ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಪ್ರತಿಫಲಾಪೇಕ್ಷೆ ಇಲ್ಲದೇ ಮಾಡುವ ಸೇವೆ ಎಲ್ಲಕ್ಕಿಂತ ದೊಡ್ಡದು. ಅಪೇಕ್ಷೆಯೊಂದಿಗೆ ಮಾಡುವ ಕಾರ್ಯದಿಂದ ತಾತ್ಕಾಲಿಕವಾಗಿ ತೃಪ್ತಿ ದೊರೆತರೂ ಭಗವಂತನ ಸಾಕ್ಷಾತ್ಕಾರ ಸಾಧ್ಯವಾಗದು ಎಂದು ಏಳಜಿತ ಶ್ರೀ ರಾಮಕೃಷ್ಣ ಕುಟೀರದ ಶ್ರೀ ಸತ್ಯಸ್ವರೂಪಾನಂದ ಸ್ವಾಮೀಜಿ ಅವರು ಹೇಳಿದರು.
ಅವರು ಇಲ್ಲಿನ ಶ್ರೀ ಸೀತಾರಾಮಚಂದ್ರ ಕಲ್ಯಾಣ ಮಂಟಪದಲ್ಲಿ ಶ್ರೀಮದ್ಭಗವದ್ಗೀತಾ ಜಯಂತಿ ಆಚರಣಾ ಸಮಿತಿ ಬೈಂದೂರು ವತಿಯಿಂದ ಹಮ್ಮಿಕೊಂಡಿದ್ದ ಸಪ್ತಾಹ ಗೀತಾ ಜಯಂತಿ ಉತ್ಸವ – 2022 ಉದ್ಘಾಟಿಸಿ ಮಾತನಾಡಿ, ಕಲಿಯುಗದಲ್ಲಿ ಕರ್ಮಫಲ ತ್ಯಾಗ ಮಾಡುವುದು ಸುಲಭದ ಮಾತಲ್ಲ. ದೇವರ ಪೂಜಾಕಾರ್ಯದಲ್ಲಿ ಭಕ್ತಿಯಿಂದ ತೊಡಗಿಕೊಳ್ಳುವುದು ಕೂಡ ಕಷ್ಟದ ಕೆಲಸ. ಎಲ್ಲಾ ಅಪೇಕ್ಷೆಯನ್ನೂ ಮೀರಿ ಕರ್ಮಫಲ ತ್ಯಾಗ ಮಾಡುವವರೇ ನಿಜವಾದಿ ಸಂನ್ಯಾಸಿ ಎಂದೆನಿಸಿಕೊಳ್ಳುವರು ಎಂದು ನುಡಿದರು.
ಬೈಂದೂರು ಶ್ರೀಮದ್ಭಗವದ್ಗೀತಾ ಜಯಂತಿ ಆಚರಣಾ ಸಮಿತಿ ಅಧ್ಯಕ್ಷ ಬಿ. ರಾಮಕೃಷ್ಣ ಶೇರುಗಾರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಬೈಂದೂರು ಕ್ಷೇತ್ರ ಶಿಕ್ಷಣಾಧಿಕಾರಿ ನಾಗೇಶ್ ನಾಯಕ್, ಸ್ಪರ್ಧಾ ಸಮಿತಿ ಮುಖ್ಯಸ್ಥ ವಿಶ್ವೇಶ್ವರ ಅಡಿಗ, ಬೈಂದೂರು ರಾಮಕ್ಷತ್ರಿಯ ಸಂಘದ ಅಧ್ಯಕ್ಷ ರಾಮಕೃಷ್ಣ ಸಿ., ರತ್ತೂಬಾಯಿ ಜನತಾ ಪ್ರೌಢಶಾಲೆ ಮುಖ್ಯೋಪಾಧ್ಯಾಯರಾದ ಆನಂದ ಮದ್ದೋಡಿ ಉಪಸ್ಥಿತರಿದ್ದರು.
ಶ್ರೀಮದ್ಭಗವದ್ಗೀತಾ ಜಯಂತಿ ಆಚರಣಾ ಸಮಿತಿಯ ಕಾರ್ಯದರ್ಶಿ ಕೇಶವ ನಾಯಕ್ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕ ಮಂಜುನಾಥ ಬಿಜೂರು ಧನ್ಯವಾದ ಸಲ್ಲಿಸಿದರು. ಬಳಿಕ ವಿವಿಧ ಸ್ವರ್ಧಾ ಕಾರ್ಯಕ್ರಮಗಳು ಜರುಗಿದವು.