ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಮೀನುಗಾರಿಕೆ ಋತು ಆರಂಭಗೊಂಡು ಎರಡೂವರೆ ತಿಂಗಳು ಕಳೆದರೂ, ಇದುವರೆಗೂ ಸೀಮೆಎಣ್ಣೆ ಹಂಚಿಕೆ ಮಾಡಿಲ್ಲ. ಪ್ರತಿ ನಾಡದೋಣೆಯವರಿಗೆ ತಲಾ ಮಾಸಿಕ 300ಲೀ ಸೀಮೆಣ್ಣೆಯನ್ನು ವಿತರಿಸುತ್ತೇವೆ ಎಂದ ರಾಜ್ಯ ಸರ್ಕಾರದ ಭರವಸೆ ಹುಸಿಯಾಗಿದೆ ಎಂದು ರಾಜ್ಯ ಸಾಂಪ್ರದಾಯಿಕ ನಾಡದೋಣಿ ಮೀನುಗಾರರ ಒಕ್ಕೂಟದ ಅಧ್ಯಕ್ಷ ಎ. ಆನಂದ ಖಾರ್ವಿ ಆರೋಪಿಸಿದರು.
ಉಪ್ಪುಂದ ನಾಡದೋಣಿ ಭವನದಲ್ಲಿ ಗುರುವಾರ ನಡೆದ ಅವಿಭಜಿತ ದಕ್ಷಿಣ ಕನ್ನಡ ಮತ್ತು ಉತ್ತರಕನ್ನಡ ಜಿಲ್ಲೆಗಳ ಮೀನುಗಾರರ ಹಕ್ಕೊತ್ತಾಯ ಪ್ರತಿಭಟನೆಯ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಔಟ್‌ಬೋರ್ಡ್ ಇಂಜಿನ್ ಅಳವಡಿಸಿ ಸಾಂಪ್ರಾದಾಯಿಕ ಮೀನುಗಾರಿಕೆ ನಡೆಸುತ್ತಿರುವ ನಾಡದೋಣಿಗಳಿಗೆ ರಾಜ್ಯ ಸರ್ಕಾರ ಒದಗಿಸುತ್ತಿರುವ ಮಾಸಿಕ ತಲಾ 150ಲೀ. ಸೀಮೆಎಣ್ಣೆ ಪ್ರಮಾಣವನ್ನು 300ಲೀ.ಗೆ ಹೆಚ್ಚಿಸಿದೆ. ಪ್ರಸ್ತುತ ಈ ಪ್ರಮಾಣದಲ್ಲಿ ಸೀಮೆಎಣ್ಣೆಯನ್ನು ಹಂಚಿಕೆ ಮಾಡದೇ ತಲಾ 150 ಲೀ. ಸೀಮೆಎಣ್ಣೆ ಮಾತ್ರ ಪ್ರತಿ ತಿಂಗಳಿಗೆ ಒದಗಿಸುತ್ತಿದ್ದು, ಆದರೆ ಈ ಬಾರಿ ಅದು ಕೂಡ ದೊರೆತಿಲ್ಲ. ಮೂರು ಜಿಲ್ಲೆಗಳಲ್ಲಿ ಸುಮಾರು 8130 ಪರ್ಮಿಟ್ ಹೊಂದಿದ ದೋಣಿಗಳಿವೆ. ಒಂದು ವಾರದಲ್ಲಿ ಇವುಗಳಿಗೆ ಸಬ್ಸಿಡಿ ಸೀಮೆಎಣ್ಣೆ ಕೊಡದಿದ್ದರೆ ಎಲ್ಲರೂ ಬೀದಿಗೆ ಬರುತ್ತಾರೆ. ಸದಸ್ಯದ ಪರಿಸ್ಥಿತಿಯಲ್ಲಿ ಮೀನುಗಾರರ ಜೀವನವೂ ದುಸ್ತರವಾಗಿದ್ದು, ಬದುಕು ಹೈರಾಣಾಗಿದೆ. ಇನ್ನಾದರೂ ಸರ್ಕಾರ ಎಚ್ಚೆತ್ತು ಪರ್ಮಿಟ್ ಹೊಂದಿದ ಎಲ್ಲಾ ಮೀನುಗಾರಿಕಾ ದೋಣಿಗಳಿಗೂ ತಲಾ ಮಾಸಿಕ 300ಲೀ. ಸೀಮೆಎಣ್ಣೆ ಹಂಚಿಕೆ ಮಾಡಬೇಕು ಇಲ್ಲದಿದ್ದರೆ ಕರಾವಳಿಯ ಮೂರು ಜಿಲ್ಲೆಯ ಮೀನುಗಾರರು ಸಂಘಟಿತರಾಗಿ ಆಯಾಯ ಜಿಲ್ಲಾ ಕೇಂದ್ರದ ಜಿಲ್ಲಾಧಿಕಾರಿಗಳ ಕಚೇರಿಯ ಎದುರು ನಮ್ಮ ಹಕ್ಕೋತ್ತಾಯವನ್ನು ಮಂಡಿಸಲಾಗುವುದು. ಇದಕ್ಕೂ ಸರ್ಕಾರ ಜಗ್ಗದಿದ್ದರೆ ಮೂರು ಜಿಲ್ಲೆಗಳ ಒಟ್ಟು 40 ಸಾವಿರ ಮೀನುಗಾರರು ಸೇರಿ ಉಗ್ರ ಹೋರಾಟ ನಡೆಲಾಗುವುದು. ಯಾವುದೇ ಕಾರಣಕ್ಕೂ ಹಿಂದಿನಂತೆ ಕಣ್ಣೊರೆಸುವ ಕಾರ್ಯಕ್ಕೆ ಬೆಲೆಕೊಡಲಾರೆವು ಎಂದು ಎಚ್ಚರಿಸಿದರು.
