ಭಾರತಿ ಹೆಗಡೆ | ಕುಂದಾಪ್ರ ಡಾಟ್ ಕಾಂ ವರದಿ.
ವಿದ್ಯಾಗಿರಿ: ಅಂತಾರಾಷ್ಟ್ರೀಯ ಸಾಂಸ್ಕೃತಿಕ ಜಂಬೂರಿಯ ಕಲಾಮೇಳದ ಭಾಗವಹಿಸಿರುವ ವಿವಿಧ ಮಳಿಗೆಗಳು ಜನರ ಪ್ರಮುಖ ಆಕರ್ಷಣೆಯಾಗಿವೆ. ಅವುಗಳಲ್ಲಿ ಮಣ್ಣಿನಿಂದ ಸಿದ್ಧಪಡಿಸಿದ ವಿವಿಧ ಬಗೆಯ ಮಡಿಕೆಗಳು, ದೇವರ ಮೂರ್ತಿಗಳು, ವಿಶೇಷ ಶೈಲಿಯ ಪೂಜಾ ಸಾಮಗ್ರಿಗಳು ಗಮನಸೆಳೆಯುತ್ತಿದೆ.
ಈ ಎಲ್ಲಾ ಮಣ್ಣಿನ ಸಾಮಗ್ರಿಗಳು ಕಾಣುವ ಕಣ್ಣಿಗೆ ಎಷ್ಟು ಅಂದವೋ ಜೊತೆಗೆ ಪರಿಸರ ಸ್ನೇಹಿ ಮೌಲ್ಯವನ್ನು ಎತ್ತಿ ಹಿಡಿಯುವ ಕಲಾಕುಸುರಿಯಾಗಿದೆ. ಫೈಬರ್, ಸ್ಟೀಲ್ ಪಿಂಗಾಣಿ ಹೀಗೇ ಅದೆಷ್ಟೋ ಟ್ರೆಂಡ್‌ಗೆ ತಕ್ಕಂತಹ ಪಾತ್ರೆಗಳು ಬಂದರೂ ಇವತ್ತಿಗೂ ಅನೇಕರು ಮಣ್ಣಿನಿಂದ ಸಿದ್ಧವಾದ ಪಾತ್ರೆಗಳನ್ನೇ ಇಷ್ಟಪಡುತ್ತಾರೆ.ಇಂತಹದ್ದೇ ಪುಟ್ಟ ಪುಟ್ಟ ಟೆರ್ರಕೋಟ ಸಾಮಗ್ರಿಗಳು ಜಾಂಬೂರಿ ಅಂಗಳದಲ್ಲಿ ಕಣ್ಮನಸೆಳೆಯುತ್ತಿವೆ.
ಮೂಲತಃ ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಸಣ್ಣ ಹಳ್ಳಿಯವರಾದ ರೇಣುಕಾ ಕುಂಬಾರ್ ಅವರು ಸ್ವತಃ ತಾವೇ ಸುಮಾರು ಹದಿನೈದು ವರ್ಷಗಳಿಂದ ಕುಂಬಾರಿಕೆ ಕೆಲಸವನ್ನು ಮಾಡಿಕೊಂಡು ಬಂದಿದ್ದಾರೆ. ವಿವಿಧ ಆಕಾರದ ಮಣ್ಣಿನ ವಸ್ತುಗಳನ್ನು ತಯಾರಿಸುವುದೇ ಇವರ ಮುಖ್ಯ ಉದ್ಯೋಗವಾಗಿದೆ.
ಭಾರತದಲ್ಲಿಯೇ ಮಣ್ಣಿನ ವಸ್ತುಗಳನ್ನು ಸಿದ್ಧಪಡಿಸಲು ದೊರಕುವ ಶ್ರೇಷ್ಠ ಮಣ್ಣು ಎಂದರೆ ಖಾನಪುರದ ಮಣ್ಣು. ಹೀಗಾಗಿ ತಮ್ಮದೇ ಹಳ್ಳಿಯಲ್ಲಿ ಸಿಗುವ ಮಣ್ಣನ್ನು ಮೊದಲು ತಂದು ಅದರಲ್ಲಿ ಒಂದು ಕಲ್ಲೂ ಕೂಡ ಇರದಂತೆ ಚೆನ್ನಾಗಿ ಸೋಸಿ, ತಯಾರಾಗುವ ಸಾಮಗ್ರಿಗಳು ಸುಲಭವಾಗಿ ಒಡೆದುಹೋಗದಂತೆ ಕಟ್ಟಿಗೆಯ ಸಹಾಯದಿಂದ ಸುಟ್ಟು ನಂತರ ಸರಿಯಾದ ಹದದಲ್ಲಿ ನೀರಿನಲ್ಲಿ ಬೆರೆಸಿ ಚಕ್ರದ ಸಹಾಯದಿಂದ ಪ್ರತಿಯೊಂದು ಟೆರ್ರಕೋಟ ಆಕೃತಿಗಳು ತಯಾರಾಗುತ್ತವೆ.
ಇದಲ್ಲದೇ ಯಾವುದೇ ರೀತಿಯ ಕೆಮಿಕಲ್ ಬಳಸದೇ ಸಂಪೂರ್ಣ ನೈಸರ್ಗಿಕ ಮಾದರಿಯಲ್ಲಿ ಅಡುಗೆ ಪಾತ್ರೆಗಳು, ಹೂಕುಂಡಗಳು, ವೈವಿಧ್ಯಮಯವಾದ ಶೋಪೀಸ್‌ಗಳು ಇನ್ನಿತರ ವಸ್ತುಗಳನ್ನು ಬಹಳ ಕಲಾತ್ಮಕವಾಗಿ ಸಿದ್ಧಪಡಿಸುತ್ತಾರೆ.
ಇದಲ್ಲದೇ ತಮ್ಮ ಮಳಿಗೆಯಿಂದ ಕೊಂಡೊಯ್ಯುವ ವಿಭಿನ್ನ ಕ್ಲೇ ವಸ್ತುಗಳನ್ನು ಬಹಳ ಅಚ್ಚುಕಟ್ಟಾಗಿ ಪ್ಯಾಕಿಂಗ್ ಮಾಡುಕೊಡುವುದು ಇವರ ವಿಶೇಷವಾಗಿದೆ. ಜೊತೆಗೆ ಜಾಂಬೂರಿಗೆ ಆಗಮಿಸಿದ ಮಕ್ಕಳಿಗೆ ಮಣ್ಣಿನಿಂದ ತಯಾರಾಗುವ ವಸ್ತುಗಳ ಮಹತ್ವ ಮತ್ತು ಉಪಯೋಗವನ್ನು ತಿಳಿಸಿಕೊಡುವಂತಹ ಉನ್ನತ ಕಾರ್ಯದಲ್ಲಿ ರೇಣುಕಾ ಕುಂಬಾರ್ ತೊಡಗಿಸಿಕೊಂಡಿದ್ದಾರೆ.
- ವರದಿ: ಭಾರತಿ ಹೆಗಡೆ, ದ್ವಿತೀಯ ವರ್ಷ, ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ, ಎಸ್.ಡಿ.ಎಂ ಸ್ನಾತಕೋತ್ತರ ಕೇಂದ್ರ, ಉಜಿರೆ