ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಕುಂದಾಪುರ ಪುರಸಭೆ ನೇತೃತ್ದಲ್ಲಿ ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ, ತಾಲೂಕು ಪಂಚಾಯಿತಿ ಆಶ್ರಯದಲ್ಲಿ ಇಲ್ಲಿನ ಗಾಂಧಿ ಮೈದಾನದಲ್ಲಿ ಸೋಮವಾರ ಸ್ವಾತಂತ್ರ್ಯೋತ್ಸವ ಸಂಭ್ರಮದಿಂದ ಜರುಗಿತು.
ಕುಂದಾಪುರ ಉಪವಿಭಾಗಾಧಿಕಾರಿ ರಾಜು ಕೆ. ಅವರು ಧ್ವಜಾರೋರಣೆ ನೆರವೇರಿಸಿದ ಬಳಿಕ ಗೌರವ ವಂದನೆ ಸ್ವೀಕರಿಸಿ ಮಾತನಾಡಿ ಶ್ರದ್ದೆ, ತ್ಯಾಗದ ಸ್ಮರಣೆ ಮತ್ತು ರಾಷ್ಟ್ರಜಾಗೃತಿಯ ಸಂದರ್ಭ ಸ್ವಾತಂತ್ರ್ಯದ 75 ವರ್ಷಗಳ ಅಧ್ಯಾಯ ಪ್ರಸ್ತುತ ತಲೆಮಾರಿನ ಮುನ್ನಡೆಗೆ ನಿರಂತರ ಪ್ರೇರಣೆಗೆ, ಅನ್ವೇಷಣೆಗೆ ಖಚಿತ ಭರವಸೆ ದಿಕ್ಕಿನತ್ತ ಸಾಗಲು ಹೊಸ ಹುರುಪು ನೀಡುವ ಮಹಾದಿನ ಎಂದರು.
ಅಸಂಖ್ಯಾತ ಜನರ ಹೋರಾಟ, ತ್ಯಾಗವನ್ನು ಸ್ಮರಿಸಿದರೆ ಅಮೃತ ಮಹೋತ್ಸವದ ಮಹತ್ವ ಅರಿವಾಗುತ್ತದೆ. ಸುಭಾಷ್ಚಂದ್ರ ಬೋಸ್ ಭಾರತದ ಸ್ವಾತಂತ್ರ್ಯ ಹೋರಾಟ ಬ್ರಿಟಿಷರ ಸಾಮ್ರಾಜ್ಯ ಶಾಹಿ ವಿರುದ್ಧ ಮಾತ್ರವೇ ಅಲ್ಲ, ಅದು ಜಗತ್ತಿನ ಸಾಮ್ರಾಜ್ಯಶಾಹಿ ವಿರುದ್ಧ ಕೂಡಾ ಹೌದು ಎಂದಿದ್ದರು ಎಂಬ ಮಾಹಿತಿ ನೀಡಿದರು.
ಉಡುಪಿ ಜಿಲ್ಲೆ ಉದಯವಾಗಿ ರಜತ ಮಹೋತ್ಸವ ಸಂಭ್ರಮದಲ್ಲಿದೆ. ಶಿಕ್ಷಣ, ವೈದ್ಯಕೀಯ, ಪ್ರವಾಸೋದ್ಯಮ, ಧಾರ್ಮಿಕ ಹಲವು ಕ್ಷೇತ್ರಗಳಲ್ಲಿ ಅಭಿವೃದ್ಧಿ ಹೊಂದಿರುವ ಜಿಲ್ಲೆಯು ಸ್ವಾತಂತ್ರ್ಯ ಚಳವಳಿಗೂಗರಿಷ್ಠ ಕೊಡುಗೆ ನೀಡಿದೆ. ಕಡಲ ತಟಕ್ಕೆ ಅಪ್ಪಳಿಸುವ ಅಲೆ ಅಲೆಗಳು ಸಹ ಸ್ವಾತಂತ್ರ್ಯದ ಕಥನ ಹೇಳುವ ಹಿರಿಮೆ ನಮ್ಮದು ಎಂದರು.
