ಆಮೆ ಹಬ್ಬ, ಬೀಚ್ ಸ್ವಚ್ಛತೆ, ಕಡಲಾಮೆ ಜಾಗೃತಿ ಕಾರ್ಯಕ್ರಮ
ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ,ಎ.30: ಕಡಲಿನೊಂದಿಗೆ ಭಾಂದವ್ಯ ಹೊಂದಿರುವ ಮೀನುಗಾರರೇ ಕಡಲಾಮೆಗಳ ಸಂರಕ್ಷಣೆಯ ರಾಯಭಾರಿಗಳಾಗಬೇಕು. ಮೀನಿನ ಸಂತತಿ ಉಳಿಯಲು, ಹೆಚ್ಚುತ್ತಿರುವ ಜೆಲ್ಲಿ ಫಿಶ್ಗಳ ನಾಶಕ್ಕೆ ಕಡಲಾಮೆಗಳ ರಕ್ಷಣೆ ಅಗತ್ಯವಾಗಿದ್ದು ಸರಕಾರ, ಅರಣ್ಯ ಇಲಾಖೆ, ಸಂಘ-ಸಂಸ್ಥೆಗಳಿಗಿಂತಲೂ ಮೀನುಗಾರರ ಜವಾಬ್ದಾರಿಯೂ ಹೆಚ್ಚಿದೆ ಎಂದು ಮೈಸೂರು ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಹೇಳಿದರು.
ಅವರು ಶನಿವಾರ ಕೋಡಿಯ ಕಡಲ ಕಿನಾರೆಯಲ್ಲಿ ಅರಣ್ಯ ಇಲಾಖೆ, ಕ್ಲೀನ್ ಕುಂದಾಪುರ ಪ್ರಾಜೆಕ್ಟ್, ಎಫ್ಎಸ್ಎಲ್ ಇಂಡಿಯಾ ಆಶ್ರಯ ಹಾಗೂ ಹಾಗೂ ವಿವಿಧ ಸಂಘಟನೆಗಳ ಸಹಭಾಗಿತ್ವದಲ್ಲಿ ಆಯೋಜಿಸಿದ ಆಮೆ ಹಬ್ಬ, ಬೀಚ್ ಸ್ವಚ್ಛತೆ, ಕಡಲಾಮೆ ಜಾಗೃತಿ, ಮರಳು ಶಿಲ್ಪ, ಗಾಳಿಪಟ ಉತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ನಮ್ಮೂರಲ್ಲಿ ವನ್ಯಜೀವಿ, ಕಾಡಿನ ರಕ್ಷಣೆ ಅಗತ್ಯವಾಗಿದ್ದರೆ, ಕರಾವಳಿಯಲ್ಲಿ ಮೀನಿನ ಸಂತತಿ, ಆಮೆ, ಸ್ವಚ್ಛ ಬೀಚ್ನ ಅಗತ್ಯತೆ ಬಹಳಷ್ಟಿದೆ. ಆ ದಿಸೆಯಲ್ಲಿ ನಾವೆಲ್ಲರೂ ಕೈಜೋಡಿಸಬೇಕಾಗಿದೆ. ಪ್ಲಾಸ್ಟಿಕ್ ಮುಕ್ತ ಸಮಾಜ ನಿರ್ಮಾಣಕ್ಕೆ ನಮ್ಮ ದೇಗುಲಗಳೇ ನಾಂದಿಯಾಗಲಿ ಎಂದವರು ಸಲಹೆ ನೀಡಿದರು.
ವರ್ಷದ ಹಿಂದೆ ಕೋಡಿ ಬೀಚ್ ಸ್ವಚ್ಛತೆ ಹಾಗೂ ಆಮೆ ಮೊಟ್ಟೆ ರಕ್ಷಣೆ ಕುರಿತು ಕ್ಲೀನ್ ಕುಂದಾಪುರ ಪ್ರಾಜೆಕ್ಟ್ನವರು ಜಾಲತಾಣದಲ್ಲಿ ಹಂಚಿಕೊಂಡ ವಿಷಯಕ್ಕೆ ನಾನು ಶುಭಹಾರೈಸಿದ್ದೆ. ಬೀಚ್ಗಳಲ್ಲಿ ಪ್ಲಾಸ್ಟಿಕ್, ತ್ಯಾಜ್ಯ ರಾಶಿ ಹೆಚ್ಚುತ್ತಿರುವುದರಿಂದ ಕಡಲಾಮೆಗಳಿಗೆ ಮಾರಕವಾಗಿದೆ. ಜನರ ಸಹಭಾಗಿತ್ವದಿಂದ ಸ್ವಚ್ಛತಾ ಕಾರ್ಯವನ್ನು ಯಶಸ್ವಿಯಾಗಿ ಕೈಗೊಳ್ಳುತ್ತಿರುವುದು ಸಂತೋಷದ ಸಂಗತಿ ಎಂದರು.
ಮಂಗಳೂರಿನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಪ್ರಕಾಶ್ ಎಸ್. ನಟಲ್ಕರ್ ಮಾತನಾಡಿ, ಬೀಚ್ ಸ್ವಚ್ಛತೆ, ಕಡಲಾಮೆ ರಕ್ಷಣೆಯಲ್ಲಿ ಇಲಾಖೆ, ಸಂಘಟನೆಗಳ ಜತೆಗೆ ಸ್ಥಳೀಯ ಜನರ ಸಹಭಾಗಿತ್ವವಿದ್ದರೆ ಮಾತ್ರ, ಸರಕಾರದ ಯೋಜನೆ ಯಶನ್ವಿಯಾಗಿ ಕಾರ್ಯಗತಗೊಳ್ಳಲು ಸಾಧ್ಯವಿದೆ ಎಂದರು.
