ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ತಾಲೂಕಿನ ಹಕ್ಲಾಡಿ ಗ್ರಾಮದ ಕುಂದಬಾರಂದಾಡಿ ಕೋಳೂರು ಬಳಿ ಮಾಸ್ತಿ ಎಂಬುವವರ ಮನೆಯ ಆವರಣವಿಲ್ಲದ ಬಾವಿಗೆ ಬಿದ್ದಿದ್ದ ಚಿರತೆಯನ್ನು ಅರಣ್ಯ ಇಲಾಖೆ ಸಿಬ್ಬಂದಿಗಳು ಸೋಮವಾರ ರಕ್ಷಿಸಿದ್ದಾರೆ.
ಹಿಂದಿನ ದಿನ ರಾತ್ರಿಯೇ ಚಿರತೆ ಬಾವಿಗೆ ಬಿದ್ದಿದ್ದು, ಸೋಮವಾರ ಬೆಳಗ್ಗೆ ಮನೆಯವರ ಗಮನಕ್ಕೆ ಬಂದಿದೆ. ಕೂಡಲೇ ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಅರಣ್ಯ ಇಲಾಖೆ ಸಿಬ್ಬಂದಿ ಬಾವಿಗೆ ಬೋನು ಇಳಿಬಿಟ್ಟು ಕಾರ್ಯಾಚರಣೆ ನಡೆಸಿ ಮೇಲೆತ್ತಿದ್ದಾರೆ. 4ರಿಂದ 5 ವರ್ಷದ ಹೆಣ್ಣು ಚಿರತೆ ಇದಾಗಿದೆ.
ಕಾರ್ಯಾಚರಣೆಯಲ್ಲಿ ಕುಂದಾಪುರ ವಲಯ ಅರಣ್ಯಾಧಿಕಾರಿ ಟಿ. ಕಿರಣ್ಬಾಬು, ಆಲೂರು ಉಪ ವಲಯ ಅರಣ್ಯಾಧಿಕಾರಿ ದಿಲೀಪ್ ಕುಮಾರ್, ಜಡ್ಕಲ್ ಶಾಖೆ ಉಪ ವಲಯ ಅರಣ್ಯಾಧಿಕಾರಿ ಸುನೀಲ್ ಕುಮಾರ್, ಅರಣ್ಯ ರಕ್ಷಕ ಆನಂದ ಬಳೆಗಾರ, ರಮೇಶ, ಮಂಜುನಾಥ ಗಾಣಿಗ ಮತ್ತು ಗ್ರಾಮಸ್ಥರು ಪಾಲ್ಗೊಂಡಿದ್ದರು. ಕುಂದಬಾರಂದಾಡಿಯಲ್ಲಿ ಚಿರತೆ ಕಾಟದ ಬಗ್ಗೆ ಮಾಧ್ಯಮಗಳಲ್ಲಿ ಸರಣಿ ವರದಿಯಾಗಿತ್ತು.