ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೊಲ್ಲೂರು: ಇಲ್ಲಿನ ಶ್ರೀ ಮೂಕಾಂಬಿಕಾ ದೇವಸ್ಥಾನದಲ್ಲಿ ಮಹಾ ನವರಾತ್ರಿ ಉತ್ಸವದ ಅಂಗವಾಗಿ ಮಂಗಳವಾರ ಮಧ್ಯಾಹ್ನ 1-05ಕ್ಕೆ ನಡೆದ ಶ್ರೀ ದೇವಿಯ ವೈಭವದ ರಥೋತ್ಸವಕ್ಕೆ ಸಾವಿರಾರು ಭಕ್ತರು ಸಾಕ್ಷಿಯಾದರು.
ನವರಾತ್ರಿ ಒಂಬತ್ತು ದಿನಗಳ ಕಾಲ ವಿವಿಧ ಪೂಜೆ ಹಾಗೂ ಧಾರ್ಮಿಕ ಆಚರಣೆಗಳು ಸಾಂಗವಾಗಿ ನೆರವೇರಿದ್ದು, ಮಹಾನವಮಿಯ ಮಧ್ಯಾಹ್ನ ಬಲಿ ಸೇವೆ ಹಾಗೂ ಪ್ರದಕ್ಷಿಣಿ ನಡೆಸಿದ ಬಳಿಕ ಶ್ರೀ ದೇವಿಯ ಉತ್ಸವ ಮೂರ್ತಿಯನ್ನು ಅಲಂಕರಿಸಿದ ಮರದ ಪುಷ್ಪ ರಥದಲ್ಲಿ ಕುಳ್ಳಿರಿಸಲಾಯಿತು.
ದೇವಸ್ಥಾನದ ಪ್ರಧಾನ ಅರ್ಚಕ, ತಂತ್ರಿ ಕೆ. ರಾಮಚಂದ್ರ ಅಡಿಗ ಅವರು ರಥಾರೋಹಣಳಾದ ಶ್ರೀ ದೇವಿಗೆ ಪೂಜೆ ನೆರವೇರಿಸಿ, ಮಂಗಳಾರತಿ ಎತ್ತಿದ ಬಳಿಕ, ರಥ ಪೂಜೆಯ ನಡೆಸಲಾಯಿತು. ನಂತರ ಸೇರಿದ್ದ ಸಾವಿರಾರು ಜನರು ಶ್ರೀ ದೇವಿಯ ಜಯ ಘೋಷದೊಂದಿಗೆ ರಥವನ್ನು ಎಳೆದರು. ದೇವಳದ ಒಳ ಪ್ರಾಂಗಣದಲ್ಲಿ ಒಂದು ಸುತ್ತು ಬಂದ ಬಳಿಕ ರಥದ ಮೇಲಿನಿಂದ ಅರ್ಚಕರು ಎಸೆದ ನಾಣ್ಯವನ್ನು ಪಡೆಯಲು ಭಕ್ತರು ಮುಗಿಬಿದ್ದರು. ಉತ್ಸವ ಮೂರ್ತಿಯನ್ನು ರಥದಿಂದ ಕೆಳಕ್ಕೆ ತರುವ ಕ್ಷಣಗಳಿಗಾಗಿ ಕಾಯುತ್ತಿದ್ದ ಭಕ್ತ ವರ್ಗ, ಕ್ಷಣ ಮಾತ್ರದಲ್ಲಿ ರಥಕ್ಕೆ ಅಲಂಕರಿಸಿದ್ದ ಹೂಗಳನ್ನು ಕಿತ್ತು ಪ್ರಸಾದವಾಗಿ ಸ್ವೀಕರಿಸಿದರು.
ಉಡುಪಿ ಜಿಲ್ಲಾಧಿಕಾರಿ ಎಂ. ಕೂರ್ಮರಾವ್ ಕುಟುಂಬ ಸಮೇತರಾಗಿ ರಥೋತ್ಸವದಲ್ಲಿ ಪಾಲ್ಗೊಂಡಿದ್ದರು. ಬೈಂದೂರು ಶಾಸಕ ಬಿ.ಎಂ.ಸುಕುಮಾರ ಶೆಟ್ಟಿ, ಬೈಂದೂರು ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ, ದೇವಸ್ಥಾನದ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಚಂದ್ರಶೇಖರ ಶೆಟ್ಟಿ ಕೆರಾಡಿ, ಸಮಿತಿ ಸದಸ್ಯರಾದ ಜಯಾನಂದ ಹೋಬಳಿದಾರ್, ಡಾ.ಅತುಲಕುಮಾರ ಶೆಟ್ಟಿ, ಗಣೇಶ್ ಕಿಣಿ ಬೆಳ್ವೆ, ಗೋಪಾಲಕೃಷ್ಣ ನಾಡ, ಸಂಧ್ಯಾ ರಮೇಶ್, ಕೆ.ಪಿ. ಶೇಖರ, ರತ್ನಾ ಕುಂದರ್, ಕಾರ್ಯನಿರ್ವಹಣಾಧಿಕಾರಿ ಪಿ. ಬಿ.ಮಹೇಶ್, ವಂಡಬಳ್ಳಿ ಜಯರಾಮ ಶೆಟ್ಟಿ, ಕೃಷ್ಣಪ್ರಸಾದ್ ಅಡ್ಯಂತಾಯ, ರಮೇಶ್ ಗಾಣಿಗ ಕೊಲ್ಲೂರು, ಉಡುಪಿ ಜಿಲ್ಲಾ ಬಿಜೆಪಿ ಯುವಮೋರ್ಚಾ ಪ್ರಧಾನ ಕಾರ್ಯದರ್ಶಿ ಶರತಕುಮಾರ ಶೆಟ್ಟಿ ಉಪ್ಪುಂದ, ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಉಮೇಶ್ ಶೆಟ್ಟಿ ಕಲ್ಗದ್ದೆ ಸೇರಿದಂತೆ ರಾಜ್ಯ ಹೊರರಾಜ್ಯಗಳ ಸಾವಿರಾರು ಭಕ್ತರು ರಥೋತ್ಸವಕ್ಕೆ ಸಾಕ್ಷಿಯಾದರು.
ಕುಂದಾಪುರ ಡಿವೈಎಸ್ಪಿ ಶ್ರೀಕಾಂತ್ ಕೆ. ಅವರ ನೇತೃತ್ವದಲ್ಲಿ ಬೈಂದೂರು ಸರ್ಕಲ್ ಇನ್ಸ್ಪೆಕ್ಟರ್ ಸಂತೋಷ್ ಕಾಯ್ಕಿಣಿ, ಕೊಲ್ಲೂರು ಪಿಎಸ್ಐ ಈರಣ್ಣ ಶಿರಗುಂಪಿ ಹಾಗೂ ವಿವಿಧ ಠಾಣೆಗಳ ಅಧಿಕಾರಿಗಳು ಸಿಬ್ಬಂದಿಗಳು, ದೇವಳದ ಭದ್ರತಾ ಸಿಬ್ಬಂದಿಗಳು ಭದ್ರತಾ ಕಾರ್ಯ ಕೈಗೊಂಡಿದ್ದರು.






