ಕಡಲಾಮೆ ಸಂರಕ್ಷಣೆಯಲ್ಲಿ ತೊಡಗಿಸಿಕೊಂಡ ಬಾಬು ಮೊಗವೀರ, ಗೋಪಾಲ ಬಾಳಿಗ, ಗೋಪಾಲ ಪೂಜಾರಿ ಕೋಡಿ, ಪುರಸಭಾ ಸದಸ್ಯರಾದ ನಾಗರಾಜ ಕಾಂಚನ್, ಕಮಲ ಮಂಜುನಾಥ ಪೂಜಾರಿ, ಲಕ್ಷ್ಮೀ ಬಾಯಿ, ಅಶ್ಪಕ್, ಎಫ್ಎಸ್ಎಲ್ನ ವೆಂಕಟೇಶ, ದಿನೇಶ್ ಸಾರಂಗ, ನಾಗರಾಜ ಶೆಟ್ಟಿ, ಅಶೋಕ್ ಪೂಜಾರಿ ಕೋಡಿ, ರಾಘವೇಂದ್ರ ಕೋಡಿ, ಕ್ಲೀನ್ ಕುಂದಾಪುರ ಪ್ರಾಜೆಕ್ಟ್ನ ಭರತ್ ಬಂಗೇರ, ಸ್ಥಳೀಯರಾದ ಶಂಕರ ಪೂಜಾರಿ ಕೋಡಿ, ರೀಫ್ ವಾಚ್ ಸಂಸ್ಥೆಯ ತೇಜಸ್ವಿ ಅವರನ್ನು ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ನಟ ಶೈನ್ ಶೆಟ್ಟಿ, ಕೋಡಿ ಚಕ್ರೇಶ್ವರಿ ದೇವಸ್ಥಾನದ ಗೋಪಾಲ ಪೂಜಾರಿ, ಮಂಗಳೂರು ಡಿಸಿಎಫ್ ದಿನೇಶ್, ಕುದುರೆಮುಖ ವನ್ಯಜೀವಿ ಸಂರಕ್ಷಣಾ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಗಣಪತಿ ಕೆ., ವಿಜ್ಞಾನಿ ಡಾ| ಸೂರ್ಯ, ಎಫ್ಎಸ್ಎಲ್ ಅಧ್ಯಕ್ಷ ರಾಕೇಶ್, ಮತ್ತಿತರರು ಉಪಸ್ಥಿತರಿದ್ದರು.
ಉಪ ಅರಣ್ಯ ಸಂರಕ್ಷಣಾಧಿಕಾರಿ ಆಶಿಶ್ ರೆಡ್ಡಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ವಲಯ ಅರಣ್ಯಾಧಿಕಾರಿ ಪ್ರಭಾಕರ ಕುಲಾಲ್, ಎಫ್ಎಸ್ಎಲ್ ಇಂಡಿಯಾದ ವೆಂಕಟೇಶ್ ಸ್ವಾಗತಿಸಿ, ಕಲ್ಪನಾ ಭಾಸ್ಕರ್ ವಂದಿಸಿದರು. ಅರಣ್ಯ ಇಲಾಖೆಯ ನಾಗರಾಜ ಪಟವಾಲ್ ಕಾರ್ಯಕ್ರಮ ನಿರೂಪಿಸಿದರು.
ಮೈಸೂರಿನ ಮಹಾರಾಜರೇ ಸ್ವತಃ ಬೀಚ್ ಸ್ವಚ್ಛತಾ ಕಾರ್‍ಯದಲ್ಲಿ ಪಾಲ್ಗೊಂಡಿದ್ದು ವಿಶೇಷವಾಗಿತ್ತು. ಇದೇ ಮೊದಲ ಬಾರಿಗೆ ಕುಂದಾಪುರಕ್ಕೆ ಆಗಮಿಸಿದ ಮೈಸೂರಿನ ಮಹಾರಾಜರನ್ನು ಪೂರ್ಣಕುಂಭ ಸ್ವಾಗತದೊಂದಿಗೆ ಅದ್ಧೂರಿಯಾಗಿ ಬರಮಾಡಿಕೊಳ್ಳಲಾಯಿತು. ಕೋಡಿಯ ಶ್ರೀ ಚಕ್ರೇಶ್ವರಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ, ಅಲ್ಲಿಂದ ಸಾಂಪ್ರದಾಯಿಕ ಶೈಲಿಯ ಮೆರವಣಿಗೆ ಮೂಲಕ ಕೋಡಿಯ ಕಡಲ ಕಿನಾರೆಗೆ ಆಗಮಿಸಿದರು. ದಿನೇಶ್ ಹೊಳ್ಳ ಅವರು ಕಡಲತೀರದಲ್ಲಿ ಕಾಯಿಸಿಪ್ಪೆಯಿಂದ ರಚಿಸಿದ ಆಮೆಯ ಕಲಾಕೃತಿ, ವಿವಿಧ ಕಲಾವಿದರು ಪ್ಲ್ಯಾಸ್ಟಿಕ್ ತ್ಯಾಜ್ಯ, ಬಾಟಲಿಗಳಿಂದ ರಚಿಸಿದ ವಿವಿಧ ಕಲಾಕೃತಿಗಳು ಗಮನ ಸೆಳೆದವು.