ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಯಾವುದೇ ಊರಿನಲ್ಲಿ ದೇವಸ್ಥಾನ ಅಭಿವೃದ್ಧಿಯಾದರೆ ಆ ಊರು ಕೂಡ ಅಭಿವೃದ್ಧಿಯನ್ನು ಕಾಣುತ್ತದೆ. ದೇವಸ್ಥಾನದಲ್ಲಿ ಜೀವಕಳೆ ಇದ್ದಾಗಲೇ ಊರಿಗೂ, ಭಕ್ತರಿಗೂ ಶ್ರೇಯಸ್ಸು ಎಂದು ಕೊಂಡೆವೂರು ಸದ್ಗುರು ಶ್ರೀ ನಿತ್ಯಾನಂದ ಯೋಗಾಶ್ರಮದ ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿ ಅವರು ಹೇಳಿದರು.
ಅವರು ಬುಧವಾರ ವನಕೊಡ್ಲು ಗಂಗಾನಾಡು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಪುನರ್ ಪ್ರತಿಷ್ಠೆ – ಅಷ್ಟಬಂಧ ಬ್ರಹ್ಮಕಲಶೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ ಸಮಾರಂಭದಲ್ಲಿ, ದೇವಳದ ಸುತ್ತುಪೌಳಿ ಶಂಕುಸ್ಥಾಪನೆ ಮಾಡಿ ಬಳಿಕ ಮಾತನಾಡಿ ಯಡ್ತರೆ ಮನೆಯವರು, ಊರಿನವರು ತೊಡಗಿಸಿಕೊಳ್ಳುವುದರ ಜೊತೆಗೆ ದಾನಿಗಳ ನೆರವಿನಿಂದ ಸುಂದರವಾದ ಪರಿಸರದಲ್ಲಿ ದೇವಸ್ಥಾನ ಪುನರ್ ನಿರ್ಮಾಣವಾಗುತ್ತಿದೆ. ದೇವತಾ ಕಾರ್ಯಗಳು ನಿರ್ವಿಘ್ನವಾಗಿ ನಡೆಯಲಿ ಎಂದು ಆಶೀರ್ವದಿಸಿದರು.
ಉದ್ಯಮಿ ಕುಳೂರು ಕನ್ಯಾನ ಸದಾಶಿವ ಶೆಟ್ಟಿ ಮಾರ್ಚ್ ತಿಂಗಳಿನಲ್ಲಿ ನಡೆಯಲಿರುವ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಿ ಮಾತನಾಡಿ, ದೇವಸ್ಥಾನಗಳ ಜೀರ್ಣೋದ್ಧಾರದ ಮೂಲಕ ಸನಾತನ ಸಂಸ್ಕೃತಿಯ ಪುನರುತ್ಥಾನವಾಗಲಿದೆ. ಹಿಂದು ಧರ್ಮ ಶ್ರೇಷ್ಠ ಧರ್ಮವಾಗಿದ್ದು, ಅದರ ಆಚರಣೆ ಹಾಗೂ ಅಳವಡಿಕೆಯಲ್ಲಿ ನೆಮ್ಮದಿಯ ಬದುಕನ್ನು ಕಾಣುವ ದಾರಿ ಇದೆ. ಊರಿನ ಪ್ರತಿಯೊಬ್ಬರೂ ಕೈಜೋಡಿಸಿ ಪುನರ್ ನಿರ್ಮಿಸುತ್ತಿರುವ ಶಿವ ದೇವಾಲಯದಿಂದ ಊರಿಗೂ ಒಳಿತಾಗಲಿ ಎಂದು ಶುಭಹಾರೈಸಿದರು.
ಉದ್ಯಮಿ ಕೆ.ಕೆ. ಶೆಟ್ಟಿ ಮಾತನಾಡಿ ಪ್ರಕೃತಿಯ ಮಡಿಲಿನಲ್ಲಿರುವ ದೇಗಲು ಸುಂದರವಾಗಿ ಮರುನಿರ್ಮಾಣಗೊಳ್ಳುತ್ತಿದ್ದು, ಪುನರ್‌ಪ್ರತಿಷ್ಠೆಯ ಬಳಿಕ ಶ್ರದ್ಧಾ ಭಕ್ತಿಯ ಕೇಂದ್ರದ ಜೊತೆಗೆ ಪ್ರಸಿದ್ಧ ಧಾರ್ಮಿಕ ಕೇಂದ್ರವೂ ಆಗಲಿ ಎಂದರು.
ಕೇರಳ ತುಳು ಅಕಾಡೆಮಿ ಅಧ್ಯಕ್ಷ ಬಿ. ಸುಬ್ಬಣ್ಣ ರೈ, ಧಾರ್ಮಿಕ ಮುಂದಾಳು ಪ್ರೇಮಾನಂದ ಶೆಟ್ಟಿ ಅವರು ಶುಭಹಾರೈಸಿದರು. ಯಡ್ತರೆ ಮನೆಯ ಅರ್ಜುನ್ ಶೆಟ್ಟಿ, ಡಾ. ತಿಲಕ್ ಶೆಟ್ಟಿ, ಡಾ. ಮಿಥುನ್ ಶೆಟ್ಟಿ ಉಪಸ್ಥಿತರಿದ್ದರು.
ವಣಕೊಡ್ಲು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಡಾ. ಯಡ್ತರೆ ರಾಜಮೋಹನ ಶೆಟ್ಟಿ ಸ್ವಾಗತಿಸಿ, ಸ್ಥಳೀಯರಾದ ರಾಜೇಂದ್ರ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಶಿಕ್ಷಕರಾದ ಆನಂದ ಮದ್ದೋಡಿ ಕಾರ್ಯಕ್ರಮ ನಿರೂಪಿಸಿ, ಸುಧಾಕರ ಪಿ. ಸಹಕರಿಸಿದರು.