ಸ್ವಾತಂತ್ರ್ಯದ ಹೋರಾಟವನ್ನು ಪ್ರತಿಯೊಬ್ಬ ಭಾರತೀಯರ ಹೋರಾಟವನ್ನಾಗಿ ಮಾರ್ಪಡಿಸಿದ ಗಾಂಧೀಜಿ, ಸಾವಿರಾರು ಸ್ಫೂರ್ತಿಯುತ ಹೋರಾಟಗಾರರು ನಮ್ಮ ಭಾರತದ ಹೆಮ್ಮೆ, ಇತಿಹಾಸ ಹೇಳುವಂತೆ ತ್ಯಾಗ-ಬಲಿದಾನ ಮತ್ತು ಆತ್ಮಗೌರವದ ಬಗ್ಗೆ ಮುಂದಿನ ಜನಾಂಗಗಳಿಗೆ ತಿಳಿಸಿದಾಗ ಮಾತ್ರ ದೇಶದ ಪ್ರಖ್ಯಾತಿ, ವೈಭವ ನಿರಂತರ ಜಾಗೃತಿಯಿಂದ ಇರುತ್ತದೆ. ಈ ಹಿನ್ನೆಲೆಯಲ್ಲಿ ಶ್ರೀಮಂತ ಚರಿತ್ರೆ, ಶ್ರೇಷ್ಠ ಪರಂಪರೆ, ಸಾಂಸ್ಕೃತಿಕ ವೈವಿಧ್ಯತೆ ಹೊಂದಿರುವ ನಮ್ಮ ದೇಶದ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಕ್ಷಣ ಅತ್ಯಂತ ಮಹತ್ವದ್ದಾಗಿದೆ ಎಂದರು.
ಕುಂದಾಪುರ ಪುರಸಭೆ ಅಧ್ಯಕ್ಷೆ ವೀಣಾ ಭಾಸ್ಕರ ಮೆಂಡನ್ ಅಧ್ಯಕ್ಷತೆ ವಹಿಸಿ, ಸಂದೇಶ ನೀಡಿದರು. ಉಪಾಧ್ಯಕ್ಷ ಸಂದೀಪ ಖಾರ್ವಿ, ನಗರಾಭಿವೃದ್ಧಿ ಪ್ರಾಧಿಕಾರಿ ಅಧ್ಯಕ್ಷ ವಿಜಯ ಎಸ್.ಶೆಟ್ಟಿ, ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಗಿರೀಶ್ ದೇವಾಡಿಗ, ಕುಂದಾಪುರ ತಾಪಂ ಇಒ ಶ್ವೇತಾ ಎನ್., ಕುಂದಾಪುರ ಡಿಎಸ್ಪಿ ಶ್ರೀಕಾಂತ್ ಕೆ., ಪುರಸಭೆ ಸದಸ್ಯರಾದ ವನಿತಾ, ಶ್ರೀಧರ ಶೇರೆಗಾರ್, ದೇವಕಿ ಪಿ.ಸಣ್ಣಯ್ಯ, ಚಂದ್ರಶೇಖರ ಖಾರ್ವಿ, ಪುರಸಭೆ ಮಾಜಿ ಉಪಾಧ್ಯಕ್ಷ ರಾಜೇಶ್ ಕಾವೇರಿ, ಸರ್ಕಾರಿ ಪದವಿಪೂರ್ವ ಕಾಲೇಜು ಪ್ರಾಂಶುಪಾಲ ರಾಮಕೃಷ್ಣ ಬಿ,ಜಿ., ಪುರಸಭೆ ನಾಮನಿರ್ದೇಶಕ ಸದಸ್ಯೆ ಪುಷ್ಪಾ ಶೇಟ್, ಯುವಜನ ಸೇವೆ ಮತ್ತು ಕ್ರೀಡಾಧಿಕಾರಿ ಕುಸುಮಾಕರ ಶೆಟ್ಟಿ, ಪುರಸಭೆ ಮುಖ್ಯಾಧಿಕಾರಿ ಗೋಪಾಲಕೃಷ್ಣ ಶೆಟ್ಟಿ ಇದ್ದರು.
ಅಮೃತಮಹೋತ್ಸವ ಸ್ವಾಂತ್ರ್ಯೋತ್ಸವ ಪುರ ಮೆರವಣಿಗೆಗೆ ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಪದವಿಪೂರ್ವ ಕಾಲೇಜು ಬಳಿ ಚಾಲನೆ ನೀಡಿದರು. ಕೀಲು ಕುದುರೆ, ತೊಟ್ಟಿರಾಯ, ತಂಡೆ ವಾದನ ಸಹಿತಿ ಮೆರವಣಿಗೆಯಲ್ಲಿ ಗಾಂಧಿ ಮೈದಾನಕ್ಕೆ ಮೆರವಣಿಗೆ ಸಾಗಿ ಬಂದಿತು.
