ಬೈಂದೂರು, ಅ.09: ಇಂದು ಬೈಂದೂರಿನ ಸಂತೆಯ ಗೌಜಿಗಿಂತ ತಗ್ಗರ್ಸೆ ಶಾಲಾ ಆವರಣದಲ್ಲಿನ ಸಂತೆಯ ಗೌಜು ಜೋರಾಗಿತ್ತು. ಟೊಮೆಟೋ 20ರೂಪಾಯ್, ಆಲೂಗೆ ಬರೀ 15ರೂಪಾರ್, ಫ್ರೇಶ್ ಮೀನ್ ಇತ್ತ್ ತಕನಿ, ಊರ್ ಕೋಳಿ ಬೇಕಾ 1,000 ಕೊಡಿ, ಬಟ್ಟಿಗೆ ಇವತ್ ಮಾತ್ರ ಫುಲ್ ಡಿಸ್ಕೌಂಟ್ ಇತ್ತ್ ಕಾಣಿ, ಬನ್ನಿ ಸರ್ 2ರೂಪಾಯಾಗ್ ನಿಮ್ ತೂಕ ಕಾಣ್ಲಾಕ್, ಹೊಯ್ ಒಂದು ಆಟ ಆಡಿ ಹೋಯ್ನಿ ಬರೀ ಹತ್ತೇ ರೂಪಾಯಿ… ಹೀಗೆ ಅಲ್ಲಿನ ವ್ಯಾಪಾರಿಗಳು ಕೂಗಿ ಕರೆಯುತ್ತಿದ್ದರೇ ಗ್ರಾಹಕರು ತಮಗೆ ಬೇಕಾದ್ದನ್ನು ಕೊಂಡು ತೆರಳುತ್ತಿದ್ದರು. ಅಸಲಿಗೆ ಅಲ್ಲಿದ್ದವರ್ಯಾರೂ ವ್ಯಾಪಾರಿಗಳೂ ಆಗಿರಲಿಲ್ಲ, ಕೊಳ್ಳಲು ಹೋದವರು ಅಲ್ಲಿನ ಗ್ರಾಹಕರೂ ಆಗಿರಲಿಲ್ಲ, ಅಷ್ಟೇ ಏಕೆ ಅದು ದಿನವೂ ಸಂತೆ ನಡೆಯುವ ಸ್ಥಳವೂ ಆಗಿರಲಿಲ್ಲ.
ಆದರೆ ಈ ದಿನದ ಮಟ್ಟಿಗೆ ತಗ್ಗರ್ಸೆ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಬೆಳಿಗ್ಗಿನಿಂದಲೇ ಒಂದು ವಿಶೇಷ ಸಡಗರ ಆರಂಭಗೊಂಡಿತ್ತು. ಅಲ್ಲಿ ಅಕ್ಷರಶಃ ಸಂತೆಯ ವಾತಾವರಣ ನಿರ್ಮಾಣಗೊಂಡಿತ್ತು. ಆ ಹೊತ್ತಿಗೆ ಶಾಲೆಯ ಮಕ್ಕಳೆಲ್ಲ ವ್ಯಾಪಾರಿಗಳಾಗಿದ್ದರು. ಪೋಷಕರು, ಊರವರೆಲ್ಲ ಗ್ರಾಹಕರಾಗಿದ್ದರು. ‘ಮಕ್ಕಳ ಸಂತೆ’ ಎಂಬ ಹೆಸರನ್ನೂ ಮೀರಿಸಿ ವ್ಯಾಪಾರ-ವಹಿವಾಟು ನಡೆಸುತ್ತಿದ್ದರು. (ಕುಂದಾಪ್ರ ಡಾಟ್ ಕಾಂ ವರದಿ)
ಏನಿದು ಮಕ್ಕಳ ಸಂತೆ:
ಮಕ್ಕಳಲ್ಲಿ ವ್ಯವಹಾರ ಕುಶಲತೆ, ಸಂವಹನ ಕಲೆ, ಸಾಮಾಜಿಕ ಬದುಕಿನೊಂದಿಗಿನ ಒಡನಾಟದ ಕೌಶಲ್ಯವನ್ನು ಕಲಿಸುವುದರೊಂದಿಗೆ, ಅವರಲ್ಲಿನ ಸೃಜನಶೀಲತೆಯನ್ನು ಅನಾವರಣಗೊಳಿಸುವ ಉದ್ದೇಶದಿಂದ ಹಮ್ಮಿಕೊಂಡ ವಿಭಿನ್ನ ಕಾರ್ಯಕ್ರಮ ಮಕ್ಕಳ ಸಂತೆ. ಬೈಂದೂರು ವಲಯದಲ್ಲೇ ಪ್ರಥಮ ಭಾರಿಗೆಂಬಂತೆ ತಗ್ಗರ್ಸೆ ಶಾಲಾ ವಠಾರದಲ್ಲಿ ಮಕ್ಕಳ ಸಂತೆ ಅನಾವರಗೊಂಡಿತ್ತು. ಊರಿನ ಜನರೂ ಕೂಡ ಬೈಂದೂರು ಸಂತೆಗೆ ತೆರಳುವ ಬದಲಿಗೆ ಇಲ್ಲಿಯೇ ಬಂದು ತಮಗೆ ಬೇಕಾದ ವಸ್ತುಗಳನ್ನು ಕೊಂಡುಕೊಂಡರು. (ಕುಂದಾಪ್ರ ಡಾಟ್ ಕಾಂ ವರದಿ)
ಏನೇನಿತ್ತು ಮಕ್ಕಳ ಸಂತೆಯಲ್ಲಿ:
ತರಕಾರಿ ಅಂಗಡಿ, ಪಾತ್ರದ ಅಂಗಡಿ, ಫ್ಯಾನ್ಸಿ ಸ್ಟೋರ್, ವಿವಿಧ ಹಣ್ಣು, ಪಾನೀಯದ ಅಂಗಡಿ, ಬುಕ್ ಸ್ಟಾಲ್, ಬಟ್ಟೆ ಅಂಗಡಿ, ಬಗೆಬಗೆಯ ತಿಂಡಿ ತಿನಿಸುಗಳ ಮಳಿಗೆ, ಮೀನು, ಕೋಳಿ ವ್ಯಾಪಾರ, ತೂಕ ನೊಡುವ ಯಂತ್ರ, ಮನೋರಂಜನೆಗಾಗಿ ಆಟ, ಐಸ್ ಕ್ರೀಮ್ ಹೀಗೆ ಹತ್ತಾರು ಅಂಗಡಿ ಮಳಿಗೆಗಳಲ್ಲಿ ಕುಳಿತು ಮಕ್ಕಳು ಗ್ರಾಹಕರನ್ನು ಕೂಗಿ ಕರೆದು ವ್ಯಾಪಾರ ನಡೆಸುತ್ತಿದ್ದರು. (ಕುಂದಾಪ್ರ ಡಾಟ್ ಕಾಂ ವರದಿ)
[quote bgcolor=”#ffffff” arrow=”yes” align=”right”]* ಮಕ್ಕಳಲ್ಲಿ ವ್ಯವಹಾರ ಕುಶಲತೆ, ತೂಕ-ಅಳತೆಗಳ ಬಗ್ಗೆ ಅರಿವು ಹಾಗೂ ಸಮಾಜದೊಂದಿಗೆ ಬೆರೆಯುವ ರೀತಿಯು ತಿಳಿಯಬೇಕೆಂಬ ಎಂಬ ಉದ್ದೇಶದಿಂದ ಮಕ್ಕಳ ಸಂತೆಯನ್ನು ಆಯೋಜಿಸಲಾಗಿತ್ತು. ಮಕ್ಕಳ ಪೋಷಕರು, ಊರಿನ ಜನ ನಿರೀಕ್ಷೆಗೂ ಮೀರಿ ಮಕ್ಕಳ ಸಂತೆಯಲ್ಲಿ ಪಾಲ್ಗೊಂಡು, ಕೊಂಡು ಹೋಗಿದ್ದಾರೆ. ಇದೊಂದು ವಿಭಿನ್ನ ಅನುಭವ ನೀಡಿದೆ. – ಜ್ಯೋತಿ ಎಚ್. ಪ್ರಭಾರ ಮುಖ್ಯ ಶಿಕ್ಷಕಿ[/quote]
ಸಂತೆಗೂ ಎಂಟ್ರಿ ಕೂಪನ್, ಅದೃಷ್ಟಶಾಲಿಗೆ ಚಿನ್ನದ ನಾಣ್ಯ:
ತಗ್ಗರ್ಸೆ ಶಾಲೆಯ ಸಂತೆಯ ಆವರಣ ಪ್ರವೇಶಿಸಬೇಕಿದ್ದರೇ 5ರೂಪಾಯಿಯ ಒಂದು ಕೂಪನ್ ಖರೀದಿಸಬೇಕಿತ್ತು. ಅದರಲ್ಲಿನ ಅದೃಷ್ಟಶಾಲಿಗಳಿಗೆ ಚಿನ್ನದ ನಾಣ್ಯ ಗೆಲ್ಲುವ ಅವಕಾಶವಿತ್ತು. ಇದು ಆಯೋಜನೆಯೊಳಗಿನ ವ್ಯವಹಾರದ ಕುಶಲತೆಯನ್ನು ತೋರ್ಪಡಿಸುತ್ತದೆ.
