ಕುಂದಾಪುರ: ಸಿಹಿನೀರಿನ ಮರಳುಗಾರಿಕೆ ಟೆಂಡರ್ ಕರೆಯಲು ವಿಳಂಬ ಮಾಡುತ್ತಿರುವ ಜಿಲ್ಲಾಡಳಿತ ಕ್ರಮ ಖಂಡಿಸಿ ಹಿಂದಿನ ಬೆಲೆಗಿಂತ ದುಪ್ಪಟ್ಟು ಬೆಲೆಯಲ್ಲಿ ಮರಳನ್ನು ಮಾರಾಟ ಮಾಡುತ್ತಿರುವ ಕಾಳಸಂತೆಕೋರರ ಮೇಲೆ ಕ್ರಮ ಜರುಗಿಸಲು ವಿಫಲವಾಗಿರುವ ಜಿಲ್ಲಾಡಳಿತದ ವೈಪಲ್ಯ ವಿರೋಧಿಸಿ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರು ಅಕ್ಟೋಬರ್ 05 ರಿಂದ ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿಗಳ ಕಛೇರಿ ಎದುರುಗಡೆ ಅನಿರ್ಧಿಷ್ಟಾವಧಿ ಧರಣಿ ಸತ್ಯಾಗ್ರಹ ನಡೆಸಲಿದ್ದಾರೆ.
ಕಳೆದ ಹಲವಾರು ತಿಂಗಳುಗಳಿಂದ ಜಿಲ್ಲೆಯಲ್ಲಿ ಸಹಿನೀರಿನ ಮರಳುಗಾರಿಕೆಗೆ ನಿರ್ಬಂಧ ಹೇರಲಾಗಿದ್ದು, ಇಂದಿಗೂ ತೆರವುಗೊಳಿಸದೇ ಮರಳು ನೀತಿಯ ಹೆಸರಲ್ಲಿ ವಿಳಂಬ ಮಾಡುತ್ತಿದ್ದು, ಮಧ್ಯವರ್ತಿಗಳಿಗೆ ಕೃತಕ ಅಭಾವ ಸೃಷ್ಠಿಸಲು ಅನುಕೂಲ ಮಾಡಿಕೊಟ್ಟಿದೆ. ಇದರಿಂದಾಗಿ ಮರಳು ಕಾಳ ಸಂತೆಯಲ್ಲಿ ದುಪ್ಪಟ್ಟು ಬೆಲೆಗೆ ಮಾರಾಟ ಮಾಡಲಾಗುತ್ತಿದೆ. ಈ ಹಿಂದೆ 407 ಒಂದು ಲಾರಿ ಯೂನಿಟ್‌ಗೆ ಇದ್ದರೂ. 2,000/- ಇಂದು ಬರೋಬ್ಬರಿ 2800 ರೂಪಾಯಿಗಳನ್ನು ವಸೂಲಿಮಾಡಲಾಗುತ್ತಿದೆ. ಇದರಿಂದ ಕಟ್ಟಡ ಕಾರ್ಮಿಕರಿಗೆ, ಜನಸಾಮಾನ್ಯರಿಗೆ ಮನೆಕಟ್ಟಲು ಮರಳು ಖರೀದಿಸಲಾಗದೆ ನಿರ್ಮಾಣ ಕೆಲಸಗಳು ಕುಂಠಿತಗೊಂಡಿದೆ.
ಸಪ್ಟೆಂಬರ್ ತಿಂಗಳಿನಲ್ಲಿ ಉಡುಪಿ ಜಿಲ್ಲಾ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಸಮನ್ವಯ ಸಮಿತಿ (ಸಿಐಟಿಯು) ನಿಯೋಗವು ಜಿಲ್ಲೆಯ ಉಸ್ತುವಾರಿ ಸಚಿವ ವಿನಯಕುಮಾರ್ ಸೊರಕೆಯವರನ್ನು ಭೇಟಿ ಮಾಡಿ ಮನವಿ ನೀಡಿದರೂ ಸಮಸ್ಯೆ ಶೀಘ್ರ ಬಗೆಹರಿಸಲು ಮುಂದಾಗಿಲ್ಲ. ಜಿಲ್ಲೆಯ ಶಾಸಕರುಗಳು ಕಟ್ಟಡ ಕಾರ್ಮಿಕರ ದುಡಿಮೆಯನ್ನು ಕಡೆಗಣಿಸುತ್ತಿರುವ ಹಿನ್ನಲೆಯಲ್ಲಿ ಅನಿರ್ಧಿಷ್ಠಾವಧಿ ಧರಣಿ ನಡೆಸಲಾಗುತ್ತಿದೆ ಎಂದು ಸಂಘದ ಪ್ರಕಟಣೆ ತಿಳಿಸಿದೆ