ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ, ಜು.26: ಕುಂದಾಪ್ರ ಕನ್ನಡ ಭಾಷಿಕರ ಸಂಭ್ರಮ 4ನೇ ವರ್ಷದ ವಿಶ್ವ ಕುಂದಾಪ್ರ ಕನ್ನಡ ದಿನ ವಿಶ್ವದ ವಿವಿಧೆಡೆ ಪ್ರತಿ ವರ್ಷ ಆಚರಿಸಲಾಗುತ್ತಿದೆ. ಶಿರೂರಿನಿಂದ ಹೆಬ್ರಿ ಬ್ರಹ್ಮಾವರದ ತನಕ ವಿಸ್ತರಿಸಿರುವ ಕುಂದಾಪ್ರ ಕನ್ನಡ ಭಾಷಾ ಸೊಬಗಿನ ವಿಶಿಷ್ಟತೆಯನ್ನು ಹಂಚಿಕೊಳ್ಳುತ್ತಾ ಸಂಭ್ರಮಿಸುವ ಸಲುವಾಗಿ 2019ರಿಂದ ಆಸಾಡಿ ಅಮವಾಸ್ಯೆ ದಿನ ವಿಶ್ವ ಕುಂದಾಪ್ರ ಕನ್ನಡ ದಿನ ಆಚರಣೆಗೆ ಚಾಲನೆ ನೀಡಲಾಗಿದ್ದು, ಈ ಭಾರಿ ಜೂನ್ 28ರಂದು ಆಚರಿಸಲಾಗುತ್ತಿದೆ.
ಕುಂದಾಪುರ ತಾಲೂಕಿನ ವಿವಿಧೆಡೆ ಸಂಭ್ರಮ:
ಜು.28ರಂದು ಕುಂದಾಪುರದಲ್ಲಿ ವಿಠಲವಾಡಿ ಫ್ರೆಂಡ್ಸ್ ವತಿಯಿಂದ ಹಾಡುಗಳ ಸ್ವರ್ಧೆ ಆಯೋಜಿಸಲಾಗಿದೆ. ತೆಕ್ಕಟ್ಟೆಯ ಹಯಗ್ರೀವ ಕಲ್ಯಾಣ ಮಂಟಪದಲ್ಲಿ ಯಕ್ಷದೀಪ ಕಲಾ ಟ್ರಸ್ಟ್ ವತಿಯಿಂದ ಕುಂದಾಪ್ರ ಕನ್ನಡತಿ ನಾಟ್ಯವಲ್ಲಿ ಎಂಬ ಯಕ್ಷಗಾನ ಪ್ರದರ್ಶನ ಜರುಗಲಿದೆ. ಡಾ. ಬಿ. ಬಿ. ಹೆಗ್ಡೆ ಕಾಲೇಜಿನಲ್ಲಿ ಮಕ್ಕಳಿಗಾಗಿ ವಿವಿಧ ಕಾರ್ಯಕ್ರಮ ಆಯೋಜಿಸಲಾಗಿದೆ. ಮಿತ್ರ ಸಂಗಮ ಬೀಜಾಡಿ ವತಿಯಿಂದ ಮಿತ್ರ ಸೌಧದಲ್ಲಿ ಗಾಯಕಿ ಸುಷ್ಮಾ ಆಚಾರ್ಯ ಅವರಿಂದ ‘ಗೀತಾ ಗಾಯನ’, ವಿಶೇಷ ಲಘು ಉಪಹಾರ ಇರಲಿದೆ. ಕುಂದಾಪುರ ಜೆಸಿ ಭವನದಲ್ಲಿ ಎಸ್.ಪಿ. ಮ್ಯೂಸಿಕಲ್ ಕುಂದಾಪುರ ಆಶ್ರಯದಲ್ಲಿ ವಿಶ್ವ ಕುಂದಾಪ್ರ ಕನ್ನಡ ದಿನ, ಸಂಗೀತ ಕಾರ್ಯಕ್ರಮ, ಕಾರ್ತಿಕ್ರಾಜ್ ಸಂಗೀತ ಸಂಯೋಜನೆಯ ಹಾಡುಗಳ ಕಾರ್ಯಕ್ರಮ ನಡೆಯಲಿದೆ. ಕರ್ಕುಂಜೆ ಸೊರೆಮಕ್ಕಿಯ ಯಕ್ಷಿ ಫ್ರೆಂಡ್ಸ್ ನವರು ಗಡ್ಜ್ ಗಮ್ಮತ್ತ್ ಎಂಬ ಕಾರ್ಯಕ್ರಮ ಹಮ್ಮಿಕೊಂಡಿದ್ದು ಅದರಲ್ಲಿ ‘ಕೆಸ್ ಪಂತ, ಹಾಡ್, ಬಣ್ಣು ಉಂಬೈ ಕೊಡ್ತಾ’ ಎಂದು ಕಾರ್ಯಕ್ರಮ ನಡೆಯಲಿದೆ. ಜು.27ರ ಸಂಜೆ 7 ಗಂಟೆಗೆ ಬೈಲ್ಮನಿ ಕ್ರಿಯೇಷನ್ಸ್ ಯುಟ್ಯೂಬ್ ಚಾನೆಲಿನಲ್ಲಿ ಬಯಾಪತಿಗೊಂದ್ ಪಟ್ಟಾಂಗ ಕಾರ್ಯಕ್ರಮ ನಡೆಯಲಿದ್ದು, ಕುಂದಾಪ್ರ ಕನ್ನಡದ ವಿವಿಧ ಕಲಾವಿದರು ಭಾಗವಹಿಸಲಿದ್ದಾರೆ.
