ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಇಲ್ಲಿನ ಶ್ರೀ ರಾಮಕ್ಷತ್ರಿಯ ಯುವಕ ಸಮಾಜದ ವತಿಯಿಂದ ಶ್ರೀ ಸೀತಾರಾಚಂದ್ರ ದೇವಸ್ಥಾನದಲ್ಲಿ ಆಯೋಜಿಸಲಾದ 36ನೇ ವರ್ಷದ ಶ್ರೀ ಶಾರದೋತ್ಸವ ಸಮಾರಂಭ ನಾಲ್ಕು ದಿನಗಳ ಕಾಲ ವಿಜೃಂಭಣೆಯಿಂದ ಜರುಗಿತು.
ಮೂರನೇ ದಿನದ ನಡೆದ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶ್ರೀ ರಾಮ ವಿವಿಧೋದ್ದೇಶ ಟ್ರಸ್ಟ್‌ನ ಆಡಳಿತ ಟ್ರಸ್ಟೀ ಬಿ. ರಾಮಕೃಷ್ಣ ಶೇರುಗಾರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಹಿಂದು ಧರ್ಮದ ಸಂಸ್ಕೃತಿ ಸಂಪ್ರದಾಯವನ್ನು ಮುಂದಿನ ಪೀಳಿಗೆಗೆ ದಾಟಿಸುವ ಜವಾಬ್ದಾರಿ ನಮ್ಮೆಲ್ಲರದ್ದೂ ಆಗಿದ್ದು, ಸಮಾಜದ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವುದು ಬಹುಮುಖ್ಯ. ಸಮಾಜದ ಎಲ್ಲಾ ಸ್ತರದ ವ್ಯಕ್ತಿಗಳೂ ಒಂದುಗೂಡಿ ನಡೆಸುವ ಕಾರ್ಯಕ್ರಮ ಯಶಸ್ವಿಯಾಗುವುದಲ್ಲದೇ, ಸಂಘಟನೆಯೂ ಬಲಗೊಳ್ಳುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಳ ವ್ಯವಸ್ಥಾಪನಾ ಸಮಿತಿ ಸದಸ್ಯ ಜಯಾನಂದ ಹೋಬಳಿದಾರ್, ಕೋಟೇಶ್ವರದ ವಿಘ್ನೇಶ್ವರ ಪ್ಲಾಸ್ಟಿಕ್ ಇಂಡಸ್ಟ್ರೀಸ್ ಮಾಲಕ ಮಹೇಶ್ ಬೆಟ್ಟಿನ್, ಹೊನ್ನಾವರದ ಗೋಲ್ ಕಾರ್ಪೋರೇಷನ್ ಎಂ.ಡಿ ಎ.ಆರ್. ನಾಯಕ್, ಉಡುಪಿ ಅರಣ್ಯ ವಿಚಕ್ಷಣಾದಳದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಶ್ರೀಧರ ಪಿ., ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಸುರೇಶ್ ಬಟವಾಡಿ, ಶ್ರೀ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಅಭಿಯಂತರರಾದ ಉದಯ ಕುಮಾರ್ ಕೆ.ಸಿ., ತಾಲೂಕು ಪಂಚಾಯತ್ ಮಾಜಿ ಸದಸ್ಯ ಸದಾಶಿವ ಡಿ., ಬೈಂದೂರು ದುರ್ಗಾ ಅರ್ಥ ಮೂವರ‍್ಸ್ ಮಾಲಕ ವೆಂಕಟರಮಣ ಬಿಜೂರು, ಉದ್ಯಮಿಗಳಾದ ಕೆ.ಟಿ. ವೆಂಕಟೇಶ್, ರಾಘವೇಂದ್ರ ಜಿ.ವಿ ಗುಡೆಮನೆ, ಮೂಲ್ಕಿ ಮೂಡುಬಿದಿರೆ ಬಿಜೆಪಿ ಯುವಮೋರ್ಚಾ ಕಾರ್ಯದರ್ಶಿ ಗಜೇಂದ್ರ ಎಸ್. ಬೇಲೆಮನೆ, ರತ್ನಾಕರ ಡಿ., ಬೈಂದೂರು ಪ್ರಾಥಮಿಕ ಆರೋಗ್ಯಕೇಂದ್ರದ ವೈದ್ಯೆ ಡಾ. ನಿವೇದಿತಾ ರಾವ್, ಬೈಂದೂರು ರಾಮಕ್ಷತ್ರಿಯ ಮಾತೃಮಂಡಳಿ ಅಧ್ಯಕ್ಷೆ ಇಂದಿರಾ ಶ್ರೀಧರ್, ಬೈಂದೂರು ರಾಮಕ್ಷತ್ರಿಯ ಯುವಕ ಸಮಾಜದ ಗೌರವಾಧ್ಯಕ್ಷ ದಿನಕರ ಪಟವಾಲ್ ಉಪಸ್ಥಿತರಿದ್ದರು.
ಶಾರದೋತ್ಸವದ ಅಂಗವಾಗಿ ಆಯೋಜಿಸಲಾಗಿದ್ದ ಕ್ರೀಡೋತ್ಸವ, ಮಹಿಳೆಯರಿಗಾಗಿ ಆಯೋಜಿಸಲಾದ ವಿವಿಧ ಸ್ವರ್ಧೆಗಳು, ಭಗವದ್ಗೀತಾ ಪಠಣ ಸ್ವರ್ಧೆ ಹಾಗೂ ಜಿಲ್ಲಾ ಮಟ್ಟದ ಆಹ್ವಾನಿತ ತಂಡಗಳ ಭಜನಾ ಕುಣಿತ ಸ್ವರ್ಧೆಯ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ಬೈಂದೂರು ರಾಮಕ್ಷತ್ರಿಯ ಯುವಕ ಸಮಾಜದ ಅಧ್ಯಕ್ಷ ರಾಘವೇಂದ್ರ ದಡ್ಡು ಪ್ರಾಸ್ತಾವಿಕ ಮಾತುಗಳನ್ನಾಡಿದರು. ಪ್ರಧಾನ ಕಾರ್ಯದರ್ಶಿ ಸುರೇಂದ್ರ ಡಿ ಸ್ವಾಗತಿಸಿ, ಕಾರ್ಯದರ್ಶಿ ಗಿರೀಶ್ ಕಲ್ಲುಕಂಟ ವಂದಿಸಿದರು. ಶಿಕ್ಷಕರಾದ ಗಣಪತಿ ಹೋಬಳಿದಾರ್, ಆನಂದ ಮದ್ದೋಡಿ ಕಾರ್ಯಕ್ರಮ ನಿರೂಪಿಸಿದರು.
ರಾಜ್ಯ ಮಟ್ಟದ ಸಾಂಸ್ಕೃತಿಕ ಸ್ಪರ್ಧೆ:
ವಿವಿಧ ರಾಮಕ್ಷತ್ರಿಯ ಸಂಘಟನೆಗಳಿಗಾಗಿ ರಾಜ್ಯ ಮಟ್ಟದ ರಾಮಕ್ಷತ್ರಿಯ ಸಾಂಸ್ಕೃತಿಕ ವೈಭವ ಸ್ವರ್ಧೆಯನ್ನು ಆಯೋಜಿಸಲಾಗಿತ್ತು. ಸ್ವರ್ಧೆಯಲ್ಲಿ ಉಡುಪಿ ರಾಮಕ್ಷತ್ರಿಯ ಸಂಘ ಪ್ರಥಮ ಬಹುಮಾನ ಪಡೆದು, ಹೊಸನಗರದ ವಿದ್ಯಾವರ್ಧಕ ಮಹಿಳಾ ಮಂಡಳಿ ದ್ವಿತೀಯ ಹಾಗೂ ಗಂಗೊಳ್ಳಿ ರಾಮಕ್ಷತ್ರಿಯ ಸಂಘ ತೃತೀಯ ಬಹುಮಾನ ಪಡೆದುಕೊಂಡರು. ಜಿಲ್ಲಾ ಮಟ್ಟದ ಆಹ್ವಾನಿತ ತಂಡಗಳ ಭಜನಾ ಕುಣಿತ ಸ್ವರ್ಧೆಯಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ರಾಮಕ್ಷತ್ರಿಯ ಮಾತೃಮಂಡಳಿ ಹಾಗೂ ಆಯ್ದ ಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ವೈಭವ ಜರುಗಿತು.
ಭವ್ಯ ಮೆರವಣಿಗೆ:
ರಾಮಕ್ಷತ್ರಿಯ ಯುವಕ ಸಮಾಜದ ಪ್ರತಿವರ್ಷವೂ ಮೆರವಣಿಗೆಗೆ ಬುಧವಾರ ಶ್ರೀ ಶಾರದಾಮೂರ್ತಿಯ ವಿಸರ್ಜನಾ ಮೆರವಣೆಗೆ ಸಾರ್ವಜನಿಕರ ಗಮನ ಸೆಳೆಯಿತು. ಆಕರ್ಷಕ ಸ್ಥಬ್ಧಚಿತ್ರಗಳು, ಚಂಡೆ, ನಾಸಿಕ್ ಬ್ಯಾಂಡ್, ಭಜನಾ ತಂಡಗಳು ಮೆರವಣಿಗೆಗೆ ವಿಶೇಷ ರಂಗು ನೀಡಿದ್ದವು.