ಕುಂದಾಪ್ರ ಡಾಟ್ ಕಾಂ ಸುದ್ದಿ.
ವಿದ್ಯಾಗಿರಿ: ಕುವೆಂಪು, ದ.ರಾ.ಬೇಂದ್ರೆ ಸೇರಿದಂತೆ ಕನ್ನಡದ ಮಹತ್ವದ ಕವಿಗಳ ಕಾವ್ಯ ರಾಗಾಲಾಂಕರದೊಂದಿಗೆ ಜೀವಂತಿಕೆ ಪಡೆದಿತ್ತು. ಶಿಶುನಾಳ ಷರೀಫರ ತತ್ವಪದಗಳು ಹಾಡಾಗಿ ಹೊಮ್ಮಿ ಜೀವನಮೌಲ್ಯಗಳ ಸಂದೇಶ ಸಾರಿದವು. ರಾಜರತ್ನಂ ಅವರ ಸರಳಗನ್ನಡ ಮಧುರ ಆಲಾಪದ ಬೆಂಬಲದೊಂದಿಗೆ ಕನ್ನಡದ ಬದುಕನ್ನು ತೆರೆದಿಟ್ಟಿತ್ತು. ಮೈಸೂರು ಅನಂತಸ್ವಾಮಿ, ಸಿ. ಅಶ್ವತ್ಥ್ ಅವರ ಸಂಗೀತ ಶಕ್ತಿ ವಿವಿಧ ಗಾಯಕರ ಧ್ವನಿಯಲ್ಲಿ ನಿರೂಪಿತವಾಗುತ್ತಿತ್ತು. ಕನ್ನಡ ಮತ್ತು ಸಂಸ್ಕೃತಿಯ ಮೌಲಿಕ ಗೀತಕಾಣ್ಕೆಗಳೆಲ್ಲವೂ ಒಂದೇ ವೇದಿಕೆಯ ಮೂಲಕ ವಿವಿಧ ಗಾಯನಶೈಲಿಗಳೊಂದಿಗೆ ಮೇಳೈಸಿದ್ದವು.
ಈ ದೃಶಕ್ಕೆ ಸಾಕ್ಷಿಯಾಗಿದ್ದು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಅಂತರಾಷ್ಟ್ರಿಯ ಸಾಂಸ್ಕೃತಿಕ ಜಾಂಬೂರಿಯ ’ಕನ್ನಡ ಡಿಂಡಿಮ’ ಸಂಗೀತ ಕಾರ್ಯಕ್ರಮ. ಆಳ್ವಾಸ್ ಸಂಸ್ಥೆಯ ವಿದ್ಯಾಗಿರಿಯ ಕೆ.ವಿ ಸುಬ್ಬಣ್ಣ ಬಯಲು ರಂಗ ಮಂದಿರದಲ್ಲಿ ಬೆಂಗಳೂರಿನ ಶಂಕರ ಶಾನುಭೋಗ್ ಮತ್ತು ಬಳಗದ ಕಲಾವಿದರು ?ಕನ್ನಡ ಡಿಂಡಿಮ? ಕನ್ನಡದ ಶ್ರೇಷ್ಠ ಕವಿಗಳು ಮತ್ತು ಸಂಗೀತ ನಿರ್ದೇಶಕರ ಹಾಡುಗಳನ್ನು ಪ್ರಸ್ತುತಪಡಿಸಿ ಕನ್ನಡ ಮತ್ತು ಸಂಸ್ಕೃತಿಯ ವಿಶೇಷತೆಯನ್ನು ವಿನೂತನ ರೀತಿಯಲ್ಲಿ ಅನಾವರಣಗೊಳಿಸಿದರು.
ಖ್ಯಾತ ಗಾಯಕರಾದ ಶಂಕರ ಶ್ಯಾನಭೋಗ, ರವಿ ಮೂರೂರು, ಸುಪ್ರಿಯಾ ರಘುನಂದನ್ ಮತ್ತು ಮೇಘನಾ ಹಳಿಯಾಳ ಅವರ ಸುಮಧುರ ಧ್ವನಿಯ ಮೂಲಕ ಕನ್ನಡದ ಶ್ರೇಷ್ಠ ಕವಿಗಳ ಕವಿತೆಗಳ ಆಸ್ವಾದ ಪ್ರೇಕ್ಷಕರಿಗೆ ದಾಟಿಕೊಂಡಿತು. ಗಾಯಕರು ತಮ್ಮದೇ ಆದ ವಿನೂತನ ಗಾಯನಶೈಲಿಯ ಮೂಲಕ ಹೊಸ ಪೀಳಿಗೆಯನ್ನೂ ಸೆಳೆದುಕೊಳ್ಳುವ ಹಾಗೆ ಹಾಡಿದ್ದರಿಂದ ಖ್ಯಾತ ಸಂಗೀತ ನಿರ್ದೇಶಕರು ರಾಗಸಂಯೋಜಿಸಿದ ಈ ಕವಿತೆಗಳು ಹಳೆಯದು ಎಂದೆನ್ನಿಸಲಿಲ್ಲ. ಹೊಸತು ಹೊಸತು ಭಾವಗಳನ್ನು ಮೂಡಿಸಿದವು. ಕೆಲವೊಮ್ಮೆ ಯುವಪ್ರೇಕ್ಷಕರು ಒನ್ಸ್ ಮೋರ್ ಎಂದು ಬೇಡಿಕೆ ಇರಿಸಿ ಮತ್ತೆ ಹಾಡುವಂತೆ ಕೋರಿಕೊಂಡರು.