ಬೆಂಗಳೂರಿನಲ್ಲಿ ಸಂಭ್ರಮ:
ಬೆಂಗಳೂರಿನ ವಿಜಯನಗರದ ಬಂಟರ ಸಂಘದಲ್ಲಿ ವಿಶ್ವಕುಂದಾಪ್ರ ಕನ್ನಡ ದಿನಾಚರಣೆಯನ್ನು ಅದ್ದೂರಿಯಾಗಿ ಆಯೋಜಿಸಲಾಗಿದೆ. ಕುಂದಾಪ್ರ ಕಟ್ಕಟ್ಲೆ ಎಂಬ ನಮ್ಮ ಆಚರಣೆ ಆರಾಧನೆ ಬಗೆಗಿನ ಕಾರ್ಯಕ್ರಮ, ಸಾನ್ವಿ ಶೆಟ್ಟಿಯಿಂದ ಕುಂದಾಪ್ರ ಗೀತ ಗಾಯನ, ಮನು ಹಂದಾಡಿ ಅವರಿಂದ ಕುಂದಾಪ್ರ ಕನ್ನಡದ್ ಸರ್ಪಾಟಾಕಿ, ಚೇತನ ನೈಲಾಡಿ ತಂಡದಿಂದ ಹೆಂಗ್ಸರ್ ಪಂಚೇತಿ, ಬೆಂಗಳೂರು ಬಂಟರ ಸಂಘದ ನೇತೃತ್ವದಲ್ಲಿ ಕುಶ ಲವ ಯಕ್ಷಗಾನ ನಡೆಇದೆ. ವಿವಿಧ ಅತಿಥಿ ಗಣ್ಯರ ಉಪಸ್ಥಿತಿಯಲ್ಲಿ ಸಭಾ ಕಾರ್ಯಕ್ರಮ ಜರುಗಲಿದ್ದು, ನೇತ್ರ ತಜ್ಞ ಭುಜಂಗ ಶೆಟ್ಟಿ, ಸಂಗೀತ ನಿರ್ದೇಶಕ ರವಿ ಬಸ್ರೂರು ಅವರಿಗೆ ಗೌರವಾಭಿನಂದನೆ ನಡೆಯಲಿದೆ.
ದುಬೈನಲ್ಲಿಯೂ ಸಂಭ್ರಮ:
ದುಬೈನಲ್ಲಿ ನಮ್ಮ ಕುಂದಾಪ್ರ ಕನ್ನಡ ಬಳಗ ಗಲ್ಫ್ ಸಂಘಟನೆಯಿಂದ ಅಂತರ್ಜಾಲದ ಕಾರ್ಯಕ್ರಮ ಆಯೋಜಿಸಲಾಗಿದ್ದು, ವಿವಿಧ ಅತಿಥಿ ಗಣ್ಯರು, ಗಲ್ಫ್ ದೇಶದ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ. ಬಸ್ರೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಮೊಕ್ತೇಸರರಾದ ಬಿ. ಅಪ್ಪಣ್ಣ ಹೆಗ್ಡೆ ಅವರು ಝೋಮ್ ಆ್ಯಪ್ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. ಬಳಿಕ ವಿವಿಧ ಕಲಾತಂಡಗಳಿಂದ ನೃತ್ಯ, ಗೀತಗಾಯನ ನಡೆಯಲಿದೆ. ನಮ್ಮ ಕುಂದಾಪ್ರ ಕನ್ನಡ ಬಳಗದ ಅಧ್ಯಕ್ಷ ಸದನ್ ದಾಸ್ ಈ ಕಾರ್ಯಕ್ರಮ ಸಂಘಟಿಸಿದ್ದಾರೆ.
