ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಪಟ್ಟಣ ಪಂಚಾಯತ್ ರಚನೆಯಾಗಿ ಒಂದು ವರ್ಷ ಎಂಟು ತಿಂಗಳಾಗಿದೆ. ಈ ಅವಧಿಯಲ್ಲಿ 125 ಕೋಟಿ ಅನುದಾನ ಬಂದಿದೆ. ರಾಜ್ಯದಲ್ಲಿಯೇ ಹೆಚ್ಚು ಅನುದಾನ ಪಡೆದ ಕ್ಷೇತ್ರ ಬೈಂದೂರಾಗಿದೆ. ಈ ಕ್ಷೇತ್ರ ಸಾಕಷ್ಟು ಹಿಂದುಳಿದಿದ್ದು ಅಭಿವೃದ್ದಿಯಾಗುತ್ತಿದೆ. ಅಧಿಕಾರಿಗಳು ಯಾವ ಕೆಲಸ ಆಗಬೇಕು, ಅನುದಾನ ಅವಶ್ಯಕತೆ ಇತ್ಯಾದಿಗಳನ್ನು ನನ್ನ ಗಮನ ತರಬೇಕು ಎಂದು ಬೈಂದೂರು ಕ್ಷೇತ್ರದ ಶಾಸಕ ಬಿ. ಎಂ.ಸುಕುಮಾರ ಶೆಟ್ಟಿ ಹೇಳಿದರು.
ಅವರು ಬೈಂದೂರು ಅಂಬೇಡ್ಕರ್ ಭವನದಲ್ಲಿ ನಡೆದ ಬೈಂದೂರು ಪಟ್ಟಣ ಪಂಚಾಯತ್ ವ್ಯಾಪ್ತಿಯ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ಮತ್ತು ಸಾರ್ವಜನಿಕ ಕುಂದುಕೊರತೆ ಅಹವಾಲು ಸ್ವೀಕಾರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಅಧಿಕಾರಿಗಳು ಜನಸಾಮಾನ್ಯರ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸಿ, ಪರಿಹರಿಸುವ ಕೆಲಸ ಮಾಡಬೇಕು. ಜನರಿಗೆ ವ್ಯವಸ್ಥೆಯ ಬಗ್ಗೆ ಬೇಸರ ಮೂಡದಂತೆ ನೋಡಿಕೊಳ್ಳಬೇಕು. ಅಧಿಕಾರಿಗಳು ಜನರ ನೋವನ್ನು ಅರ್ಥ ಮಾಡಿಕೊಂಡು ಸ್ಪಂದಿಸುವ ಕೆಲಸ ಮಾಡಬೇಕು ಎಂದರು.
ಕೆಎಸ್ಆರ್ಟಿಸಿ ಬಸ್ ನಿಲ್ದಾಣ ಕಾಮಗಾರಿಯ ಪ್ರಗತಿಯನ್ನು ವಿಚಾರಿಸಿದ ಶಾಸಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಕಾಮಗಾರಿಯನ್ನು ಅಧಿಕಾರಿಗಳು ಗಮನಿಸಬೇಕು. ಈ ಹಿಂದೆ ಕುಂದಾಪುರ ಮಿನಿವಿಧಾನಸೌಧ ಕಾಮಗಾರಿಯನ್ನು ನೆನಪು ಮಾಡಿಕೊಳ್ಳಿ. ಇಲ್ಲಿ ಹಾಗಾಗಬಾರದು. ಕಾಮಗಾರಿಯ ಗುಣಮಟ್ಟದಲ್ಲಿ ಲೋಪ ಕಂಡು ಬಂದರೆ ಅದಕ್ಕೆ ಅಧಿಕಾರಿಗಳೇ ನೇರ ಹೊಣೆ ಆಗಬೇಕಾಗುತ್ತದೆ ಎಂದು ಎಚ್ಚರಿಸಿದರು.
94ಸಿ, ವಿದ್ಯುತ್, ತೋಟಗಾರಿಕೆ, ಕೃಷಿ, ಪಶುಸಂಗೋಪನೆ ಇಲಾಖೆ ಸೇರಿದಂತೆ ಎಲ್ಲಾ ಇಲಾಖೆಗಳು ಜನರಿಗಾಗಿ ಕೆಲಸ ಮಾಡಬೇಕು ಎಂದರು. ಹುಚ್ಚು ನಾಯಿಗಳ ಸಂಖ್ಯೆ ಹೆಚ್ಚಳವಾಗುತ್ತಿದ್ದು ಈ ಬಗ್ಗೆ ಇಲಾಖೆಗಳು ಉಚಿತ ಚುಚ್ಚುಮದ್ದು ನೀಡುವ ಕೆಲಸವನ್ನು ವೇಗಗೊಳಿಸಬೇಕು ಎಂದರು.
