಪರಿಸರದ ಸಮತೋಲನ ಏರುಪೇರಾಗುತ್ತಿದೆ. ಸಮುದ್ರದ ನೀರಿನ ಮಟ್ಟ ಹೆಚ್ಚುತ್ತಿದ್ದು, ಅನೇಕ ದ್ವೀಪಗಳು ಮುಳುಗಡೆಯ ಭೀತಿಯಲ್ಲಿವೆ. ಸಸ್ಯಸಂಕುಲದ ನಿರಂತರ ನಾಶವೇ ವಿಶ್ವದ ಎಲ್ಲಾ ಅನಾಹುತಗಳಿಗೆ ಮೂಲ ಕಾರಣ. ಆದ್ದರಿಂದ ಪರಿಸರ ಸಂರಕ್ಷಣೆ ನಮ್ಮೆಲ್ಲರ ಜವಬ್ದಾರಿಯಾಗಿದೆ ಎಂದರು.
ಉಪಾಧ್ಯಕ್ಷರಾದ ರಾಮಚಂದ್ರ ಬೈಕಂಪಾಡಿ, ನಿತ್ಯಾನಂದ ಕೋಟ್ಯಾನ್ ಕಾರ್ಯದರ್ಶಿ ಪ್ರೊ. ಶಂಕರ್, ಅಖಿಲ ಭಾರತ ತುಳು ಒಕ್ಕೂಟದ ಅಧ್ಯಕ್ಷ ಧರ್ಮಪಾಲ ದೇವಾಡಿಗ, ಮುಂಬೈ ದೇವಾಡಿಗ ಸಂಘದ ಅಧ್ಯಕ್ಷ ರವಿ ದೇವಾಡಿಗ, ಮಾಜಿ ಅಧ್ಯಕ್ಷ ಮೋಹನ್‌ದಾಸ್, ಕಂಬದಕೋಣೆ ಗ್ರಾಪಂ ಅಧ್ಯಕ್ಷ ಸುಕೇಶ್‌ಕುಮಾರ್ ಶೆಟ್ಟಿ, ಕಿರಿಮಂಜೇಶ್ವರ ಗ್ರಾಪಂ ಸದಸ್ಯ ಈಶ್ವರ ದೇವಾಡಿಗ, ಮಾಜಿ ಸದಸ್ಯ ಸುಬ್ಬಣ್ಣ ಶೆಟ್ಟಿ, ಸ್ಥಳೀಯರಾದ ಡಾ. ಸುಬ್ರಹ್ಮಣ್ಯ ಭಟ್, ನರಸಿಂಹ ಹಳಗೇರಿ, ಜೈನುಲ್ಲಾ ಅಬಿದಿನ್ ಉಪಸ್ಥಿತರಿದ್ದರು. ರಾಜೇಂದ್ರ ಗಾಣಿಗ ಪ್ರಾರ್ಥಿಸಿದರು.
ಶ್ರೀ ವನದುರ್ಗಾ ರೈತಶಕ್ತಿ ಗುಂಪಿನ ಅಧ್ಯಕ್ಷ ಪ್ರಭಾಕರ ಶೆಟ್ಟಿ ಸ್ವಾಗತಿಸಿದರು. ಪರಿಸರ ಪ್ರೇಮಿ ಸಮಿತಿಯ ಪ್ರಧಾನ ಕಾರ್ಯದರ್ಶಿ ಸುರೇಂದ್ರ ಸಾಲಿಯಾನ್ ವಂದಿಸಿದರು. ನಳಿನ್‌ಕುಮಾರ್ ಶೆಟ್ಟಿ ನಿರೂಪಿಸಿದರು.