ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಕಳೆದ ಕೆಲವು ವರ್ಷಗಳಿಂದೀಚೆಗೆ ಸರಕಾರಿ ಶಾಲೆಯೊಂದನ್ನು ಮಾದರಿಯಾಗಿ ರೂಪಿಸಿ, ಎಲ್ಲವೂ ಸಸೂತ್ರವಾಗಿ ನಡೆಯುತ್ತಿರುವಾಗ ಏಕಾಏಕಿ ಹೆಚ್ಚುವರಿ ಕಾರಣ ಮುಂದಿಟ್ಟು ಶಿಕ್ಷಕರ ವರ್ಗಾವಣೆ ಮಾಡುತ್ತಿರುವುದು ಸರಿಯಲ್ಲ. ಶಿಕ್ಷಣ ಇಲಾಖೆ ತಕ್ಷಣ ಈ ನಿರ್ಧಾರವನ್ನು ಕೈಬಿಟ್ಟು, ಶಾಲೆಯಲ್ಲಿ ಕೊರತೆಯಿರುವ ಶಿಕ್ಷಕರ ಹುದ್ದೆ ಭರ್ತಿ ಮಾಡುವಂತೆ ನಾವುಂದ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ವೆಂಕಟೇಶ್ ನಾವುಂದ ಆಗ್ರಹಿಸಿದರು.
ಆವರು ಶುಕ್ರವಾರ ನಾವುಂದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕರು ಹಾಗೂ ಜಿಪಿಟಿ ಶಿಕ್ಷಕರನ್ನು ಹೆಚ್ಚುವರಿ ಮಾಡಿರುವುದನ್ನು ಕೈಬಿಡಲು ಆಗ್ರಹಿಸಿ ಶಾಲಾ ವಿದ್ಯಾರ್ಥಿಗಳು, ಪೋಷಕರು, ಹಳೆವಿದ್ಯಾರ್ಥಿಗಳು ಹಮ್ಮಿಕೊಂಡ ಪ್ರತಿಭಟನೆಯ ನೇತೃತ್ವ ವಹಿಸಿ ಮಾತನಾಡಿ, 63 ವಿದ್ಯಾರ್ಥಿಗಳಿದ್ದ ಶಾಲೆಯಲ್ಲಿ, ಇದೀಗ 305 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಮಕ್ಕಳ ಸಂಖ್ಯೆಗೆ ಅನುಗುಣವಾಗಿ 10 ಶಿಕ್ಷಕರು ಇರಬೇಕಿದ್ದು, ಪ್ರಸ್ತುತ 7 ಮಂದಿ ಶಿಕ್ಷಕರು ಮಾತ್ರವೇ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇದೀಗ ಮತ್ತೆ ಇಬ್ಬರು ಶಿಕ್ಷಕರನ್ನು ಹೆಚ್ಚುವರಿಯನ್ನಾಗಿಸಿ ವರ್ಗಾವಣೆ ಮಾಡಿದರೆ ಮಕ್ಕಳ ಶೈಕ್ಷಣಿಕ ಭವಿಷ್ಯದ ಮೇಲೆ ಪ್ರಭಾವ ಬೀರಲಿದೆ. ತಕ್ಷಣ ಹೆಚ್ಚುವರಿ ಆದೇಶವನ್ನು ಹಿಂಪಡೆದು ಯಥಾಸ್ಥಿತಿ ಕಾಯ್ದುಕೊಳ್ಳುವುದು ಸೂಕ್ತ ಎಂದರು.
ಶಾಲಾ ಎಸ್ಡಿಎಂಸಿ ಅಧ್ಯಕ್ಷ ಚಂದ್ರ ಖಾರ್ವಿ ಮಾತನಾಡಿ, ಶೈಕ್ಷಣಿಕ ವರ್ಷದ ಮಧ್ಯದಲ್ಲಿ ಶಿಕ್ಷಕರನ್ನು ವರ್ಗಾವಣೆ ಮಾಡುವುದು ಸರಿಯಲ್ಲ. ಸರಕಾರಿ ಶಾಲೆಗಳ ಅಭಿವೃದ್ಧಿಯ ಬಗ್ಗೆ ಚಿಂತಿಸಬೇಕಾದ ಇಲಾಖೆ ಶಾಲೆಯ ಅವನತಿಗೆ ಪರೋಕ್ಷವಾಗಿ ಸಹರಿಸುತ್ತಿದೆ ಎಂದು ಆರೋಪಿಸಿದ ಅವರು, ಏನೇ ಕಾರಣವಿದ್ದರೂ ಶೈಕ್ಷಣಿಕ ವರ್ಷ ಪೂರ್ಣಗೊಳ್ಳುವ ತನಕ ಶಿಕ್ಷಕರನ್ನು ವರ್ಗಾವಣೆ ಮಾಡಬಾರದು. ಹೆಚ್ಚುವರಿ ಆದೇಶ ಕೈಬಿಡದೇ ಇದ್ದಲ್ಲಿ ಪ್ರತಿಭಟನೆಯನ್ನು ಮುಂದುವರಿಸುವುದಾಗಿ ಎಚ್ಚರಿಸಿದರು.
