ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಇಲ್ಲಿನ ಭಂಡಾರ್ಕಾರ್ಸ್ ಕಾಲೇಜಿನ ಅಧ್ಯಾಪಕರ ಸಂಘದ ವತಿಯಿಂದ ಪರೀಕ್ಷಾ ಭಯ ಹೋಗಲಾಡಿಸುವುದು ಕುರಿತು ಭಂಡಾರ್ಕಾರ್ಸ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಗಾಗಿ ವಿಶೇಷ ಉಪನ್ಯಾಸ ನಡೆಯಿತು.
ಕುಂದಾಪುರದ ಶ್ರೀ ಮಾತಾ ಅಸ್ಪತ್ರೆಯ ಮನಃಶಾಸ್ತ್ರಜ್ಞರಾದ ಡಾ. ಪ್ರಕಾಶ್ ತೋಳಾರ್ ಮಾತನಾಡಿ ಮೊದಲು ಓದುವುದರ ಮೂಲಕ ಪ್ರಯತ್ನ ಪಡಬೇಕು. ಎಂದಿಗೂ ಫಲಿತಾಂಶದ ಬಗ್ಗೆ ಯೋಚಿಸಬೇಡಿ. ನಿಮ್ಮ ಕೈಯ್ಯಲ್ಲಿರುವುದು ಕೇವಲ ಸತತ ಪ್ರಯತ್ನ ಮಾತ್ರ. ನಿಮ್ಮ ಉತ್ತಮ ಪ್ರಯತ್ನದಿಂದ ಉತ್ತಮ ಫಲಿತಾಂಶ ಸಾಧ್ಯವಾಗುತ್ತದೆ. ನಕಾರಾತ್ಮಕ ಆಲೋಚನೆಗಳಿಗೆ ಎಂದಿಗೂ ಅವಕಾಶವನ್ನು ಕೊಡಬೇಡಿ. ಸಕಾರಾತ್ಮಕ ಆಲೋಚನೆಗಳು ನಿಮ್ಮದಾಗಿರಲಿ ಎಂದು ಆಶಿಸಿದರು.
ಪರೀಕ್ಷಾ ಭಯ ಮತ್ತು ಆತಂಕವನ್ನು ಹೋಗಲಾಡಿಸುವಲ್ಲಿ ಕೆಲವು ಸೂಕ್ತ ಸಲಹೆಗಳನ್ನು ಅವರು ವಿದ್ಯಾರ್ಥಿಗಳಿಗೆ ನೀಡಿದರು ಎಸ್.ಕ್ಯೂ ಆರ.ಆರ್.ಆರ್ ಎಂಬ ಸರಳ ಸೂತ್ರವನ್ನು ಓದಿನಲ್ಲಿ ಅಳವಡಿಸಿಕೊಳ್ಳಬೇಕು. ಮೊದಲು ಓದುವಾಗ ಮೇಲ್ನೋಟ ಮಾಡಿಕೊಳ್ಳಿ, ನಂತರ ಆ ವಿಷಯಕ್ಕೆ ಕುರಿತ ಪ್ರಶ್ನೆಗಳನ್ನು ತಯಾರಿಸಿ ಉತ್ತರ ಪಡೆದುಕೊಳ್ಳಿ. ನಂತರ ಚೆನ್ನಾಗಿ ಓದಿ ಮತ್ತು ಕೊನೆಯಲ್ಲಿ ಪುನರಾರ್ವರ್ತನೆ ಮಾಡಿ ಎಂದರು. ಓದುವುದಕ್ಕೆ ಮುಖ್ಯವಾಗಿ ಏಕಾಗ್ರತೆ ಬೇಕು. ಓದುವ ಕೋಣೆಯನ್ನು ಸ್ವಚ್ಛವಾಗಿಡಬೇಕು. ಆರಾಮವಾಗಿರಬೇಕು. ಪರೀಕ್ಷಾ ಕೇಂದ್ರಕ್ಕೆ ಯಾವುದೇ ಕಾರಣಕ್ಕೂ ತಡವಾಗಬಾರದು. ಪರೀಕ್ಷಾ ಕೋಣೆಯಲ್ಲಿ ಆತಂಕವಾದಾಗ ಆರಾಮವಾಗಿರಿ. ಒತ್ತಡಕ್ಕೆ ಸಿಲುಕಿದಾಗ ನಿಮ್ಮ ಇಷ್ಟದ ಯಾರನ್ನು ನೆನೆಪಿಸಿಕೊಂಡು ಮನಸನ್ನು ಸಮಾಧಾನಪಡಿಸಿಕೊಳ್ಳಬೇಕು. ನಿಮ್ಮ ಜೊತೆ ನಕಾರಾತ್ಮಕ ಮಾತನಾಡುವವರನ್ನು ನಂಬಬೇಡಿ. ಕೊನೆಯ ಕ್ಷಣದ ಓದುವಿಕೆಯನ್ನು ಮಾಡಬೇಡಿ ಎಂದು ಹತ್ತು ಹಲವು ವಿಷಯಗಳೊಂದಿಗೆ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಧ್ಯಾಪಕರ ಸಂಘದ ಅಧ್ಯಕ್ಷರಾದ ಡಾ. ಲಲಿತಾದೇವಿ ವಹಿಸಿದ್ದರು. ವೇದಿಕೆಯಲ್ಲಿ ಭಂಡಾರ್ಕಾರ್ಸ್ ಪದವಿ ಕಾಲೇಜಿನ ಪ್ರಾಂಶುಪಾಲರಾದ ಡಾ. ಎನ್.ಪಿ. ನಾರಾಯಣ ಶೆಟ್ಟಿ ಮತ್ತು ಭಂಡಾರ್ಕಾರ‍್ಸ್ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಡಾ. ಜಿ. ಎಮ್. ಗೊಂಡ ಉಪಸ್ಥಿತರಿದ್ದರು. ಅಧ್ಯಾಪಕರ ಸಂಘದ ಉಪಾಧ್ಯಕ್ಷರಾದ ಡಾ.ಸರೋಜ ಎಮ್. ಉಪಸ್ಥಿತರಿದ್ದರು.
ವಿದ್ಯಾರ್ಥಿನಿಯರಾದ ಸುಶ್ಮಿತಾ ಕಾರ್ಯಕ್ರಮ ನಿರ್ವಹಿಸಿ ಅವರಿಲ್ ವಂದಿಸಿದರು.