ಕುಂದಾಪ್ರ ಡಾಟ್ ಕಾಂ ವರದಿ.
ಕುಂದಾಪುರ: ಕುಂದಾಪುರ ನೆಲದ ಭಾಷೆ ಕುಂದಾಪ್ರ ಕನ್ನಡದ ಅಭಿವೃದ್ಧಿ ಹಾಗೂ ತುಲನಾತ್ಮಕ ಅಧ್ಯಯನದ ದೃಷ್ಟಿಯಿಂದ ಕುಂದಾಪ್ರ ಕನ್ನಡ ಅಧ್ಯಯನ ಪೀಠ ಆರಂಭಿಸಲು ಮಂಗಳೂರು ವಿಶ್ವವಿದ್ಯಾನಿಲಯ ನಿರ್ಧರಿಸಿದ್ದು, ಕುಂದಾಪ್ರ ಕನ್ನಡ ಭಾಷೆಯ ಉಳಿವು, ಪ್ರಸರಣ ಹಾಗೂ ದಾಖಲಾತಿ ದೃಷ್ಟಿಯಿಂದ ದಶಕಗಳ ಬೇಡಿಕೆಗೆ ಜೀವಕಳೆ ಬಂದಂತಾಗಿದೆ.
ಕುಂದಾಪ್ರ ಕನ್ನಡ ಅಧ್ಯಯನ ಪೀಠ ಆರಂಭಕ್ಕೆ ಕಳೆದೆರಡು ವರ್ಷಗಳಿಂದ ಹೆಚ್ಚಿನ ಆಸ್ಥೆ ವಹಿಸಿದ್ದ ಮಂಗಳೂರು ವಿಶ್ವವಿದ್ಯಾನಿಲಯ ಸರಕಾರಕ್ಕೆ ಪ್ರಸ್ತಾವನೆಯನ್ನೂ ಸಲ್ಲಿಸಿತ್ತು. ಸಿಂಡಿಕೇಟ್ ಸಭೆಯಲ್ಲಿ ಈ ಬಗ್ಗೆ ಆರಂಭದಲ್ಲಿ ವಿಶ್ವ ವಿದ್ಯಾನಿಲಯದ ಆಂತರಿಕ ಸಂಪನ್ಮೂಲದಿಂದ ರೂ.25 ಲಕ್ಷ ಹಣವನ್ನು ಮೀಸಲಿರಿಸಲಾಗಿದ್ದು, ಸರಕಾರದ ಅನುದಾನವನ್ನು ನಿರೀಕ್ಷಿಸಲಾಗಿದೆ.
ಕುಂದಾಪ್ರ ಕನ್ನಡದಲ್ಲಿ ಸಾಹಿತ್ತಿಕ ಚಟುವಟಿಕೆಗಳು, ತುಲನಾತ್ಮಕ ಅಧ್ಯಯನ, ಸಂಶೋಧನೆ, ವಿಚಾರ ಸಂಕೀರಣ, ಭಾಷಾ ಬೆಳವಣಿಗೆಗೆ ಪೂಕರ ಕಾರ್ಯಕ್ರಮಗಳು, ಈ ನೆಲದ ಐತಿಹ್ಯವನ್ನು ಬೆಳಕಿಗೆ ತರುವ ಕಾರ್ಯಚಟುವಟಿಕೆಗಳು ಸೇರಿದಂತೆ ಹಲವು ವಿಚಾರಗಳು ಅಧ್ಯಯನ ಪೀಠದ ಮೂಲಕ ನಡೆಯಲಿದೆ. ಕುಂದಾಪ್ರ ಡಾಟ್ ಕಾಂ ವರದಿ.