ಮಕ್ಕಳಿಂದ ಶಾಲಾ ಗೇಟ್ ಹೊರಗೆ ಪ್ರತಿಭಟನೆ:
ಬೆಳಿಗ್ಗೆ ಶಾಲೆಗೆ ತೆರಳಿದ್ದ ವಿದ್ಯಾರ್ಥಿಗಳು ತರಗತಿಗಳಿಗೆ ಹೋಗದೇ, ಶಾಲೆಗೆ ಗೇಟ್ ಮುಚ್ಚಿ ಪ್ರತಿಭಟನೆಗೆ ಮುಂದಾದರು. ನಮ್ಮ ಶಿಕ್ಷಕರನ್ನು ವರ್ಗಾವಣೆ ಮಾಡಕೂಡದು ಎಂದು ಪಟ್ಟು ಹಿಡಿದಿದ್ದರು. ವಿದ್ಯಾರ್ಥಿಗಳಿಗೆ ಪೋಷಕರು, ಹಾಗೂ ಹಳೆ ವಿದ್ಯಾರ್ಥಿಗಳು ಸಾಥ್ ನೀಡಿದರು.
ಬಳಿಕ ಸ್ಥಳಕ್ಕಾಗಮಿಸಿದ ಬೈಂದೂರು ತಹಶೀಲ್ದಾರ್ ಶ್ರೀಕಾಂತ್ ಹೆಗ್ಡೆ ಪರಿಸ್ಥಿತಿಯನ್ನು ಅವಲೋಕಿಸಿ ಬೈಂದೂರು ಬಿಇಓ ಹಾಗೂ ಡಿಡಿಪಿಐ ಅವರೊಂದಿಗೆ ಮಾತುಕತೆ ನಡೆಸಿ, ಪ್ರತಿಭಟನಾಕಾರರಿಂದ ಮನವಿ ಸ್ವೀಕರಿಸಿದರು.
ಬಿಆರ್ಸಿ ಕರುಣಾಕರ ಶೆಟ್ಟಿ ಈ ವೇಳೆ ಇಲಾಖಾ ನಿಯಮದಂತೆ ಹೆಚ್ಚವರಿ ಮಾಡಲಾಗಿದೆ. 250ಕ್ಕಿಂತ ಹೆಚ್ಚಿನ ವಿದ್ಯಾರ್ಥಿಗಳಿರುವ ಶಾಖೆಗೆ ಹಿರಿಯ ಮುಖ್ಯ ಶಿಕ್ಷಕ ಹುದ್ದೆ ನೀಡುವುದು ಅಗತ್ಯವಿದ್ದು, ಪ್ರಸ್ತುತ ಮುಖ್ಯ ಶಿಕ್ಷಕ ಹುದ್ದೆಯಷ್ಟೇ ಇರುವುದರಿಂದ ಹಾಲಿ ಮುಖ್ಯ ಶಿಕ್ಷಕರನ್ನು ಹಾಗೂ ಓರ್ವ ಜಿಪಿಟಿ ಇಂಗ್ಲೀಷ್ ಶಿಕ್ಷಕರನ್ನು ಹೆಚ್ಚುವರಿ ಮಾಡಲಾಗಿದೆ. ಕೌನ್ಸಿಲಿಂಗ್ ನಡೆದ ಬಳಿಕ ಅವರ ಸ್ಥಾನಕ್ಕೆ ಬೇರೆ ಶಿಕ್ಷಕರು ಬರಲಿದ್ದಾರೆ. ಆದರೆ ಪೋಷಕರು ಅವರನ್ನು ಉಳಿಸಿಕೊಳ್ಳುವಂತೆ ಬೇಡಿಕೆ ಇರಿಸಿರುವುದರಿಂದ, ಮನವಿಯನ್ನು ಬಿಇಓ ಮೂಲಕ ಇಲಾಖೆಯ ಗಮನಕ್ಕೆ ತರಲಾಗುವುದು ಎಂದರು. ತಹಶೀಲ್ದಾರರು ಮನಮೊಲಿಸಿದ ಬಳಿಕ ತಾತ್ಕಾಲಿಕವಾಗಿ ಪ್ರತಿಭಟನೆ ಕೈಬಿಡಲಾಯಿತು.
ಈ ವೇಳೆ ಬೈಂದೂರು ಪಿಎಸೈ ನಿರಂಜನ್ ಗೌಡ, ಸಿಆರ್ಪಿ ಮಂಜುನಾಥ ನಾಯ್ಕ್, ಹಳೆ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಸುಬ್ರಹ್ಮಣ್ಯ ನಾವುಂದ, ಎಸ್ಡಿಎಂಸಿ ಉಪಾಧ್ಯಕ್ಷೆ ವೀಣಾ ನಾಯಕ್, ಬಿಜೆಪಿ ಮುಖಂಡ ದೀಪಕ್ ಕುಮಾರ್ ಶೆಟ್ಟಿ, ಗಣೇಶ್ ನಾವುಂದ ಸೇರಿದಂತೆ ಎಸ್ಡಿಎಂಸಿ ಸದಸ್ಯರು, ಹಳೆವಿದ್ಯಾರ್ಥಿಗಳು ಉಪಸ್ಥಿತರಿದ್ದರು.