ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ತಾಲೂಕಿನ ಶಿರೂರು ಗ್ರಾಮದ ನೆರೆ ಹಾನಿ ಪ್ರದೇಶಗಳಿಗೆ ಉಡುಪಿ ಜಿಲ್ಲಾಧಿಕಾರಿ ಕೂರ್ಮರಾವ್ ಎಂ. ಅವರು ಮಂಗಳವಾರ ಭೇಟಿ ನೀಡಿ, ನೆರೆ ಸಂತ್ರಸ್ಥರೊಂದಿಗೆ ಮಾತುಕತೆ ನಡೆಸಿದ್ದಾರೆ.
ಈ ವೇಳೆ ಅಧಿಕಾರಿಗಳೊಂದಿಗೆ ಮಾತನಾಡಿ ತಕ್ಷಣದಿಂದ ಸುರಕ್ಷತಾ ಕ್ರಮ ಮತ್ತು ಮುಂಜಾಗ್ರತೆ ತೆಗೆದುಕೊಳ್ಳುವಂತೆ ತಿಳಿಸಿದ್ದು, ಪರಿಹಾರ ವಿತರಣೆಗೆ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಅವರು ತಿಳಿಸಿದ್ದಾರೆ.
ಶಿರೂರು ಗ್ರಾಮದ ಚಿಲುಮೆ, ಪೇಟೆ ಮುಂತಾದೆಡೆ ನದಿ ತೊರೆಗಳು ತುಂಬಿ ಹರಿದಿದ್ದು ಒಮ್ಮೆಲ್ಲೆ ನೀರು ಏರಿದ ಪರಿಣಾಮ ಪೇಟೆ, ಕೆಸರಕೋಡಿ, ಹಡವಿನಕೋಣೆ, ಕುಂಬಾರಕೇರಿ, ಬೈಂದೂರು ಪಟ್ಟಣ ಪಂಚಾಯತ್ ವ್ಯಾಪ್ತಿಯ ಪಡುವರಿ ಸೇರಿದಂತೆ ಬಹುತೇಖ ಭಾಗ ಜಲಾವೃತಗೊಂಡಿತ್ತು.
ಶಿರೂರು ಕುಂಬಾರಕೇರಿಯಲ್ಲಿ ಎರಡು ಮನೆ ಕುಸಿದಿದೆ. ಕಳುಹಿತ್ಲುವಿನಲ್ಲಿ ಇಪ್ಪತ್ತಕ್ಕೂ ಅಧಿಕ ದೋಣಿ ನಾಪತ್ತೆಯಾಗಿದೆ. ಹಡವಿನಕೋಣೆಯಲ್ಲಿ ಬಹುತೇಖ ದೋಣಿಯ ಹೊಸ ಬಲೆಗಳು ನದಿ ಪಾಲಾಗಿದೆ. ಇಪ್ಪತ್ತೈದಕ್ಕೂ ಅಧಿಕ ಮನೆ ಜಲಾವೃತಗೊಂಡಿದೆ. ನಿರೋಡಿಯಲ್ಲಿ ಎಂಟು ಹಸುಗಳು ನೀರುಪಾಲಾಗಿದೆ. ಎರಡು ಮನೆ ಕುಸಿಯುವ ಭೀತಿ ಇದೆ ಎದುರಾಗಿತ್ತು.
ಬೈಂದೂರು ತಾಲೂಕಿನಲ್ಲಿ 216.4 ಮಿ.ಮಿ ಮಳೆಯಾಗಿತ್ತು. ಮಂಗಳವಾರ ಮಧ್ಯಾಹ್ನದ ವೇಳೆಗೆ ಮಳೆ ಕಡಿಮೆಯಾಗಿದ್ದು, ನೆರೆ ಇಳಿಮುಖವಾಗಿದೆ. ಮನೆ ಹಾನಿ, ಮನೆಯಲ್ಲಿನ ವಸ್ತುಗಳು, ದೋಣಿ, ಬಲೆ ಸೇರಿದಂತೆ ಶಿರೂರು ಗ್ರಾಮವೊಂದರಲ್ಲೇ 5 ಕೋಟಿಗೂ ಅಧಿಕ ಹಾನಿಯಾಗಿರುವ ಬಗ್ಗೆ ಅಂದಾಜಿಸಲಾಗಿದೆ.
ಜಿಲ್ಲಾಧಿಕಾರಿ ಭೇಟಿ ವೇಳೆ ಕುಂದಾಪುರ ಉಪವಿಭಾಗಾಧಿಕಾರಿ ರಾಜು ಕೆ., ಡಿವೈಎಸ್ಪಿ ಶ್ರೀಕಾಂತ್, ತಹಶೀಲ್ದಾರ್ ಕಿರಣ ಗೌರಯ್ಯ, ವೃತ್ತ ನಿರೀಕ್ಷಕ ಸಂತೋಷ ಕಾಯ್ಕಿಣಿ, ಶಿರೂರು ಗ್ರಾಮ ಪಂಚಾಯತ್ ಅಧ್ಯಕ್ಷ ದಿಲ್ಶಾದ್ ಬೇಗಂ, ಉಪಾಧ್ಯಕ್ಷ ರವೀಂದ್ರ ಶೆಟ್ಟಿ, ಬೈಂದೂರು ಇಓ ಭಾರತಿ, ಬೈಂದೂರು ಠಾಣಾಧಿಕಾರಿ ಪವನ್ ನಾಯಕ್, ಶಿರೂರು ವೈದ್ಯಾಧಿಕಾರಿ ಸಹನಾ ಸೇರಿದಂತೆ ಗ್ರಾಮ ಪಂಚಾಯತ್ ಸದಸ್ಯರು, ಅಧಿಕಾರಿಗಳು ಉಪಸ್ಥಿತರಿದ್ದರು.
ಇದನ್ನೂ ಓದಿ:
► ಭಾರಿ ಮಳೆಗೆ ತತ್ತರಿಸಿದ ಶಿರೂರು ಗ್ರಾಮ. ಬೈಂದೂರು ತಾಲೂಕಿನ ಹಲವೆಡೆ ಜಲಾವೃತ – https://kundapraa.com/?p=61097 .
► ಭಾರಿ ಮಳೆ: ಕುಂದಾಪುರ, ಬೈಂದೂರು ತಾಲೂಕಿನ ಶಾಲಾ-ಕಾಲೇಜುಗಳಿಗೆ ಇಂದು (ಅ.2) ರಜೆ – https://kundapraa.com/?p=61111 .
► ಬೈಂದೂರು ತಾಲೂಕಿನಲ್ಲಿ 5.5 ಕೋಟಿಗೂ ಅಧಿಕ ಮಳೆ ಹಾನಿ ಅಂದಾಜು – https://kundapraa.com/?p=61117 .