ಅಧ್ಯಯನ ಪೀಠ ಕುಂದಾಪುರದಲ್ಲಿಯೇ ಆಗಲಿ:
ಮಂಗಳೂರು ವಿಶ್ವವಿದ್ಯಾನಿಲಯ ಆರಂಭಿಸಲಿರುವ ಕುಂದಾಪ್ರ ಕನ್ನಡ ಅಧ್ಯಯನ ಪೀಠ ಕುಂದಾಪುರದಲ್ಲಿಯೇ ಆಗುವುದು ಸೂಕ್ತ ಹಾಗೂ ಸಮಂಜಸವೂ ಆಗಿದೆ. ಬೇರೆ ಭಾಷಾ ಪ್ರಭಾವ ಇರುವಲ್ಲಿ ಕುಂದಾಪ್ರ ಕನ್ನಡ ಅಧ್ಯಯನ ಪೀಠ ಆರಂಭವಾದರೆ ಅದಕ್ಕೆ ಹೆಚ್ಚಿನ ಮನ್ನಣೆಯಾಗಲೀ, ವಿಸ್ತಾರವಾದ ಕಾರ್ಯಚಟುವಟಿಕೆಗಳನ್ನು ಕೈಗೊಳ್ಳುವುದಕ್ಕಾಗಲಿ ಸಾಧ್ಯವಾಗದಿರಬಹುದು. ಅದರ ಬದಲಿಗೆ ಕುಂದಾಪುರ ಕನ್ನಡ ಸೊಗಡು ಹೊಂದಿರುವ ಯಾವುದಾದರೂ ಸರಕಾರಿ ಅಥವಾ ಅನುದಾನಿತ ಶಿಕ್ಷಣ ಸಂಸ್ಥೆಯಲ್ಲಿ ಕುಂದಾಪ್ರ ಕನ್ನಡ ಅಧ್ಯಯನ ಪೀಠವಾಗುವುದು ಸೂಕ್ತ ಎಂದು ಕುಂದಾಪ್ರ ಕನ್ನಡಿಗರು ಅಭಿಪ್ರಾಯ ಪಟ್ಟಿದ್ದಾರೆ. ಕುಂದಾಪ್ರ ಡಾಟ್ ಕಾಂ ವರದಿ.
* ಮಂಗಳೂರು ವಿವಿಯಲ್ಲಿ ಕುಂದಾಪ್ರ ಕನ್ನಡ ಅಧ್ಯಯನ ಪೀಠ ಆರಂಭಿಸುವ ಬಗ್ಗೆ ಸಿಂಡಿಕೇಟ್ ಸಭೆಗಳಲ್ಲಿ ಸತತವಾಗಿ ಚರ್ಚೆಯಾಗಿದೆ. 3 ತಿಂಗಳ ಹಿಂದೆಯೇ ಸರಕಾರಕ್ಕೂ ವಿವಿ ಪ್ರಸ್ತಾಪ ಕಳುಹಿಸಿದೆ. ಆರಂಭಿದಲ್ಲಿ ಆಂತರಿಕ ಸಂಪನ್ಮೂಲವನ್ನು ಬಳಸಿಕೊಂಡು ಅಧ್ಯಯನ ಕೇಂದ್ರ ಸ್ಥಾಪಿಸುವ ನಿರ್ಣಯವನ್ನು ಕೈಗೊಳ್ಳಲಾಗಿತ್ತು. ಕುಂದಾಪ್ರ ಕನ್ನಡ ಅಧ್ಯಯನ ಕೇಂದ್ರವನ್ನು ಕುಂದಾಪ್ರ ಕನ್ನಡ ಭಾಷಿಕರೇ ಹೆಚ್ಚಿರುವ ಭಾಗದ ಯಾವುದಾದರೂ ಸರಕಾರಿ ಅಥವಾ ಅನುದಾನಿತ ಕಾಲೇಜಿನಲ್ಲಿ ಆರಂಭಿಸಬೇಕು ಎಂಬುದು ನನ್ನ ಅಭಿಪ್ರಾಯವಾಗಿತ್ತು. ಅಧ್ಯಯನ ಕೇಂದ್ರದ ಕಾರ್ಯಚಟುವಟಿಕೆಗಳನ್ನು ಮುಂದುವರಿಸಲು ಸ್ನಾತಕೋತ್ತರ ವಿಭಾಗದ ನುರಿತ ಪ್ರಾಧ್ಯಾಪಕರು