ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಟಿಪ್ಪರ್ ವಾಹನವೊಂದು ಅದೇ ದಿಕ್ಕಿನಲ್ಲಿ ತೆರಳುತ್ತಿದ್ದ ಹೊಂಡಾ ಆಕ್ವಿವ್ ದ್ವಿಚಕ್ರ ವಾಹನಕ್ಕೆ ಢಿಕ್ಕಿಯಾಗಿ, ಹೊಂಡಾ ಆಕ್ವಿವ್’ನಲ್ಲಿದ್ದ ಮಹಿಳೆಯೋರ್ವರು ಮೃತಪಟ್ಟ ಘಟನೆ ಭಾನುವಾರ ಹೆಮ್ಮಾಡಿ ಜಂಕ್ಷನ್ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ.
ಅರೆಹೊಳೆ ರಾಗಿಹಕ್ಲು ನಿವಾಸಿ ಜ್ಯೋತಿ (35) ಮೃತ ದುರ್ದೈವಿ. ಅಪಘಾತದಲ್ಲಿ ಸ್ಕೂಟಿ ಚಲಾಯಿಸುತ್ತಿದ್ದ ಅವರ ಪತಿ ಶರತ್ ಕುಮಾರ್ ಶೆಟ್ಟಿ (45) ಹಾಗೂ ಅವರ ಮಗಳು ಸನ್ನಿಧಿ (7) ಗಾಯಗೊಂಡಿದ್ದಾರೆ.
ಕುಂದಾಪುರ ಕಡೆಗೆ ಮಣ್ಣು ಸಾಗಿಸುತ್ತಿದ್ದ ಟಿಪ್ಪರ್ ವೇಗದಲ್ಲಿ ಬಂದು ಅದೇ ಮಾರ್ಗದಲ್ಲಿ ತೆರಳುತ್ತಿದ್ದ ಹೊಂಡಾ ಆಕ್ವಿವ್ ವಾಹನಕ್ಕೆ ಢಿಕ್ಕಿಯಾಗಿದೆ. ಈ ವೇಳೆ ಹಿಂದೆ ಕುಳಿತಿದ್ದ ಜ್ಯೋತಿ ಎಂಬುವವರು ಕೆಳಕ್ಕೆ ಬಿದ್ದ ಸಂದರ್ಭ, ಟಿಪ್ಪರ್ ಅವರ ಹೊಟ್ಟೆಯ ಮೇಲೆಯೇ ಚಲಿಸಿದ್ದರಿಂದ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಮಹಿಳೆ ಕೆಳಕ್ಕೆ ಬೀಳುತ್ತಿರುವ ಸಂದರ್ಭ ಮಗಳನ್ನು ರಕ್ಷಿಸುವ ಸಲುವಾಗಿ ಇನ್ನೊಂದು ಬದಿಗೆ ಹಾಕಿದ್ದರಿಂದ ಅವರ ಮಗಳ ಕೈಗೆ ತರಚಿದ ಗಾಯ ಹಾಗೂ ಪತಿ ಸಣ್ಣಪುಟ್ಟ ಗಾಯವಾಗಿದೆ.
ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದು, ಕುಂದಾಪುರ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.