ಕುಂದಾಪ್ರ ಡಾಟ್ ಕಾಂ.
ಆಲ್ಬಂ ಹಾಡುಗಳ ಜಗತ್ತಿನಲ್ಲಿ ತಮ್ಮನ್ನು ತಾವು ನಿರೂಪಿಸಿಕೊಂಡು ನಿರಂತರವಾಗಿ ಮನ್ನಣೆ & ಅವಕಾಶಗಳನ್ನು ಗಿಟ್ಟಿಸುತ್ತಾ ಗೆಲುವು ಕಾಣುವವರು ಕೆಲವರು ಮಾತ್ರ. ಅಂತಹ ಪ್ರತಿಭೆಗಳಲ್ಲೊಬ್ಬರು ದಾವಣಗೆರೆ ಮೂಲದ ಅಭಿಷೇಕ್ ಮಠದ್! ಇಂತಹ ಸೃಜನಶೀಲ ಮನಸ್ಸಿನ ಅಭಿಷೇಕ್ ಕಣ್ಣಿಗೆ ಬಿದ್ದದ್ದು ದಾರವಾಡದ ದೈತ್ಯ ಡ್ಯಾನ್ಸ್ ಪ್ರತಿಭೆ “ಸುನಿಧಿ ನೀಲೋಪಂತ್”! ಅಭಿಷೇಕ್ ಹಾಗೂ ಸುನಿಧಿ ಪ್ರತಿಭೆಗಳು ಸಮ್ಮೇಳನಗೊಂಡಾಗ ಹುಟ್ಟಿದ್ದೇ ” ನಿಲ್ಲಬೇಡ” ಎಂಬ ಅದ್ಭುತ ಕನಸು!
ಅಭಿಷೇಕ್ ಮೂಲತಃ ಒಬ್ಬ ಡ್ಯಾನ್ಸರ್ “ದಾವಣಗೆರೆ ಡ್ಯಾನ್ಸ್ ಕಿಂಗ್” ಎಂದೇ ಖ್ಯಾತರಾಗಿದ್ದ ಇವರು ರ್ಯಾಪರ್ ಚಂದನ್ ಶೆಟ್ಟಿ ಜೊತೆ ಸೇರಿ ಸೃಷ್ಟಿಸಿದ “ಟಕಿಲ” ಆಲ್ಬಂ ಹಾಡು ಯುವ ಜನತೆಯನ್ನು ಹುಚ್ಚೆಬ್ಬಿಸಿ ಕುಣಿಯುವಂತೆ ಮಾಡಿದ್ದು ಇತಿಹಾಸ! ಅಭಿಷೇಕ್ ಮತ್ತೆಂದೂ ಹಿಂದಿರುಗಿ ನೋಡಿಲ್ಲ. ಪರ್ಫೆಕ್ಟ್ ಗರ್ಲ್, ಬಡಪಾಯಿ ಕುಡುಕ, ಆರಾಮ್ಸೆ ಇನ್ನೂ ಹಲವಾರು ಆಲ್ಬಂ ವೀಡಿಯೋ ಹಾಡುಗಳನ್ನು ನಿರಂತರವಾಗಿ ಕೋರಿಯಾಗ್ರಫ್ & ಡೈರೆಕ್ಟರ್ ಮಾಡುತ್ತಾ ಕನ್ನಡಿಗರನ್ನು ಮನಸಾರೆ ರಂಜಿಸುತ್ತಾ ಬಂದಿದ್ದಾರೆ.
ಇನ್ನು ಧಾರವಾಡದ ದೈತ್ಯ ಡ್ಯಾನ್ಸ್ ಪ್ರತಿಭೆ “ಸುನಿಧಿ ನೀಲೋಪಂತ್”! ಎಂಟನೇ ತರಗತಿ ಓದುತ್ತಿರುವ ಹದಿಮೂರರ ಬಾಲೆ ಸುನಿಧಿ ನೀಲೋಪಂತ್ ಡ್ಯಾನ್ಸನ್ನೇ ಉಸಿರಾಡುತ್ತಿದ್ದು, ತನು ಮನವನ್ನು ಪರಿಪೂರ್ಣವಾಗಿ ಅದರಲ್ಲೇ ತೊಡಗಿಸಿಕೊಂಡವಳು, ಅದಕ್ಕೆ ಮನೆಯವರ ಸಂಪೂರ್ಣ ಪ್ರೋತ್ಸಾಹವಿದ್ದು ನೂರಾರು ಕಾರ್ಯಕ್ರಮಗಳಲ್ಲಿ ತನ್ನ ನೃತ್ಯ ಪ್ರತಿಭೆಯನ್ನು ಪ್ರದರ್ಶಿಸುವ ಮೂಲಕ Dancing Diva ಎಂದೇ ಪ್ರಖ್ಯಾತಳಾಗಿದ್ದಾಳೆ.