ಕುಂದಾಪುರ ಪೊಲೀಸ್ ಠಾಣಾಧಿಕಾರಿ ಸದಾಶಿವ ಆರ್. ಗವರೋಜಿ ನೇತೃತ್ವದಲ್ಲಿ ಪಥಸಂಚಲನೆ ನಡೆಯಿತು, ಗೃಹರಕ್ಷಕ ದಳ, ಬಸವರಾಜ್ ಕಣ್ ಶೆಟ್ಟಿ ಪೊಲೀಸ್ ತಂಡ, ಸೈಂಟ್ ಮೇರಿ ಸ್ಕೂಲ್, ವೆಂಕಟರಮಣ ಆಂಗ್ಲಾ ಮಾಧ್ಯಮ ಶಾಲೆ ಎನ್ಸಿಸಿ, ವಡೇರಹೋಬಳಿ ಶಾಲೆ, ಸೈಂಟ್ ಜೋಸೆಫ್, ಸರ್ಕಾರಿ ಬಾಲಕಿಯ ಶಾಲೆ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ವಡೇರ ಹೋಬಳಿ, ವೆಂಕಟರಮಣ ಆಂಗ್ಲಾ ಮಾಧ್ಯಮ ಶಾಲೆ, ಹೋಲಿ ರೋಜರಿ ಶಾಲೆಗಳ ಸ್ಕೌಟ್ ಗೈಡ್, ಸೇವದಳ ತಂಡ, ಪೌರಕಾರ್ಮಿಕರು ಪಥಸಂಚಲನದಲ್ಲಿ ಪಾಲ್ಗೊಂಡರು. ಸೈಂಟ್ ಜೋಸೆಪ್ ಪ್ರೌಢಶಾಲಾ ಬ್ಯಾಂಡ್ಸೆಟ್ ತಂಡ ಪಥಸಂಲನದಲ್ಲಿ ಪಾಲ್ಗೊಂಡಿತ್ತು. ಸೈಂಟ್ ಜೋಸೆಪ್ ಹಿರಿಯ ಪ್ರಾಥಮಿಕ ಶಾಲಾ ಮಕ್ಕಳು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು.
ಪಧಸಂಚಲನದಲ್ಲಿ ಮೊಟ್ಟ ಮೊದಲ ಬಾರಿ ಕುಂದಾಪುರ ಪುರಸಭೆ ಪೌರಕಾರ್ಮಿಕರು ಪಾಲ್ಗೊಳ್ಳುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರರಾದರು. ಪೊಲೀಸ್, ಗೃಹರಕ್ಷಕ ದಳ, ಎನ್ಸಿಸಿ, ತಂಡದ ನಂತರ ಪೌರಕಾರ್ಮಿಕರ ಪಥಸಂಚನಕ್ಕೆ ಸೇರಿದ ಜನಸ್ತೋಮ ಚಪ್ಪಳೆ ಜೈಕಾರದ ಮೂಲಕ ಸ್ವಾಗತಿಸಿದರು.
ಹೆಸ್ಕುತ್ತೂರು ಸರ್ಕಾರಿ ಪ್ರೌಢಶಾಲೆ ಸಿಂಚನಾ, ಕುಂದಾಪುರ ಸರ್ಕಾರಿ ಪದವಿಪೂರ್ವ ಕಾಲೇಜ್ ಪ್ರೌಢಶಾಲೆ ವಿಭಾಗದ ದೀಕ್ಷಾ, ಸಿದ್ದಾಪುರ ಸರ್ಕಾರಿ ಪ್ರೌಢಶಾಲೆ ಚಂದ್ರ ಎಸ್.ಕೆ., ಕೋಟೇಶ್ವರ ಪಬ್ಲಿಕ್ ಸ್ಕೂಲ್ ರಜತ ಸರ್ಕಾರಿ ಶಾಲೆಯಲ್ಲಿ ಓದಿ ಎಸ್.ಎಸ್.ಎಲ್.ಸಿಯಲ್ಲಿ ಅಂಕಪಡೆದ ವಿದ್ಯಾರ್ಥಿಗಳಿಗೆ ಲ್ಯಾಪ್ಟಾಪ್ ವಿತರಿಸಲಾಯಿತು.
ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಅಧ್ಯಕ್ಷ, ತಹಶೀಲ್ದಾರ್ ಕಿರಣ್ ಜಿ. ಗೌರಯ್ಯ ಸ್ವಾಗತಿಸಿದರು. ಸೈಂಟ್ ಮೇರಿ ಸ್ಕೂಲ್ ದೈಹಿಕ ಶಿಕ್ಷಕ ಚಂದ್ರಶೇಖರ ಬೀಜಾಡಿ ನಿರೂಪಿಸಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಅರುಣ್ ಕುಮಾರ್ ಶೆಟ್ಟಿ ವಂದಿಸಿದರು.