ಕುಂದಾಪ್ರ ಡಾಟ್ ಕಾಂ ಸುದ್ದಿ
ಬೈಂದೂರು: ಬೈಂದೂರಿನ ಅಧಿದೇವ ಮಹತೋಭಾರ ಶ್ರೀ ಸೇನೇಶ್ವರ ದೇವಸ್ಥಾನದ ಶ್ರೀ ಮನ್ಮಹಾ ರಥೋತ್ಸವ, ರಥಾರೋಹಣ ಗುರುವಾರ ಬೆಳಿಗ್ಗೆ ಜರುಗಿತು. ಚಾರಿತ್ರಿಕ ಹಿನ್ನೆಲೆಯುಳ್ಳ ರಥೋತ್ಸವದಲ್ಲಿ ಊರ ಪರವೂರ ಭಕ್ತಸಮೂಹ ಪಾಲ್ಗೊಂಡು ಪುನೀತರಾದರು.
ಚಿತ್ರಗಳು: ವಿನಯ್ ಅರೆಹೊಳೆ ಚಿತ್ರಗಳು: ವಿನಯ್ ಅರೆಹೊಳೆ
ಕಲಾವೈಭವಗಳಿಂದ ಕಂಗೊಳಿಸುವ ದೇವಾಲಯ ಈ ಭಾರಿ ಮತ್ತಷ್ಟು ಅಲಂಕೃತಗೊಂಡಿದ್ದು, ವಾರ್ಷಿಕ ರಥೋತ್ಸವ ಇನ್ನಷ್ಟು ಮೆರಗನ್ನು ನೀಡಿತು. ಹಬ್ಬದ ಸಂಭ್ರಮವನ್ನು ಕಣ್ತುಂಬಿಕೊಳ್ಳಲು ಇಡಿ ನಗರವೇ ಸಜ್ಜಾಗಿದೆ. ಬೆಳಿಗ್ಗೆ ರಥೋತ್ಸವಕ್ಕೆ ಚಾಲನೆ ನೀಡಿದ್ದು, ಸಂಜೆಯ ವೇಳೆಗೆ ರಥವನ್ನು ರಥಬೀದಿಯಲ್ಲಿ ಏಳೆಯಲಾಗುತ್ತದೆ.
ರಥಕ್ಕೆ ಗರ್ನಪಟ್ಟೆ ಕಟ್ಟಿದ ಹನ್ನೊಂದು ದಿನಗಳಿಗೆ ರಥೋತ್ಸವ ನಡೆಯುವುದೆಂಬ ಸೂಚನೆ ದೊರೆಯುತ್ತದೆ. ಒಟ್ಟು ಏಳು ದಿನಗಳ ಕಾಲ ನಡೆಯುವ ಉತ್ಸವವು ಧಾರ್ಮಿಕ ಕಾರ್ಯಗಳಿಂದ ಆರಂಭಗೊಳ್ಳುತ್ತದೆ. ಈ ಮಧ್ಯೆ ನಾಕಟ್ಟೆ ಉತ್ಸವ, ಪಡುವರಿ ಕಟ್ಟೆ ಉತ್ಸವ, ಬಂಕೇಶ್ವರ ಕಟ್ಟೆ ಉತ್ಸವ ನಡೆದ ಬಳಿಕ ರಥೋತ್ಸವ, ಅವಭೃಥೋತ್ಸವ ಕೊನೆಯಲ್ಲಿ ನಗರೋತ್ಸವ ನಡೆಯುತ್ತದೆ.
ರಥೋತ್ಸವದ ಪೂರ್ವದಲ್ಲಿ ಮುಸ್ಲಿಂ ಭಾಂದವರನ್ನು ಆಹ್ವಾನಿಸುವ, ರಥೋತ್ಸವದ ಆರಂಭದಲ್ಲಿ ಬೈಂದೂರಿನ ಪೊಲೀಸ್ ಠಾಣಾಧಿಕಾರಿಯನ್ನು ಕರೆತಂದು ಚಾಲನೆ ದೊರಕಿಸುವ ಸಂಪ್ರದಾಯ ಇಂದಿಗೂ ರೂಢಿಯಲ್ಲಿದೆ.
ನಗರೋತ್ಸವದಲ್ಲಿ ಜಾತಿ ಮತ ಭೇದವಿಲ್ಲದೇ ಎಲ್ಲಾ ಧರ್ಮಿಯರೂ ಪಾಲ್ಗೊಂಡು ಸಂಭ್ರಮಿಸುತ್ತಾರೆ. ರಥೋತ್ಸವದ ಸಮಯದಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗುತ್ತದೆ. ರಥೋತ್ಸವದ ರಾತ್ರಿ ಓಕುಳಿ ಹೊಂಡದ ಆಟ ವಿಶೇಷವಾಗಿ ಜರುಗುತ್ತವೆ.
ರಥೋತ್ಸವದ ವೇಳೆಯಲ್ಲಿ ಶಾಸಕರಾದ ಬಿ.ಎಂ. ಸುಕುಮಾರ ಶೆಟ್ಟಿ, ಮಾಜಿ ಶಾಸಕರಾದ ಕೆ. ಗೋಪಾಲ ಪೂಜಾರಿ, ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಳ ವ್ಯವಸ್ಥಾಪನಾ ಸಮಿತಿ ಸದಸ್ಯ ಜಯಾನಂದ ಹೋಬಳಿದಾರ್, ಮುಖಂಡರುಗಳಾದ ದೀಪಕ್ ಕುಮಾರ್ ಶೆಟ್ಟಿ, ಎಸ್. ರಾಜು ಪೂಜಾರಿ, ಡಾ. ಗೋವಿಂದ ಬಾಬು ಪೂಜಾರಿ, ಪಿ. ಸುಖಾನಂದ ಶೆಟ್ಟಿ, ನಿತಿನ್ ಶೆಟ್ಟಿ , ಬೈಂದೂರು ತಹಶಿಲ್ದಾರ್ ಶೋಭಾಲಕ್ಷ್ಮೀ ಎಚ್. ಎಸ್., ದೇವಳದ ಆಡಳಿತಾಧಿಕಾರಿ ಮಂಜು ಪೂಜಾರಿ ಮೊದಲಾದವರು ಈ ವೇಳೆ ಉಪಸ್ಥಿತರಿದ್ದರು. ಬೈಂದೂರು ವೃತ್ತ ನಿರೀಕ್ಷಕ ಸಂತೋಷ ಕಾಯ್ಕಿಣಿ ಮಾರ್ಗದರ್ಶನದಲ್ಲಿ ಪಿಎಸ್ಐ ಪವನ್ ನಾಯಕ್ ನೇತೃತ್ವದಲ್ಲಿ ಬಂದೋವಸ್ತ್ ಏರ್ಪಡಿಸಲಾಗಿತ್ತು.