ಈ ಇಬ್ಬರು ಪ್ರತಿಭೆಗಳು ಜೊತೆಯಾಗಿ ಮಾಡಿದ ಪ್ರಾಜೆಕ್ಟ್ ” ನಿಲ್ಲಬೇಡ”. ಕನಸಿಗೆ ಸಿರಿತನ ಬಡತನದ ಬೇಧವಿಲ್ಲ, ಮಳೆ ಬಂದರೆ ಸೋರುವ ಮನೆಯ ಬಾಲೆಯೊಬ್ಬಳ ಡ್ಯಾನ್ಸ್ ಪ್ರತಿಭೆ ಹಾಗೂ ಕನಸಿನ ಪಯಣವಿರುವ ಕಥೆಯನ್ನೇ ಹಾಡಾಗಿಸುವ ಅಭಿಷೇಕ್ ಕಲ್ಪನೆ ಅದ್ಭುತ. ಆ ಕಲ್ಪನೆಗೆ ನೀರೆರೆದು ಪೋಷಿಸಿದ್ದು “ಲಲಿತಾ ಕ್ರಿಯೇಶನ್ಸ್” ಮೂಲಕ ನಿರ್ಮಾಪಕಿ ಶ್ರೀಮತಿ. ಪ್ರತಿಭಾ ನೀಲೋಪಂತ್. ವಿಜಯ್ ಈಶ್ವರ್ ರಚಿಸಿದ ಹಾಡಿಗೆ ಸಂಗೀತ ಸಂಯೋಜಿಸಿ ಧ್ವನಿಯಾಗಿದ್ದಾರೆ ಕನ್ನಡದ ಮನೆಮಾತು ಚಂದನ್ ಶೆಟ್ಟಿ! ಯಾವ ಹಾಲಿವುಡ್ ಗೂ ಕಡಿಮೆಯಿಲ್ಲದ ಗುಣಮಟ್ಟದಲ್ಲಿ ಚಿತ್ರೀಕರಿಸಿ ಒಂದು ಸುಂದರ ವೀಡಿಯೋ ಸಾಂಗ್ ಆಗಿ ಪರಿವರ್ತಿಸುವಲ್ಲಿನ ಶ್ರೇಯ ಇಡೀ ತಂಡಕ್ಕೆ ಸಲ್ಲುತ್ತದೆ. ಅತ್ಯಂತ ದುಬಾರಿ ಬೆಲೆಯ ಬೋಲ್ಟ್ ಕ್ಯಾಮೆರಾ ಬಳಸಿ ಚಿತ್ರೀಕರಿಸಿದ ಮೊದಲ ಕನ್ನಡದ ಆಲ್ಬಂ ಗೀತೆ “ನಿಲ್ಲಬೇಡ” ತಾರಾಗಣದಲ್ಲಿ ನೂರಾರು ನೃತ್ಯ ಕಲಾವಿದರ ಜೊತೆ ಖ್ಯಾತ ನಟಿಯರಾದ ಅನು ಪ್ರಭಾಕರ್ & ಹರಿಣಿ ಶ್ರೀಕಾಂತ್ ಹಾಗೂ ಡ್ಯಾನ್ಸ್ ಮಾಸ್ಟರ್ ಗಳಾದ ಶಶಿ ಮಾಸ್ಟರ್ & ಅಝ್ಗರ್ ಮಾಸ್ಟರ್ ಕಾಣಿಸಿಕೊಂಡಿದ್ದು, ವಿಶೇಷವಾಗಿ ಮುಖ್ಯ ಭೂಮಿಕೆಯಲ್ಲಿ Dancing Diva ಸುನಿಧಿ ನೀಲೋಪಂತ್ & ಆಕೆಯ ಡ್ಯಾನ್ಸ್ ಗುರವಾಗಿ ಸ್ವತಃ ಅಭಿಷೇಕ್ ಮಠದ್ ಜೀವಿಸಿದ್ದಾರೆ.
ಅರ್ಥಗರ್ಭಿತ ಸಾಹಿತ್ಯ, ಮೋಡಿಮಾಡುವ ಸಂಗೀತ, ಮನಮೋಹಕ ನೃತ್ಯ & ಅತ್ಯದ್ಭುತ ದೃಶ್ಯಿಕೆಗಳಿರುವ ಕನ್ನಡದ ಅತೀ ದೊಡ್ಡ Dance Music Video Song “ನಿಲ್ಲಬೇಡ” ಎಂಬ ಸಂಗೀತ ದೃಶ್ಯ ಕಾವ್ಯ ಈಗಾಗಲೇ ಒಂದು ಮಿಲಿಯನ್ ವೀಕ್ಷಣೆ ಕಂಡು ಮುನ್ನುಗ್ಗುತ್ತಿದ್ದು ಈ ಆಲ್ಬಂ ಹಾಡನ್ನು ನೀಡಿದ ಅಭಿಷೇಕ್ & ಸುನಿಧಿ ತಂಡಕ್ಕೆ ಕರ್ನಾಟಕದ ಸಮಸ್ತ ಜನತೆಯ ಪರವಾಗಿ ಅಭಿನಂದನೆಗಳು.