ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಭಾರತ ಕಂಡ ಮಹಾನ್ ಚೇತನ ಡಾ. ಬಿ.ಆರ್. ಅಂಬೇಡ್ಕರ್ ಅವರು ತೋರಿದ ದಾರಿಯಲ್ಲಿ ಮುನ್ನಡೆಯುವ ಜೊತೆಗೆ ಅವರ ಆದರ್ಶಗಳನ್ನು ಮೈಗೂಡಿಸಿಕೊಳ್ಳಬೇಕಿರುವುದು ಪ್ರತಿಯೋಬ್ಬ ನಾಗರಿಕನ ಕರ್ತವ್ಯವಾಗಿದೆ ಎಂದು ಬೈಂದೂರಿನ ರಂಗಕರ್ಮಿ ಗಣೇಶ್ ಕಾರಂತ್ ಹೇಳಿದರು.
ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ, ತಾಲೂಕು ಮಹಿಳಾ ಒಕ್ಕೂಟ ಬೈಂದೂರು ಹಾಗೂ ಡಾ. ಬಿ.ಆರ್. ಅಂಬೇಡ್ಕರ್ ಮಹಿಳಾ ಸಂಘ ಬೈಂದೂರು ಆಶ್ರಯದಲ್ಲಿ ಮಂಗಳವಾರ ಡಾ. ಬಿ. ಆರ್. ಅಂಬೇಡ್ಕರ್ ಪರಿನಿರ್ವಾಣ ದಿನದ ಅಂಗವಾಗಿ ಬೈಂದೂರಿನ ಪರಿಶಿಷ್ಟ ವರ್ಗದ ಆಶ್ರಮ ಶಾಲೆಯಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಹಣ್ಣು ಹಂಪಲು ವಿತರಿಸಿ ಮಾತನಾಡಿ, ಶೋಷಿತರು ದನಿಯಾಗಿದ್ದ ಅಂಬೇಡ್ಕರ್ ಅವರು ಪ್ರಪಂಚಕ್ಕೆ ಮಾದರಿಯಾದ ಸಂವಿಧಾನವನ್ನು ನೀಡಿದರು. ಅದರ ಪ್ರಯೋಜವನ್ನು ಪಡೆದು ಮುಖ್ಯವಾಹಿನಿಗೆ ಬಂದವರು, ತಮ್ಮ ಸಮುದಾಯದ ಬಡವರು, ಶೋಷಿತರ ಬಗ್ಗೆ ಕಾಳಹಿ ವಹಿಸುವುದು ಅತಿಮುಖ್ಯವಾಗಿದೆ ಎಂದರು.
ಬೈಂದೂರು ಕ್ಷೇತ್ರ ಶಿಕ್ಷಣಾಧಿಕಾರಿ ಮಂಜುನಾಥ ಎಂ.ಜಿ ಕಾರ್ಯಕ್ರಮ ಉದ್ಘಾಟಿಸಿ, ಡಾ. ಬಿ.ಆರ್. ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಶುಭಹಾರೈಸಿದರು.
ಬೈಂದೂರು ಹಾಸ್ಟೆಲ್ನ ನಿಲಯ ಪಾಲಕ ರಾಜೇಶ್, ಬೈಂದೂರು ಡಾ. ಬಿ.ಆರ್. ಅಂಬೇಡ್ಕರ್ ಮಹಿಳಾ ಸಂಘದ ಅಧ್ಯಕ್ಷೆ ವಿನಯಾ, ದಲಿತ ಸಂಘರ್ಷ ಸಮಿತಿ ಬೈಂದೂರು ಕುಂದಾಪುರ ಮಹಿಳಾ ಘಟಕದ ಗೀತಾ ಸುರೇಶ್, ದಸಂಸ ಪ್ರಮುಖರಾದ ಗಂಗಾಧರ ಗುಜ್ಜಾಡಿ, ಸಂಘಟನಾ ಸಂಚಾಲಕ ಶಿವರಾಜ್ ಉಪಸ್ಥಿತರಿದ್ದರು.
ಶಿಕ್ಷಕಿ ಚೈತ್ರಾ ಸತೀಶ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

