ತಗ್ಗರ್ಸೆ ಶಾಲೆಯ ಕಟ್ಟಡ ಶಿಥಿಲಗೊಂಡಿದೆ. ಗೆದ್ದಲು ಹಿಡಿದಿದೆ. ಮಕ್ಕಳ ತಲೆ ಮೇಲೆ ಗೆದ್ದಲು ಬೀಳುತ್ತಿದೆ ಎಂದು ಅಲ್ಲಿನ ಎಸ್.ಡಿ.ಎಂ.ಸಿ ಅಧ್ಯಕ್ಷರು ಶಾಸಕರ ಗಮನಕ್ಕೆ ತಂದರು. ಇದಕ್ಕೆ ಉತ್ತರಿಸಿದ ಶಾಸಕರು, ಕೂಡಲೇ ಲೋಕೋಪಯೋಗಿ ಇಂಜಿನಿಯರ್ ಶಿಥಿಲಗೊಂಡಿರುವ ಕಟ್ಟಡ ಪರಿಶೀಲಿಸಿ, ಇಲಾಖೆ ವರದಿ ನೀಡಬೇಕು. ಆ ಕಟ್ಟಡ ತೆರವು ಮಾಡಿ, ಹೊಸ ಕಟ್ಟಡಕ್ಕೆ ಅನುದಾನ ಕಲ್ಪಿಸಲಾಗುವುದು ಎಂದರು.
ಬೈಂದೂರು ಪಟ್ಟಣ ಪಂಚಾಯತಿಯನ್ನಾಗಿಸಿದ ಬಗ್ಗೆ ಶಾಸಕರು ಹಾಗೂ ಯಡ್ತರೆ ಪಂಚಾಯತಿ ಮಾಜಿ ಸದಸ್ಯರುಗಳ ನಡುವೆ ಜಟಾಪಟಿ ನಡೆಯಿತು. ಸಾರ್ವಜನಿಕರು ಪ್ರಾಧಿಕಾರ ಹಾಗೂ ವಿವಿಧ ಸಮಸ್ಯೆಗಳ ಬಗ್ಗೆ ಗಮನ ಸೆಳೆದರು. ಸಭೆಯಲ್ಲಿ ನಾಗರಾಜ ಶೆಟ್ಟಿ, ಗಣೇಶ್ ಪೂಜಾರಿ, ಗಿರೀಶ್ ಬೈಂದೂರು, ಸದಾಶಿವ ಪಡುವರಿ, ಸುಶೀಲಾ ದೇವಾಡಿಗ, ಸುಬ್ರಹ್ಮಣ್ಯ ಬಿಜೂರು, ವೆಂಕಟರಮಣ ಹೇನಬೇರು, ವೀರಭದ್ರ ಗಾಣಿಗ ಮೊದಲಾದವರು ವಿವಿಧ ಸಮಸ್ಯೆಗಳ ಬಗ್ಗೆ ಶಾಸಕರ ಗಮನಕ್ಕೆ ತಂದರು. ಇಲಾಖಾ ಅಧಿಕಾರಿಗಳು ಪ್ರತಿಕ್ರಿಯಿಸಿದರು.
ರೈತ ಮುಖಂಡ ದೀಪಕ್ ಕುಮಾರ್ ಶೆಟ್ಟಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಸಭೆಯಲ್ಲಿ ಜಿಲ್ಲಾ ನಗರಾಭಿವೃದ್ದಿ ಕೋಶ ಉಡುಪಿ ಇದರ ಯೋಜನಾ ನಿರ್ದೇಶಕಿ ಪ್ರತಿಭಾ ಆರ್, ಬೈಂದೂರು ತಾ.ಪಂ.ಕಾರ್ಯನಿರ್ವಹಣಾಧಿಕಾರಿ ಭಾರತಿ, ಜಿ.ಪಂ. ಮಾಜಿ ಸದಸ್ಯರಾದ ಶಂಕರ ಪೂಜಾರಿ, ಸುರೇಶ ಬಟ್ವಾಡಿ, ಶಂಕರ ಪೂಜಾರಿ ಉಪಸ್ಥಿತರಿದ್ದರು.
ಬೈಂದೂರು ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ನವೀನ್ ಕುಮಾರ್ ಸ್ವಾಗತಿಸಿದರು. ಬೈಂದೂರು ತಾಲೂಕು ತಹಶೀಲ್ದಾರ್ ಶ್ರೀಕಾಂತ್ ಎಸ್.ಹೆಗಡೆ ವಂದಿಸಿದರು. ಶಿಕ್ಷಕ ಗಣಪತಿ ಹೋಬಳಿದಾರ್ ಕಾರ್ಯಕ್ರಮ ನಿರ್ವಹಿಸಿದರು. ಇದಕ್ಕೂ ಮೊದಲು ಪಟ್ಟಣ ಪಂಚಾಯತ್ನ ನೂತನ ಜೆಸಿಬಿ ವಾಹನವನ್ನು ಶಾಸಕರು ಉದ್ಘಾಟಿಸಿದರು.