ಊರಿಗೆ ಸಂಭ್ರಮ, ಭರ್ಜರಿ ವ್ಯಾಪಾರ:
ಪ್ರಥಮ ಭಾರಿಗೆ ಶಾಲೆಯಲ್ಲಿ ಇಂತಹದ್ದೊಂದು ಕಾರ್ಯಕ್ರಮ ನಡೆದುದ್ದರಿಂದ ಊರಿನ ಜನರಲ್ಲೂ ಹೇಗೆ ನಡೆಯುತ್ತದೆಂಬ ಕುತೂಹಲವಿತ್ತು. 2 ದಿನದ ಹಿಂದೆಯೇ ತಗ್ಗರ್ಸೆಯಲ್ಲಿ ಸಂತೆ ಅಂತೆ ಎಂಬ ಮಾತು ಕೇಳಿ ಬರುತ್ತಿತ್ತು. ಇಂದು ಬೆಳಿಗ್ಗೆಯೇ ಹತ್ತಾರು ಮಂದಿ ಮಕ್ಕಳ ಸಂತೆಗೆ ಬಂದು ಬೇಕಾದ ವಸ್ತುಗಳನ್ನು ಖರೀದಿಸಿದ್ದರು. ತಗ್ಗರ್ಸೆಯ ಉದ್ಯಮಿ ನಾರಾಯಣ ಹೆಗ್ಡೆ ಬೆಳಿಗ್ಗೆಯ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಜಿ.ಪಂ ಸದಸ್ಯ ಬಾಬು ಶೆಟ್ಟಿ, ಶಿಕ್ಷಣ ಇಲಾಖೆಯ ರೂಪ್ಲಾ ಕಾಮತ್, ಬೈಂದೂರು ವಲಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ವಿಶ್ವನಾಥ ಪೂಜಾರಿ, ಎಸ್.ಡಿ.ಎಂ.ಸಿ ಅಧ್ಯಕ್ಷ ಪ್ರದೀಪ್ ಕುಮಾರ್, ರಾಜು ಹುದಾರ್, ಪ್ರಭಾಕರ, ಶ್ರೀಧರ್ ಎಂ.ಪಿ, ದಿವಾಕರ ಮೊದಲಾದವರು ಸಮಾರಂಭದಲ್ಲಿದ್ದರು. ಸಂಜೆಯ ತನಕವೂ ನಡೆದ ಸಂತೆಯಲ್ಲಿ ವ್ಯಾಪಾರ ಮಾತ್ರ ಭರ್ಜರಿಯಾಗಿತ್ತು. ಮಧ್ಯಾಹ್ನದ ವೇಳೆಗಾಗಲೇ ಕೆಲವು ವಸ್ತುಗಳ ಖಾಲಿಯಾಗಿದ್ದವು. (ಕುಂದಾಪ್ರ ಡಾಟ್ ಕಾಂ ವರದಿ)
ಒಟ್ಟಿನಲ್ಲಿ ಆಟ ಪಾಠಗಳಿಗಷ್ಟೇ ಸೀಮಿತವಾಗಿದ್ದ ಮಕ್ಕಳಲ್ಲಿನ ಸೃಜನಶೀಲತೆಯನ್ನು ಹೊರಹಾಕಲು ‘ಮಕ್ಕಳ ಸಂತೆ’ ಎಂಬ ವಿನೂತನ ಕಾರ್ಯಕ್ರಮವನ್ನು ಏರ್ಪಡಿಸುವ ಮೂಲಕ ವಿಭಿನ್ನ ಪ್ರಯತ್ನಕ್ಕೆ ಮುಂದಾದ ಪ್ರಭಾರ ಮುಖ್ಯ ಶಿಕ್ಷಕಿ ಜ್ಯೋತಿ ಎಚ್ ಹಾಗೂ ಇತರ ಶಿಕ್ಷಕಿಯರ ತಂಡವನ್ನು ಪ್ರಯತ್ನವನ್ನು ಮೆಚ್ಚಲೇಬೇಕು.
-ಸುನಿಲ್ ಹೆಚ್. ಜಿ. ಬೈಂದೂರು