ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಬದುಕಿನಲ್ಲಿ ಎದುರಾಗಬಹುದಾದ ಸವಾಲು ಸ್ವೀಕರಿಸಿ ಮುನ್ನಡೆಯಲಷ್ಟೆ ಶಿಕ್ಷಣ ನೀಡಲಾಗುತ್ತದೆ. ಶಿಕ್ಷಣದೊಂದಿಗೆ ಯಾವ ವಿಭಾಗದಲ್ಲಿ ಹೆಚ್ಚಿನ ಆಸಕ್ತಿ ಇದೆ ಎಂಬುದನ್ನು ಗುರುತಿಸಿ, ಅದರಲ್ಲಿ ಹೆಚ್ಚಿನ ಕೌಶಲ್ಯ ಹೊಂದಲು ವಿದ್ಯಾರ್ಥಿ ದೆಸೆಯಿಂದಲೇ ತಯಾರಿ ನಡೆಸುವುದು ಪ್ರತಿಯೊಬ್ಬ ವಿದ್ಯಾರ್ಥಿಯ ಗುರಿಯಾಗಬೇಕು ಎಂದು ನಿವೃತ್ತ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ವಿಜಯಕುಮಾರ್ ಶೆಟ್ಟಿ ಹೇಳಿದರು.
ಅವರು ಗುರುವಾರ ಇಲ್ಲಿನ ಯು. ಬಿ. ಶೆಟ್ಡಿ ಆಂಗ್ಲ ಮಾಧ್ಯಮ ಶಾಲೆಯ ವಾರ್ಷಿಕೋತ್ಸವ ‘ಚೈತನ್ಯ’ ಉದ್ಘಾಟಿಸಿ ಮಾತನಾಡಿ, ಭಾರತವು ಯುವಜನರ ದೇಶವಾಗಿದ್ದು, ವಿದ್ಯಾರ್ಥಿಗಳು ಯಾವುದೇ ಕ್ಷೇತ್ರದಲ್ಲಿ ಯಶಸ್ವಿಯಾದರೂ ಅದೇ ನಾವು ದೇಶಕ್ಕೆ ಸಲ್ಲಿಸಬಹುದಾದ ಕೊಡುಗೆಯಾಗಿದೆ. ಆಧುನಿಕ ಯುಗದಲ್ಲಿ ನೂರಾರು ಕೆಲಸದ ಅವಕಾಶ ತೆರೆದುಕೊಂಡಿದ್ದು, ಅದಕ್ಕೆ ತಕ್ಕಂತೆ ಸಿದ್ಧರಾಗುವ ಜವಾಬ್ದಾರಿ ವಿದ್ಯಾರ್ಥಿಗಳದ್ದಾಗಿದೆ ಎಂದರು.
ಅಧಿಕಾರ ಮತ್ತು ಹುದ್ದೆಯನ್ನು ಕೇವಲ ತೋರಿಕೆಗೆ ಹೊಂದದೇ ಬದ್ಧತೆಯಿಂದ ಕೆಲಸ ಮಾಡಬೇಕಿದೆ. ಯು.ಪಿ.ಎಸ್.ಸಿ ಪರೀಕ್ಷೆ ಬರೆದು ಸಾರ್ವಜನಿಕ ಸೇವೆಗೆ ಸೇರುವುದರಿಂದ ದೇಶದಲ್ಲಿ ಮಹತ್ತರ ಬದಲಾವಣೆ ತರಲು ಸಾಧ್ಯವಿದ್ದು, ಕರಾವಳಿಯ ವಿದ್ಯಾರ್ಥಿಗಳು ಈ ಬಗ್ಗೆ ಹೆಚ್ಚಿನ ಗಮನ ಹರಿಸಬೇಕು ಎಂದರು.
