ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಭಾರತೀಯ ವೇಗದ ಓಟಗಾರ್ತಿ ಕ್ರೀಡಾಪಟು, ಅಥ್ಲೇಟಿ ಅಶ್ವಿನಿ ಅಕ್ಕುಂಜಿ ಅವರ ಜೀವಮಾನದ ಸಾಧನೆಗಾಗಿ ಧ್ಯಾನ್ ಚಂದ್ ಜೀವಮಾನದ ಸಾಧನೆ ಪ್ರಶಸ್ತಿ 2022 ಘೋಷಣೆಯಾಗಿದೆ.
ಕುಂದಾಪುರದ ತಾಲೂಕಿನ ಸಿದ್ದಾಪುರ ಅಕ್ಕುಂಜೆಯ ಯಶೋದಾ ಶೆಟ್ಟಿ ಮತ್ತು ಚಿದಾನಂದ ಶೆಟ್ಟಿಯವರ ಪುತ್ರಿಯಾದ ಅಶ್ವಿನಿ ಅಕ್ಕುಂಜೆ 2010ರಲ್ಲಿ ನಡೆದ ಕಾಮನ್ವೆಲ್ತ್ ಗೇಮ್ಸ್ನಲ್ಲಿ 4×400 ರಿಲೆಯಲ್ಲಿ ಚಿನ್ನ, 2011ರಲ್ಲಿ ಏಷ್ಯನ್ ಗೇಮ್ಸ್ನಲ್ಲಿ 4×400 ರಿಲೆ ಮತ್ತು 400 ಹರ್ಡ್ಸಲ್ ವೈಯಕ್ತಿಕ ವಿಭಾಗದಲ್ಲಿ ಸ್ವರ್ಣ ಪದಕ ಗೆದ್ದಿದ್ದರು. ಕರ್ನಾಟಕದ ಸರ್ಕಾರ ಕೊಡಮಾಡುವ ರಾಜ್ಯೋತ್ಸವ ಪ್ರಶಸ್ತಿಯನ್ನು 2010ರಲ್ಲಿ ಪಡೆದಿದ್ದರು. ಪ್ರಸ್ತುತ ಅವರು ಪಟಿಯಾಲ, ಪಂಜಾಬ್ ಯುನಿಯನ್ ಬ್ಯಾಂಕ್ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದಾರೆ. 16 ವರ್ಷಗಳ ಕ್ರೀಡಾ ಬದುಕಿನ ಬಳಿಕ 2019ರ ಬಳಿಕ ಕ್ರೀಡಾ ಕ್ಷೇತ್ರದಿಂದ ನಿವೃತ್ತಿ ಪಡೆದುಕೊಳ್ಳುವುದಾಗಿ ತಿಳಿಸಿದ್ದರು.
ಧ್ಯಾನ್ ಚಂದ್ ಪ್ರಶಸ್ತಿಯನ್ನು ಕ್ರೀಡಾಪಟುಗಳ ಜೀವಮಾನದ ಸಾಧನೆ, ಕ್ರೀಡಾಕ್ಷೇತ್ರಕ್ಕೆ ಕೊಡುಗೆ ಮತ್ತು ನಿವೃತ್ತಿಯ ನಂತರವೂ ಕ್ರೀಡಾಕೂಟದ ಪ್ರಚಾರದಲ್ಲಿ ಅವರು ತೊಡಗಿಸಿಕೊಳ್ಳುವ ಬಗೆಯನ್ನು ಆಧರಿಸಿ ಈ ಪ್ರಶಸ್ತಿಯನ್ನು ನೀಡಲಾಗುತ್ತದೆ. ನವೆಂಬರ್ 30ರಂದು ದೆಹಲಿಯಲ್ಲಿ ಭಾರತದ ರಾಷ್ಟ್ರಪತಿಗಳು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.