ಒಕ್ಕೂಟದ ಗೌರವಾಧ್ಯಕ್ಷ ಉಪ್ಪುಂದ ನವೀನಚಂದ್ರ ಮಾತನಾಡಿ, ಕೇಂದ್ರ ಸರಕಾರವು ಸಾಗರೋತ್ಪಾನಕ್ಕೆ ಆದ್ಯತೆ ನೀಡುತ್ತಿದೆ. ಹಿಂದೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ 50-50 ಪಾಲುದಾರಿಕೆಯಲ್ಲಿ ಮೀನುಗಾರಿಕಾ ಇಂಜಿನ್ ಸಬ್ಸಿಡಿ ಸಿಗುತ್ತಿತ್ತು. 2016-17ರಿಂದ ಇಂಜಿನ್‌ಗಳ ಸಬ್ಸಿಡಿಯನ್ನು ತಡೆಹಿಡಿಯಲಾಗಿದೆ. ಮೀನುಗಾರರಿಗೆ ಸೀಮೆಎಣ್ಣೆ ಸಬ್ಸಿಡಿಗೆ ರೂ.125 ಕೋಟಿ ಹಾಗೂ ವಿವಿಧ ಸಲಕರಣೆಗಳಿಗೆ 100 ಕೋಟಿ ವೆಚ್ಚವಾಗುತ್ತದೆ. ಕಳೆದ ಬಜೆಟ್‌ನಲ್ಲಿ ಮೀನುಗಾರಿಕಾ ಇಲಾಖೆಗೆ ಸರಿಸುಮಾರು 2000 ಕೋಟಿ ಅನುದಾನ ಮೀಸಲಾಗಿರಿಸಿದ್ದರೂ ಕೂಡ ಈಗ ಸಬ್ಸಿಡಿ ಸೀಮೆಎಣ್ಣೆ ಹಾಗೂ ಇಂಜಿನ್‌ಗೆ ಸಬ್ಸಿಡಿ ಬಿಡುಗಡೆ ಮಾಡಲು ಇಲಾಖೆ ಯೋಚಿಸುತ್ತಿದೆ. ಶೀಘ್ರದಲ್ಲಿ ಅದನ್ನು ಬಿಡುಗಡೆ ಮಾಡಬೇಕು ಎಂದು ಅವರು ಆಗ್ರಹಿಸಿದರು.
ಉಪಾಧ್ಯಕ್ಷರಾದ ವಿಜಯ್ ಎಸ್. ಬಂಗೇರ, ವಿಕ್ರಂ ಸಾಲ್ಯಾನ್ ಮಲ್ಪೆ, ವಸಂತ ಸುವರ್ಣ, ಸತೀಶ ಕುಂದರ್, ಕೋಶಾಧಿಕಾರಿ ಪುರಂದರ ಕೋಟ್ಯಾನ್, ಗೌರವ ಸಲಹೆಗಾರ ಚಂದ್ರಕಾಂತ ಕರ್ಕೇರ, ಸಂಘಟನಾ ಕಾರ್ಯದರ್ಶಿಗಳಾದ ಯಶವಂತ ಖಾರ್ವಿ ಗಂಗೊಳ್ಳಿ, ಅಶ್ವತ ಕಾಂಚನ್ ಮಂಗಳೂರು, ಕೃಷ್ಣ ಹರಿಕಾಂತ ಮುರ್ಡೇಶ್ವರ, ಪ್ರಧಾನ ಕಾರ್ಯದರ್ಶಿ ಗೋಪಾಲ ಆರ್. ಕೆ. ಉಪಸ್ಥಿತರಿದ್ದರು.