ಯು.ಬಿ. ಶೆಟ್ಟಿ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಯು.ಬಿ. ಶೆಟ್ಟಿ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ಬಡತನ ಹಾಗೂ ಇನ್ನಿತರ ಅಡ್ಡಿ ಆತಂಕಗಳನ್ನು ಸಬೂಬು ಮಾಡಿಕೊಂಡರೆ ಯಶಸ್ಸು ಗಳಿಸಲು ಸಾಧ್ಯವಿಲ್ಲ. ದೃಢನಿರ್ಧಾರದಿಂದ ಮಾತ್ರವೇ ಗುರಿ ತಲುಪಲು ಸಾಧ್ಯ. ಯುಬಿಎಸ್ ಶಿಕ್ಷಣ ಸಂಸ್ಥೆ ದಿನದಿಂದ ದಿನಕ್ಕೆ ಮೂಲಭೂತ ಸೌಕರ್ಯಗಳನ್ನು ಹೆಚ್ಚಿಸಿಕೊಂಡು ಮುನ್ನಡೆಯುತ್ತಿದೆ. ಪ್ರತಿಯೊಬ್ಬ ವಿದ್ಯಾರ್ಥಿಗಳ ಬಗ್ಗೆಯೂ ವಿಶೇಷ ಕಾಳಜಿ ವಹಿಸಲಾಗುತ್ತಿದೆ ಎಂದರು.
ಪ್ರಧಾನ ಕಾರ್ಯದರ್ಶಿ ಯಶಶ್ರೀ ಬಿ. ಶೆಟ್ಟಿ ಮಾತನಾಡಿ, ಕೇವಲ ಸರ್ಟಿಫಿಕೆಟ್ ಪಡೆದರಷ್ಟೇ ಸಾಲದು. ನಾಡಿನ ಸಂಸ್ಕೃತಿ ಪರಂಪರೆಯನ್ನು ಅರಿಯುವುದು ಹಾಗೂ ಪಠ್ಯೇತರ ಚಟುವಟಿಕೆಯಲ್ಲಿ ಸಕ್ರೀಯವಾಗಿ ಭಾಗವಹಿಸುವುದರಿಂದ ಶಿಕ್ಷಣ ಪರಿಪೂರ್ಣವಾಗುತ್ತದೆ ಎಂದರು.
ಈ ಸಂದರ್ಭ ಅತಿಥಿಗಳನ್ನು ಹಾಗೂ ವಿಜಯರತ್ನ ಪ್ರಶಸ್ತಿ ಪುರಸ್ಕೃತ ಯು.ಬಿ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು. ಶೈಕ್ಷಣಿಕ ಸಾಧನೆಗೈದ ವಿದ್ಯಾರ್ಥಿಗಳು ಹಾಗೂ ಕ್ರೀಡಾ ಕ್ಷೇತ್ರದ ಚಾಂಪಿಯನ್’ಗಳಿಗೆ ಪ್ರಶಸ್ತಿಪತ್ರ ಬಹುಮಾನ ವಿತರಿಸಲಾಯಿತು.
ಸಿಆರ್ಪಿ ಮಂಜುನಾಥ್ ನಾಯ್ಕ್ ಅತಿಥಿಯಾಗಿದ್ದರು. ಯು.ಬಿ. ಶೆಟ್ಟಿ ಶಾಲೆಯ ಪ್ರಧಾನ ಕಾರ್ಯದರ್ಶಿ ಯಶಶ್ರೀ ಬಿ. ಶೆಟ್ಟಿ, ಟ್ರಸ್ಟಿಗಳಾದ ರಂಜನಾ ಯು.ಬಿ ಶೆಟ್ಟಿ, ಶುಭಶ್ರೀ ಪುನೀತ್ ಶೆಟ್ಟಿ, ವಿದ್ಯಾರ್ಥಿ ನಾಯಕ ಅಬ್ದುಲ್ ರಾಜಿಕ್ ಕಾಸರ್ಕೋಡ್ ಉಪಸ್ಥಿತರಿದ್ದರು.
ಶಾಲಾ ಮುಖ್ಯೋಪಧ್ಯಾಯಿನಿ ಅಮಿತಾ ಶೆಟ್ಟಿ ವಾರ್ಷಿಕ ವರದಿ ವಾಚಿಸಿದರು. ಶಿಕ್ಷಣ ಸಂಯೋಜಕ ಸುಬ್ರಹ್ಮಣ್ಯ ಜೋಶಿ ಸ್ವಾಗತಿಸಿ, ವಿದ್ಯಾರ್ಥಿ ನಾಯಕಿ ರಾಶಿ ಸುವರ್ಣ ವಂದಿಸಿದರು. ವಿದ್ಯಾರ್ಥಿಗಳಾದ ಸ್ಕಂದರಾಜ್ ಹಾಗೂ ಆಯೆಷಾ ಅದಾ ಕಾರ್ಯಕ್ರಮ ನಿರೂಪಿಸಿದರು.