ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಸಮಯಕ್ಕೆ ಸರಿಯಾಗಿ ಉತ್ತಮ ಹಾಗೂ ಹಿತಮಿತವಾದ ಆಹಾರ ಸೇವನೆ, ಸರಿಯಾದ ಪ್ರಮಾಣದ ನಿದ್ರೆ, ಜ್ಞಾನವನ್ನು ವೃದ್ಧಿಸುವ ಬ್ರಹ್ಮಚರ್ಯೆ ಇವುಗಳು ಆರೋಗ್ಯದ ಆಧಾರಸ್ಥಂಭಗಳು. ಪ್ರತಿಯೊಬ್ಬರೂ ಮೊದಲು ತಮ್ಮ ಕುಟುಂಬ, ಸಮಾಜದ ಸಂಬಂಧಗಳು ಮತ್ತು ಮಾನಸಿಕ ಆರೋಗ್ಯಕ್ಕೆ ಪ್ರಥಮ ಆದ್ಯತೆ ಕೊಟ್ಟಾಗ ಮಾತ್ರ ಪರಿಪೂರ್ಣ ಆರೋಗ್ಯವಂತನಾಗಲು ಸಾಧ್ಯವಾಗುತ್ತದೆ ಎಂದು ಕುತ್ಪಾಡಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಆಸ್ಪತ್ರೆಯ ಅಧೀಕ್ಷಕ ಡಾ. ನಾಗರಾಜ್ ಹೇಳಿದರು.
ಮರವಂತೆ ಬಡಾಕೆರೆ ವ್ಯವಸಾಯ ಸೇವಾ ಸಹಕಾರಿ ಸಂಘ ನಾವುಂದ ಮತ್ತು ನಾವುಂದ ಲಯನ್ಸ್ ಕ್ಲಬ್ ಆಶ್ರಯದಲ್ಲಿ ನಾವುಂದ ಶ್ರೀ ಮಹಾಗಣಪತಿ ಮಾಂಗಲ್ಯ ಮಂದಿರದಲ್ಲಿ ಗುರುವಾರ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಆಸ್ಪತ್ರೆ ತಜ್ಞ ವೈದ್ಯರಿಂದ ನಡೆದ ಉಚಿತ ಆಯುರ್ವೇದ ಆರೋಗ್ಯ ಮಾಹಿತಿ ಮತ್ತು ತಪಾಸಣಾ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಆಧ್ಯಾತ್ಮಿಕ ವ್ಯಾದಿ, ಆದಿಭೌತಿಕ ವ್ಯಾಧಿ ಹಾಗೂ ಆದಿದೈವಿಕ ವ್ಯಾದಿಗಳೇ ತಾಪತ್ರಯಗಳು. ನಮಗೆ ನಮ್ಮ ಜೀವನದ ಕಲ್ಪನೆಯೊಂದಿಗೆ ದೈವಬಲವೂ ಬೇಕು. ಪ್ರಕೃತಿಯನ್ನು ಗೌರವಿಸುವುದು ಜಲವನ್ನು ರಕ್ಷಣೆ ಮಾಡುವ ಜತೆಗೆ ಸಾಮಾಜಿಕ ನಿಯಮ ಪಾಲನೆ ನಮ್ಮಲ್ಲರ ಕರ್ತವ್ಯ ಎಂದು ಅರಿತು ನಿರ್ವಹಣೆ ಮಾಡಿದ್ದಲ್ಲಿ ಆರೋಗ್ಯ ನಿಯಂತ್ರಣವಾಗುತ್ತದೆ. ಕುಟುಬಂವೇ ನಮ್ಮ ಜಗತ್ತಾಗಿದ್ದು, ವ್ಯಕ್ತಿ ಕೌಟುಂಬಿಕ ನೆಲೆಯಲ್ಲಿ ಬದಲಾಗಬೇಕು. ಇದನ್ನು ಯಾರೂ ಕೂಡ ಸರಿಯಾಗಿ ಅರ್ಥಮಾಡಿಕೊಳ್ಳದೇ ದುಡುಕಿದ ಪರಿಣಾಮ ಇತ್ತೀಚಿನ ದಿನಗಳಲ್ಲಿ ಹೊಸಹೊಸ ರೋಗಗಳ ಸೃಷ್ಠಿ, ಕಣ್ಣಿಗೆ ಕಾಣದ ಶಕ್ತಿಯಿಂದಾಗುವ ಪ್ರಕೃತಿ ವಿಕೋಪ. ಹೀಗಾಗಿ ಆಗಂತುಕ ಕಾಯಿಲೆಗಳಿಗೆ ನಾವು ತುತ್ತಾಗುತ್ತಿದ್ದೇವೆ. ಇದನ್ನು ಆರಂಭದಿಂದಲೇ ತಡೆಯುವುದು ಹೆತ್ತವರ ಕೈಯಲ್ಲಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಸಹಕಾರಿ ಅಧ್ಯಕ್ಷ ಎಸ್. ರಾಜು ಪೂಜಾರಿ ಸ್ವಾಗತಿಸಿ, ಪ್ರಾಸ್ತಾವಿಸಿದರು. ಗ್ರಾಪಂ ಅಧ್ಯಕ್ಷೆ ಜಾನಕಿ, ಲಯನ್ಸ್ ವಲಯಾಧ್ಯಕ್ಷ ನರಸಿಂಹ ದೇವಾಡಿಗ, ನಾವುಂದ ಲಯನ್ಸ್ ಕ್ಲಬ್ ಅಧ್ಯಕ್ಷ ಜಗದೀಶ ಶೆಟ್ಟಿ ಕುದ್ರುಕೋಡು, ಕಾರ್ಯದರ್ಶಿ ದಿನೇಶ ಆಚಾರ್ಯ, ಖಜಾಂಚಿ ಸಮರ್ ಶೆಟ್ಟಿ, ಡಾ. ವಿಜಯೇಂದ್ರ ಭಟ್, ಸಹಕಾರಿ ಉಪಾಧ್ಯಕ್ಷ ಎಂ. ಚಂದ್ರಶೀಲ ಶೆಟ್ಟಿ, ನಿರ್ದೇಶಕರಾದ ವಾಸು ಪೂಜಾರಿ, ಭೋಜ ನಾಯ್ಕ್, ಜಗದೀಶ ಪಿ. ಪೂಜಾರಿ, ರಾಮೃಷ್ಣ ಖಾರ್ವಿ, ಪ್ರಕಾಶ ದೇವಾಡಿಗ, ಎಂ. ಅಣ್ಣಪ್ಪ ಬಿಲ್ಲವ, ಎಂ. ವಿನಾಯಕ ರಾವ್, ನಾರಾಯಣ ಶೆಟ್ಟಿ, ರಾಮ, ನಾಗಮ್ಮ, ಸರೋಜಾ ಗಾಣಿಗ ಇದ್ದರು. ಪತ್ರಕರ್ತ ಸುಬ್ರಹ್ಮಣ್ಯ ಪಡುಕೋಣೆ ನಿರೂಪಿಸಿ, ಸಹಕಾರಿ ಸಿಇಒ ಸುರೇಶ ಅಳ್ವೆಗದ್ದೆ ವಂದಿಸಿದರು.