ಬೇಕಾಗಿರುವುದರಿಂದ ವಿವಿಯಲ್ಲಿಯೇ ಆರಂಭಿಸುವುದು ಸೂಕ್ತ ಎಂಬ ಅಭಿಪ್ರಾಯವೂ ಸಬೆಯಲ್ಲಿ ವ್ಯಕ್ತವಾಗಿತ್ತು. ಕುಂದಾಪುರದಲ್ಲಿಯೇ ಅಧ್ಯಯನ ಕೇಂದ್ರ ಆರಂಭ ಸೂಕ್ತ ಎಂಬ ಅಭಿಪ್ರಾಯವನ್ನು ಮರುವಿಮರ್ಷೆ ಮಾಡುವಂತೆ ಮುಂದಿನ ಸಿಂಡಿಕೇಟ್ ಸಭೆಯಲ್ಲಿ ತಿಳಿಸಲಾಗುವುದು. – ಪ್ರೋ. ಕರುಣಾಕರ ಎ. ಕೋಟೆಗಾರ್, ಸಿಂಡಿಕೇಟ್ ಸದಸ್ಯರು, ಮಂಗಳೂರು ವಿಶ್ವವಿದ್ಯಾನಿಲಯ
ನಾಮಕಾವಸ್ಥೆ ಆಗದಿರಲಿ:
ಬಹುಪಾಲು ಅಧ್ಯಯನ ಪೀಠಗಳು ನಾಮಕಾವಸ್ಥೆಯ ಸಂಸ್ಥೆಗಳಾಗಿವೆ. ಸರಕಾರದಿಂದ ಸಮರ್ಪಕ ಅನುದಾನ ದೊರೆಯದಿರುವುದು, ಜಾತಿ ಹಾಗೂ ಹುದ್ದೆಯ ರಾಜಕಾರಣ, ಹಾಲಿ ಉಪನ್ಯಾಸಕರಿಗೆ ವಹಿಸುವ ಹೆಚ್ಚುವರಿ ಜವಾಬ್ದಾರಿ ಮೊದಲಾದ ಕಾರಣಗಳಿಂದಾಗಿ ಅಧ್ಯಯನ ಪೀಠಗಳು ಸೊರಗಿವೆ. ಕುಂದಾಪ್ರ ಕನ್ನಡ ಅಧ್ಯಯನ ಪೀಠ ಆರಂಭಿಸುವ ನಿರ್ಧಾರ ಸ್ವಾಗತಾರ್ಹವೇ ಆದರೂ ಆರಂಭಿಕ ನಿಧಿಯ ಜೊತೆಗೆ ಸರಕಾರ ಹೆಚ್ಚಿನ ಅನುದಾನ ಒದಗಿಸುವುದು ಅಗತ್ಯವಿದೆ. ಕುಂದಾಪ್ರ ಡಾಟ್ ಕಾಂ ವರದಿ.
ಕುಂದಾಪ್ರ ಕನ್ನಡ ವಿಶಿಷ್ಟ ಭಾಷಾ ಪ್ರಾಕಾರವಾಗಿದ್ದು, ಅದರ ಉಳಿವು ಹಾಗೂ ದಾಖಲಿಕರಣ ಬಹುಮುಖ್ಯವಾಗಿದೆ. ಇದಕ್ಕೆ ಪುರಕವಾಗಿ ಕುಂದಾಪ್ರ ಕನ್ನಡದ ಸಾಹಿತ್ಯ ಚಟುವಟಿಕೆಗಳು ನಡೆಯುವುದು, ಪುಸ್ತಕಗಳು ಪ್ರಕಟಗೊಳ್ಳುವುದು ಮತ್ತು ಆ ಮೂಲಕ ಕುಂದಾಪ್ರ ಕನ್ನಡದ ಭಾಷಿಕರನ್ನು ಸೆಳೆಯುವುದು ಬಹುಮುಖ್ಯವಾಗಿದೆ. ಈ ಬಗ್ಗೆ ಜನಪ್ರತಿನಿಧಿಗಳು ಹಾಗೂ ಅಧ್ಯಯನ ಪೀಠದ ಜವಾಬ್ದಾರಿ ಹೊರುವವರು ಯೋಚಿಸಬೇಕಿದೆ. / ಕುಂದಾಪ್ರ ಡಾಟ್ ಕಾಂ ವರದಿ/