ಶಿರಿಯಾರ:
ಜು. 30ರಂದು ಶಿರಿಯಾರದಲ್ಲಿ ಕುಂದಗನ್ನಡ ಕಂಬಳೋತ್ಸವ ಆಯೋಜಿಸಲಾಗಿದೆ. ಕೋಟ ಸಮೀಪದ ಶಿರಿಯಾರದ ಗದ್ದೆ ಬಯಲಿನಲ್ಲಿ ಯಕ್ಷಗಾನದ ಗಿರ್ಕಿ, ಹುಲಿವೇಷದ ಆರ್ಭಟ, ಕೋಳಿ ಹುಂಜನ್ ಹರ್ತಾಟ, ಕಂಬಳದ್ ಕ್ವಾಣದ್ ಓಟ, ಕೆಸ್ರ ಗೆದ್ದಿ ಆಟದ್ ಜೊತಿಗೆ ಹಂದಾಡಿ ನೈಲಾಡಿ ಕೂಟ ಇರಲಿದೆ.
ಧಾರವಾಡದಲ್ಲಿ ಕಾರ್ಯಕ್ರಮ:
ಧಾರವಾಡದ ಎಲ್ಐಸಿ ರಸ್ತೆಯ ನೌಕರರ ಭವನದಲ್ಲಿ ವಿಶ್ವ ಕುಂದಾಪ್ರ ಕನ್ನಡ ದಿನಾಚರಣೆ ನಿಮಿತ್ತ ರಕ್ತದಾನ ಶಿಬಿರ ನಡೆಯಲಿದೆ. ವಿದ್ಯಾವರ್ಧಕ ಸಂಘ ಧಾರವಾಡದಲ್ಲಿ ಬಿಗ್ಬಾಸ್ ಖ್ಯಾತಿಯ ಭೂಮಿ ಶೆಟ್ಟಿ, ನಟ, ಜಾದೂಗಾರ ಓಂಗಣೇಶ್ ಉಪುಂದ ಅವರಿಂದ ಭಾಷಣ ಇರಲಿದೆ. ರೂಪಕಲಾ ಕುಂದಾಪ್ರ ತಂಡದಿಂದ ಮೂರು ಮುತ್ತು ನಾಟಕ ಪ್ರದರ್ಶನ ನಡೆಯಲಿದೆ.
ಕಾರ್ಕಳ:
ಕಾರ್ಕಳದ ಪ್ರಕಾಶ್ ಹೊಟೇಲ್ನಲ್ಲಿ ಜುಲೈ 28ರ ಸಂಜೆ 5 ಗಂಟೆಗೆ ಕ.ಸಾ.ಪ. ಕಾರ್ಕಳ ವತಿಯಿಂದ ಕುಂದಾಪ್ರ ಕನ್ನಡ ಕುರಿತು ಕಾಠ್ಯಕ್ರಮ ನಡೆಯಲಿದೆ.
ಗಿಳಿಯಾರು – ಅಂಪಾರು
ವಿಶ್ವ ಕುಂದಾಪ್ರ ಕನ್ನಡ ದಿನದ ಅಂಗವಾಗಿ ಗಿಳಿಯಾರಿನಲ್ಲಿ ಜು.24ರಂದು ‘ಕೆಸರಂಗ್’ ಗ್ರಾಮೀಣ ಕ್ರೀಡೆಯನ್ನು ಆಯೋಜಿಸಿ ಸಂಭ್ರಮಿಸಲಾಗಿದೆ. ಜು.24ರಂದು ಅಂಪಾರು ಶಾನ್ಕಟ್ಟುವಿನಲ್ಲಿ ಅಂಶಂ ಕುಂದಾಪ್ರ ಕನ್ನಡ ಕುಟುಂಬದಿಂದ ಕೆಸರಾಟ, ಗಂಜಿ ಕಾಣಿ ಮೀನಿನ ಊಟವನ್ನು ಆಯೋಜಿಸಿ ಸಂಭ್ರಮಿಸಲಾಗಿದೆ.
ಕಾಗ್ದದ್ ದೋಣಿ ಪುಸ್ತಕ
ಅಗ್ರಣಿ ಪ್ರಕಾಶನ ವಿಶ್ವ ಕುಂದಾಪ್ರ ಕನ್ನಡದ ದಿನದ ಅಂಗವಾಗಿ ಅಬ್ಬಿಗೊಂದು ಕಾಗ್ದ ಸ್ವರ್ಧೆಯ ಆಯ್ದ ಕಾಗ್ದಗಳ ಸಂಕಲನವನ್ನು ಪ್ರಕಟಿಸುತ್ತಿದ್ದು ‘ಕಾಗ್ದದ್ ದೋಣಿ’ ಹೆಸರಿನಲ್ಲಿ ಓದುಗರ ಕೈಸೇರಲಿದೆ.