ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ,ಮೇ.12: ಅಸಾನಿ ಚಂಡಮಾರುತದ ಹಿನ್ನೆಲೆಯಲ್ಲಿ ಕಳೆದ ಮೂರು ದಿನಗಳಿಂದ ಮೋಡಕಟ್ಟಿದ ವಾತಾವರಣ, ಬುಧವಾರ ಪೂರ್ತಿ ಮಳೆಯಾಗಿ ಸುರಿದಿದೆ. ಬೆಳಗ್ಗೆಯಿಂದ ನಿರಂತರ ಮಳೆಗೆ ಜನ ಜೀವನ ಅಸ್ತವ್ಯಸ್ತಗೊಂಡಿತು. ಬೆಳಗ್ಗೆ ಹತ್ತು ಗಂಟೆಯಿಂದ ಆರಂಭವಾದ ಮಳೆ ಮಧ್ಯಾಹ್ನ ಮೂರರ ತನಕ ಸುರಿದಿದ್ದು, ನಂತರ ತುಂತುರು ಮಳೆಗೆ ಸೀಮಿತವಾಯಿತು.
ಕಡಲಬ್ಬರ ಹೆಚ್ಚಾಗಿ ಇದ್ದಿದ್ದರಿಂದ ಮೀನುಗಾರರು ಸಮುದ್ರಕ್ಕೆ ಇಳಿಯಲಿಲ್ಲ. ಮಳೆಯ ಹಿನ್ನೆಲೆಯಲ್ಲಿ ಕೃಷಿಕರು ಕೃಷಿ ಚಟುವಟಿಕೆ ಆರಂಭಿಸಿದ್ದು, ಗದ್ದೆ ಉಳುವ ಯಂತ್ರಗಳು, ಗೊಬ್ಬರ ಹರಡುವ ಮಹಿಳೆಯರು ಭತ್ತದ ಗದ್ದೆಗಳಲ್ಲಿ ಕಂಡುಬಂತು.
ಇನ್ನು ಗುರುವಾರವೂ ಮೋಡಕವಿದ ವಾತಾವರಣ ಮುಂದುವರಿದಿದ್ದು, ಮೇ.13ರ ತನಕವೂ ಚಂಡಮಾರುತದ ಪ್ರಭಾವ ಇರಲಿದೆ ಎಂದು ಹವಮಾನ ಇಲಾಖೆ ತಿಳಿಸಿದೆ.
ಸರ್ವಿಸ್ ರಸ್ತೆಯಾಯ್ತು ನೀರಿನ ತೋಡು!
ಕುಂದಾಪುರರ ಪುರಸಭಾ ವ್ಯಾಪ್ತಿಯಲ್ಲಿ ಸರ್ವಿಸ್ ರಸ್ತೆಯ ಚರಂಡಿಯ ಬದಲಿಗೆ ರೋಡಿನಲ್ಲಿಯೇ ನೀರು ತುಂಬಿ ವಾಹನ ಸಂಚಾರಕ್ಕೆ ಅಡಚಣೆಯಾಯಿತು. ಎ.10 ಒಳಗೆ ಎಲ್ಲಾ ಹೆದ್ದಾರಿ ಕಾಮಗಾರಿಗಳನ್ನು ಪೂರ್ಣಗೊಳಿಸಬೇಕು ಎಂದು ಸಹಾಯಕ ಕಮೀಷನರ್ ಆದೇಶಿಸಿದ್ದರೂ ಕಾಮಗಾರಿ ಪೂರ್ಣಗೊಂಡಿಲ್ಲ. ಕುಂದಾಪುರ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದಿಂದ ವಿನಾಯಕ ಆಟೋ ನಿಲ್ದಾಣದ ತನಕವೂ ಸರ್ವಿಸ್ ರಸ್ತೆ ತೋಡಾಗಿ ಮಾರ್ಪಟ್ಟಿತ್ತು.