ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಮನರಂಜನಾ ಕಲಾ ಪ್ರಕಾರಗಳಲ್ಲಿ ಯಕ್ಷಗಾನ ಇಂದಿಗೂ ಪ್ರಥಮ ಸ್ಥಾನದಲ್ಲಿದೆ. ಸರ್ವಾಂಗ ಸುಂದರವಾದ ಕಲಾ ಪ್ರಕಾರ, ಸಂಗೀತ, ಸಾಹಿತ್ಯ, ನಾಟ್ಯ, ವೇಷಭೂಷಣ, ಕುಣಿತ ಹಾಗೂ ಎಲ್ಲಕ್ಕಿಂತ ಮುಖ್ಯವಾಗಿ ಜನತೆಗೆ ಉತ್ತಮ ಸಂದೇಶ ನೀಡುವ ಮೂಲಕ ಜ್ಞಾನ ತುಂಬುವ ಕೆಲಸ ಯಕ್ಷಗಾನಗಳಿಂದಾಗುತ್ತಿವೆ ಎಂದು ಉಪ್ಪುಂದ ಶ್ರೀಲಕ್ಷ್ಮೀವೆಂಕಟರಮಣ ದೇವಸ್ಥಾನ ಟ್ರಸ್ಟ್ ಅಧ್ಯಕ್ಷ ಯು. ರಾಜೇಶ ಪೈ ಹೇಳಿದರು.
ಉಪ್ಪುಂದ ಶ್ರೀಲಕ್ಷ್ಮೀವೆಂಕಟರಮಣ ದೇವಸ್ಥಾನದಲ್ಲಿ ಭಾನುವಾರ ಸ್ಥಳೀಯ ವೃತ್ತಿಪರ ಯಕ್ಷಗಾನ ಕಲಾವಿದರ ಶ್ರೀ ದುರ್ಗಾಪರಮೇಶ್ವರಿ ಯಕ್ಷಕಲಾ ಟ್ರಸ್ಟ್ ವತಿಯಿಂದ ನಡೆದ ಯಕ್ಷಗಾನ ಮುಖವರ್ಣಿಕೆ ಶಿಬಿರ ಉದ್ಘಾಟಿಸಿ ಮಾತನಾಡಿದರು. ಯಕ್ಷಗಾನ ಕಾರ್ಯಕ್ರಮಗಳಲ್ಲಿ ಹಿರಿಯರು ಹೆಚ್ಚು ಹೆಚ್ಚು ಯುವ ಪೀಳಿಗೆಯನ್ನು ಕರೆತರುವ ಪ್ರಯತ್ನ ಮಾಡಿದರೆ ಈ ಕರಾವಳಿ ಕಲೆ ಇನ್ನಷ್ಟು ಜನಪ್ರಿಯತೆಯನ್ನು ಪಡೆದುಕೊಳ್ಳಬಹುದು. ನಮ್ಮ ಬದುಕಿಗೆ ಬೇಕಾದ ಪ್ರತಿಯೊಂದು ಜೀವನ ಸಂದೇಶಗಳು ಯಕ್ಷಗಾನದಲ್ಲಿ ದೊರೆಯುವುರಿಂದ ನಮ್ಮ ಸಮಾಜವನ್ನು ಸುಸಂಸ್ಕೃಗೊಳಿಸಬಹುದು ಎಂದು ಅವರು ಅಭಿಪ್ರಾಯಪಟ್ಟರು.
ಬೈಂದೂರು ಲಾವಣ್ಯ ಕಲಾಸಂಸ್ಥೆ ಉಪಾಧ್ಯಕ್ಷ ನರಸಿಂಹ ಬಿ. ನಾಯಕ್ ಅಧ್ಯಕ್ಷತೆ ವಹಿಸಿ ಮಾತನಾಡಿ ಕಳೆದ ಇಪ್ಪತ್ತು ವರ್ಷಗಳಲ್ಲಿ ನೂರಾರು ಹಿರಿಯ, ಕಿರಿಯ ಹವ್ಯಾಸಿ ತಂಡಗಳು ಯಕ್ಷಗಾನ ಕ್ಷೇತ್ರದಲ್ಲಿ ಕಾಣಿಸಿಕೊಂಡು ಪ್ರದರ್ಶನ ನೀಡುತ್ತಿವೆ. ಶಾಲೆ, ಕಾಲೇಜುಗಳ ವಿದ್ಯಾರ್ಥಿಗಳನ್ನು ಯಕ್ಷಗಾನ ಕಲೆಯಲ್ಲಿ ತೊಡಗಿಸುವ ಪ್ರಯತ್ನ ನಡೆಯುತ್ತಿದೆ. ಇದು ಯಕ್ಷಗಾನದ ದೃಷ್ಟಿಯಿಂದ ನಡೆಯುತ್ತಿರುವ ಆಶಾದಾಯಕ ಬೆಳವಣಿಗೆ. ಇದನ್ನೆಲ್ಲ ಪರಿಗಣಿಸಿದಾಗ ಯಕ್ಷಗಾನ ನಶಿಸುತ್ತಿದೆ ಎಂಬ ಅಭಿಪ್ರಾಯ ಸರಿಯಲ್ಲ ಎಂದರು.
ಉಪ್ಪುಂದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲಾ ಎಸ್ಡಿಎಂಸಿ ಸದಸ್ಯ ರಾಘವೇಂದ್ರ ಬಿ. ಕೆ, ಯಕ್ಷಕಲಾ ಟ್ರಸ್ಟಿನ ಕಾರ್ಯದರ್ಶಿ ಶ್ರೀಧರ ಬಿಜೂರು ಉಪಸ್ಥಿತರಿದ್ದರು. ಯಕ್ಷಗಾನದ ಹಿರಿಯ ನಿವೃತ್ತ ಕಲಾವಿದ ನಾರಾಯಣ ಮೊಗವೀರ ಕಾರ್ಯಕ್ರಮ ನಿರ್ವಹಿಸಿದರು.