ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಬೈಂದೂರು ಗಾಂಧಿ ಮೈದಾನಕ್ಕೆ ಹೊಂದಿಕೊಂಡು ನಿರ್ಮಾಣವಾಗುತ್ತಿರುವ ಪುರಭವನ ಕಾಮಗಾರಿಯನ್ನು ಬೇರೆ ಕಡೆ ಸ್ಥಳಾಂತರಿಸುವಂತೆ ಆಗ್ರಹಿಸಿ ಮಂಗಳವಾರ ಬೈಂದೂರು ಗಾಂಧಿ ಮೈದಾನ ಉಳಿಸಿ ಧರಣಿ ಮತ್ತು ಪ್ರತಿಭಟನೆ ನಡೆಯಿತು.
ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದ ಯಡ್ತರೆ ಗ್ರಾ.ಪಂ. ಮಾಜಿ ಅಧ್ಯಕ್ಷ ನಾಗರಾಜ ಶೆಟ್ಟಿ, ಕವಿ ಗೋಪಾಲಕೃಷ್ಣ ಹೆಸರಿನಲ್ಲಿ ನಿರ್ಮಾಣವಾಗುತ್ತಿರುವ ಪುರಭವನೆಕ್ಕೆ ನಮ್ಮ ವಿರೋಧವಿಲ್ಲ, ಆದರೆ ಅದಕ್ಕಾಗಿ ವಿಶಾಲವಾದ ಗಾಂಧಿ ಮೈದಾನದಲ್ಲಿ ನಿರ್ಮಿಸವುದು ಸಮಂಜಸವಲ್ಲ, ಹಾಗಾಗಿ ಅದನ್ನು ಹತ್ತಿರದಲ್ಲಿರುವ ಯಾವುದಾದರೂ ಸರ್ಕಾರಿ ಭೂಮಿಯಲ್ಲಿ ನಿರ್ಮಾಣ ಮಾಡುವ ಬಗ್ಗೆ ಜಿಲ್ಲಾಡಳಿತ ಕ್ರಮ ಕೈಗೊಳ್ಳಬೇಕು ಎಂದರು.
ಇಲ್ಲಿನ ಗಾಂಧಿ ಮೈದಾನ 4.98 ಎಕ್ರೆ ವಿಸ್ತೀರ್ಣವನ್ನು ಹೊಂದಿದ್ದು, ಅದರಲ್ಲಿ 1.50 ಎಕ್ರೆ ಜಾಗವನ್ನು ನಗರಾಭಿವೃದ್ಧಿ ಇಲಾಖೆಯ ಹೆಸರಿನಲ್ಲಿ ಕಾಯ್ದಿರಿಸಿ ಅದರಲ್ಲಿ ಕವಿ ಮೊಗೇರಿ ಗೋಪಾಲಕೃಷ್ಣ ಹೆಸರಿನಲ್ಲಿ ಸ್ಮಾರಕ ಪುರಭವನ ನಿರ್ಮಿಸಲು ಉದ್ದೇಶಿಸಲಾಗಿದ್ದು ಉಳಿದ ಸುಮಾರು 3.48 ಎಕ್ರೆ ಜಾಗದಲ್ಲಿ ಹೊರಂಗಣ ಕ್ರೀಡಾಂಗಣ ನಿರ್ಮಿಸುವ ಬಗ್ಗೆ ಪ್ರಸ್ತಾಪಿಸಲಾಗಿದೆ. ಆದರೆ ಇದರಿಂದಾಗಿ ಕ್ರೀಡಾಂಗಣ ತೀರಾ ಕಿರಿದಾಗಲಿದ್ದು, ಇಲ್ಲಿನ ಶಾಲಾ ಮಕ್ಕಳು ಸೇರಿದಂತೆ ಕ್ರೀಡಾಪಟುಗಳಿಗೆ ಹಾಗೂ ಸಾರ್ವಜನಿಕರಿಗೆ ತೊಂದರೆಯಾಗಲಿದೆ ಎಂದರು.
ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ ಭೇಟಿ:
ಧರಣಿ ನಡೆಯುತ್ತಿರುವ ಗಾಂಧಿ ಮೈದಾನ ಪ್ರದೇಶಕ್ಕೆ ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ ಭೇಟಿ ಬಳಿಕ ಮಾತನಾಡಿ, ಸಾಹಿತ್ಯ ಕ್ಷೇತ್ರಕ್ಕೆ ಬಹುದೊಡ್ಡ ಕೊಡುಗೆ ನೀಡಿದ ಕವಿ ಗೋಪಾಲಕೃಷ್ಣ ಅಡಿಗರ ಹೆಸರಿನಲ್ಲಿ ಸ್ಮಾರಕ ಪುರಭವನ ಬೈಂದೂರಿಗೆ ಅಗತ್ಯವಾಗಿದೆ. ಆದರೆ ಎಲ್ಲಿ ನಿರ್ಮಿಸಬೇಕು ಎನ್ನುವ ಬಗ್ಗೆ ಗೊಂದಲ ಸೃಷ್ಟಿಯಾಗದಂತೆ ನೋಡಿಕೊಳ್ಳುವುದು ಜಿಲ್ಲಾಡಳಿತದ ಹೊಣೆಯಾಗಿದೆ. ಜಿಲ್ಲಾಕಾರಿಗಳು ಮಧ್ಯೆಪ್ರವೇಶಿಸಿ ಹೋರಾಟಗಾರರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸಾಮರಸ್ಯ ಮೂಡಿಸುವ ಕೆಲಸಮಾಡಬೇಕಾಗಿದೆ. ಈ ಬಗ್ಗೆ ಜಿಲ್ಲಾಕಾರಿಗಳನ್ನು ಮುಖತಃ ಭೇಟಿಯಾಗಿ ಲಿಖಿತ ಮನವಿಯನ್ನು ಸಲ್ಲಿಸುವ ಮೂಲಕ ಶೀಘ್ರ ಸಮಸ್ಯೆ ಬಗೆಹರಿಸುವಂತೆ ಮನವಿ ಮಾಡಲಾಗುವುದು ಎಂದರು.
ಗಾಂಧಿ ಮೈದಾನ ಸಂರಕ್ಷಣ ಸಮಿತಿಯ ಮುಖಂಡ ಗಿರೀಶ ಬೈಂದೂರು, ಅಧ್ಯಕ್ಷ ಸುಬ್ರಹ್ಮಣ್ಯ ಬಿಜೂರು, ಕಾರ್ಯದರ್ಶಿ ಶಿವರಾಜ್, ಗಣೇಶ ಪೂಜಾರಿ, ನಾಗರಾಜ ಗಾಣಿಗ, ಸೇರಿದಂತೆ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.