ಕುಂದಾಪ್ರ ಡಾಟ್ ಕಾಂ ಸುದ್ದಿ.
ವಿದ್ಯಾಗಿರಿ: ಆಳ್ವಾಸ್ ಶಿಕ್ಷಣ ಸಂಸ್ಥೆಯ ವಿದ್ಯಾಗಿರಿ ಆವರಣದಲ್ಲಿ ನಡೆಯುತ್ತಿರುವ ಅಂತಾರಾಷ್ಟ್ರೀಯ ಸಾಂಸ್ಕೃತಿಕ ಜಾಂಬೂರಿಯ ಮೂರನೇ ದಿನ ಶುಕ್ರವಾರ ನುಡಿಸಿರಿ ವೇದಿಕೆಯಲ್ಲಿ ’ಕೊಳಲು ವಾದನ ಜುಗಲ್‌ಬಂದಿ’ ಕಾರ್ಯಕ್ರಮ ನಡೆಯಿತು. ಬೆಂಗಳೂರಿದ ದೀಪಕ್ ಹೆಬ್ಬಾರ್ ಮತ್ತು ಸುನೀಲ್ ಕುಮಾರ್ ಕೊಳಲಿನ ನಾದಸ್ವರದ ಮೂಲಕ ಕೇಳುಗರ ಮನಸೂರೆಗೊಳಿಸಿದರು.
ಕಾರ್ಯಕ್ರಮವನ್ನು ಕರ್ನಾಟಿಕ್ ಸಂಗೀತ ಪ್ರಕಾರದ ಹಂಸಧ್ವನಿ ರಾಗದಲ್ಲಿ ’ವಾತಾಪಿ ಗಣಪತಿ’ ಗೀತೆಯನ್ನು ಆದಿತಾಳದಲ್ಲಿ ಕೊಳಲಿನ ಮೂಲಕ ಪ್ರಸ್ತುತಪಡಿಸಿ ಆರಂಭಿಸಿದರು. ನಂತರ ಆದಿತಾಳದಲ್ಲಿ ’ವಾಚಿಸ್ಪತಿ’ ಹಾಗೂ ಕೊನೆಯಲ್ಲಿ ಮಧ್ಯಮವತಿ ತಾಳದಲ್ಲಿ ’ಭಾಗ್ಯದ ಲಕ್ಷ್ಮೀ ಬಾರಮ್ಮ’ ಗೀತೆಗಳು ಕೊಳಲ ನಾದದಲ್ಲಿ ಇಂಪಾಗಿ ಮೂಡಿಬಂದವು.
ಮೃದಂಗದಲ್ಲಿ ನಾಗೇಂದ್ರ ಪ್ರಸಾದ್ ಮತ್ತು ತಬಲದಲ್ಲಿ ಸುದತ್ತ ಶ್ರೀಪಾದರವರ ತನಿಯಾ ವರ್ತನ ಕಾರ್ಯಕ್ರಮದಲ್ಲಿ ವಿಶೇಷವಾಗಿತ್ತು. ಒಂದೂವರೆ ಗಂಟೆಗಳ ಕಾಲ ನಡೆದ ಕೊಳಲು ವಾದನ ಜುಗುಲ್‌ಬಂದಿ ನೆರೆದಿದ್ದವರನ್ನು ತನ್ನಡೆಗೆ ಹಿಡಿದಿಟ್ಟುಕೊಳ್ಳುವಲ್ಲಿ ಯಶಸ್ವಿಯಾಗಿತ್ತು. ಜೊತೆಗೆ ಕೊಳಲಿಗೆ ಸಾಥ್ ನೀಡಿದ ತಬಲಾ ಹಾಗೂ ಮೃದಂಗ ಕಾರ್ಯಕ್ರಮದ ಮೆರುಗು ಹೆಚ್ಚುವಂತೆ ಮಾಡಿತ್ತು.
ವರದಿ: ಪ್ರೀತಿ ಹಡಪದ, ದ್ವಿತೀಯ ವರ್ಷ, ಸ್ನಾತಕೋತ್ತರ ಕೇಂದ್ರ, ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ
ಚಿತ್ರಗಳು: ವಿನಿತ ಎಸ್.










