ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ತಾಳಮದ್ದಳೆ ಜ್ಞಾನಯಜ್ಞ ಕಾರ್ಯಕ್ರಮಕ್ಕೆ ಹೆಚ್ಚು ಹೆಚ್ಚು ಯುವಪೀಳಿಗೆಯನ್ನು ಕರೆತರುವ ಪ್ರಯತ್ನ ಮಾಡಿದರೆ ಇದು ಇನ್ನಷ್ಟು ಜನಪ್ರೀಯತೆ ಪಡೆದುಕೊಳ್ಳಬಹುದು. ನಮ್ಮ ಬದುಕಿಗೆ ಬೇಕಾದ ಪ್ರತಿಯೊಂದು ಜೀವನ ಸಂದೇಶಗಳು ಈ ಯಕ್ಷಗಾನ ತಾಳಮದ್ದಳೆಯಲ್ಲಿ ದೊರೆಯುತ್ತದೆ. ಎಂದು ಮಾಜಿ ಸಚಿವ ಪ್ರಮೋದ ಮಧ್ವರಾಜ್ ಹೇಳಿದರು.
ಧಾರೇಶ್ವರ ಯಕ್ಷಬಳಗ ಚಾರಿಟೇಬಲ್ ಟ್ರಸ್ಟ್ ಪ್ರಸ್ತುತಿಯಲ್ಲಿ ನಾಗೂರು ಒಡೆಯರ ಮಠ ಶ್ರೀ ಗೋಪಾಲಕೃಷ್ಣ ಕಲಾಮಂದಿರದ ಕೋಟ ವೈಕುಂಠ ನಾಯ್ಕರ ಸ್ಮರಣ ವೇದಿಕೆಯಲ್ಲಿ ನಡೆದ ೮ನೇ ವರ್ಷದ ಯಕ್ಷಗಾನ ತಾಳಮದ್ದಲೆ ಸಮಾರೋಪದಲ್ಲಿ ಅವರು ಮಾತನಾಡಿದರು. ಧಾರೇಶ್ವರರಂತಹ ಪ್ರತಿಭಾವಂತ ಮತ್ತು ಅನುಭವಿ ವೃತ್ತಿ ಕಲಾವಿದರು ಯಕ್ಷಗಾನ ಸಂಘಟನೆ, ಪ್ರಸಾರದಲ್ಲಿ ತೊಡಗಿರುವುದು ಆಶಾದಾಯಕ ಬೆಳವಣಿಗೆ ಎಂದು ಅವರು ಅಭಿಪ್ರಾಯಪಟ್ಟರು.
ಮಂಗಳೂರು ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರು ಮಾತನಾಡಿ, ನಮ್ಮ ಸಮಾಜವು ಉತ್ತಮ ಸಂಸ್ಕಾರಯುತವಾಗಿ ಮೂಡಿಬಂದು ನಮ್ಮ ಸಂಸ್ಕೃತಿ, ಪರಂಪರೆ, ಧರ್ಮ, ಆಧ್ಯಾತ್ಮಿಕತೆಗಳ ಏಳಿಗೆಗಳು ಯಕ್ಷಗಾನದಿಂದಲೇ ಉಳಿದು ಬೆಳೆಯಬಲ್ಲದು. ಇಂದು ಪರಿಶುದ್ಧ ಕನ್ನಡ ಭಾಷೆ ಉಳಿದು ಅಭಿವೃದ್ಧಿ ಹೊಂದಿದ್ದು ಯಕ್ಷಗಾನದಿಂದ ಮಾತ್ರ. ನಮ್ಮ ಮಣ್ಣಿನ ಅಧ್ಭುತ ಕಲೆಯಾದ ಯಕ್ಷಗಾನ ಹಾಗೂ ತಾಳಮದ್ದಳೆಗಳನ್ನು ಉಳಿಸಿ ಬೆಳೆಸಲು ಎಲ್ಲರೂ ಕಂಕಣಬದ್ಧರಾಗುವ ಮೂಲಕ ಈ ಜ್ಞಾನಯಜ್ಞದಲ್ಲಿ ಸಹಭಾಗಿಗಳಾಗಬೇಕು ಎಂದರು.
ತಲ್ಲೂರ‍್ಸ್ ಫ್ಯಾಮಿಲಿ ಟ್ರಸ್ಟ್ ಅಧ್ಯಕ್ಷ ತಲ್ಲೂರು ಡಾ. ಶಿವರಾಮ ಶೆಟ್ಟಿ ಅಧ್ಯಕ್ಷತೆವಹಿಸಿದ್ದರು. ಭಾಗವತ ಧಾರೇಶ್ವರ ಅಭಿಮಾನಿಗಳಾದ ಸಾಗರದ ಡಾ. ಎಚ್. ಎಸ್. ಮೋಹನ್ ಮತ್ತು ಎಂ.ಎಲ್. ಭಟ್ ಇವರು ಸುಬ್ರಹ್ಮಣ್ಯ ಧಾರೇಶ್ವರ ದಂಪತಿಯನ್ನು ಗೌರವಿಸಿದರು. ಉದ್ಯಮಿ ಯು. ಅಶೋಕ ಪ್ರಭು, ಮಂಗಳೂರು ಯಕ್ಷಧಾಮದ ಜನಾರ್ದನ ಹಂದೆ ಉಪಸ್ಥಿತರಿದ್ದರು. ಸುಬ್ರಹ್ಮಣ್ಯ ಧಾರೇಶ್ವರ ಸ್ವಾಗತಿಸಿ, ಪ್ರಾಸ್ತಾವಿಸಿದರು. ಗೋವಿಂದ ಎಂ. ನಿರೂಪಿಸಿದರು. ನಂತರ ಕೃಷ್ಣ ಸಂಧಾನ ತಾಳಮದ್ದಲೆ ನಡೆಯಿತು.