ದ.ರಾ.ಬೇಂದ್ರೆ ಅವರ ’ಶ್ರಾವಣ ಬಂತು ಕಾಡಿಗೆ ಬಂತು ನಾಡಿಗೆ’ ಹಾಡನ್ನು ಶಂಕರ ಶ್ಯಾನುಭೋಗ ಅವರು ಪ್ರಸ್ತುತಪಡಿಸಿದ ತಕ್ಷಣ ವ್ಯಾಪಕ ಚಪ್ಪಾಳೆಗಳ ಮೆಚ್ಚುಗೆ ವ್ಯಕ್ತವಾಯಿತು. ಅವರು ಹಾಡಿದ ’ಕಾಣದ ಕಡಲಿಗೇ ಹಂಬಲಿಸಿದೇ ಮನ’ ಹಾಡು ಯುವಮನಸ್ಸುಗಳನ್ನು ಸೆಳೆಯಿತು.
ರವಿ ಮೂರೂರು ಅವರು ’ನೀ ಹೀಂಗ ನೋಡಬ್ಯಾಡ ನನ್ನ’ ಹಾಡು ಅನೇಕ ವಿದ್ಯಾರ್ಥಿ ಸಮೂಹಕ್ಕೆ ಇಷ್ಟವಾಯ್ತು. ಪ್ರೇಕ್ಷಕರ ಒತ್ತಾಯದ ಮೇರೆಗೆ ಮತ್ತೆ ಹಾಡಿದರು. ವಿಶೇಷ ಶೈಲಿಯಲ್ಲಿ ಅವರು ಹಾಡಿದ ಮತ್ತೊಂದು ಗೀತೆ ’ನನ್ನ ಗಂಗಿ ರೂಪ’ ಗಮನ ಸೆಳೆಯಿತು. ಅವರು ತಮ್ಮ ಧ್ವನಿಮಾಧುರ್ಯದ ವಿಶೇಷ ಪ್ರಯೋಗಶೀಲತೆಯೊಂದಿಗೆ ಪ್ರಸ್ತುತಪಡಿಸಿದ ಇನ್ನೊಂದು ಹಾಡು ’ಹೇಳ್ಕೊಳ್ಳಾಕ್ ಒಂದೂರು ತಲೆಮ್ಯಾಲೆ ಒಂದ್ಸೂರು’ ಪ್ರೇಕ್ಷಕರಿಗೆ ಖುಷಿ ನೀಡಿತು.
ಸುಪ್ರಿಯ ರಘುನಂದನ್ ಅವರು ಸಂತ ಶಿಶುನಾಳು ಶರಿಫರ ’ಎಂಥಾ ಮೋಜಿನ ಕುದರೆ? ಮತ್ತು ಎಮ್ ಎನ್ ವ್ಯಾಸರಾವ್ ಅವರ ?ನಿನ್ನ ಕಂಗಳ ಕೊಳದಿ? ಹಾಡುಗಳೂ ಹಲವರ ಮೆಚ್ಚುಗೆಗೆ ಪಾತ್ರವಾದವು. ಮೇಘನ ಹಳಿಯಾಳ ಹಾಡಿದ ಉತ್ತರ ಕರ್ನಾಟಕದ ಶೈಲಿಯ ಜನಪದ ?ಹಸಿರು ಕಡ್ಡಿಯ ಸೀರೆ? ಮತ್ತು ?ಸೊಜುಗಾದ ಸೂಜಿ ಮಲ್ಲಿಗೆ? ಹಾಡುಗಳಿಗೆ ಪ್ರೇಕ್ಷಕರು ಭಾವುಕರಾಗಿ ತಲೆದೂಗಿದರು.
ದೀಪಕ್ ಮತ್ತು ಸಂಗೀತ ಥಾಮ್ಸ ( ಕೀಬೋರ್ಡ್ ) ರಾಜ್ ಗೋಪಾಲ್ ( ಗೀಟಾರ್ ) ವೀರೇಂದ್ರ ಪ್ರಸಾದ್ ( ಮ್ಯಾಂಡೋಲಿನ್ ) ಲೋಕೇಶ ( ಕೊಳಲು ) ಪದ್ಮಾನಾಭ ಕಾಮತ್ ( ರಿದಂ ಪ್ಯಾಡ್) ಭಾಸ್ಕರ ( ಢೋಲಕ್ ) ರಾಜೇಶ್ ಭಾಗವತ್ ( ತಬಲಾ ) ಸಾಥ್ ನೀಡಿದರು.ವಿದ್ಯಾರ್ಥಿನಿ ಹರ್ಷಿತ್ ಶಿರೂರು ಸ್ವಾಗತಿಸಿ ನಿರೂಪಿಸಿದರು.
- ವರದಿ: ಮಹಾಂತೇಶ ಚಿಲವಾಡಗಿ, ದ್ವಿತೀಯ ವರ್ಷ, ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ, ಎಸ್.ಡಿ.ಎಂ ಸ್ನಾತಕೋತ್ತರ ಕೇಂದ್ರ, ಉಜಿರೆ