ಕೊಲ್ಲೂರು: ನಿರಂತರವಾಗಿ ರಕ್ತದಾನ ಶಿಬಿರಗಳ ಆಯೋಜಿಸುವ ಮೂಲಕ ಇವತ್ತು ಗ್ರಾಮಾಂತರ ಪ್ರದೇಶಗಳಲ್ಲಿಯೂ ರಕ್ತದಾನದ ಅರಿವು ಮೂಡಿದ್ದ, ಜಿಲ್ಲೆಯಾದ್ಯಂತ ಜನತೆ ಸ್ವಯಂಪ್ರೇರಣೆಯಿಂದ ರಕ್ತದಾನ ಮಾಡುವುದರ ಮೂಲಕ ಉಡುಪಿ ಜಿಲ್ಲೆ ಇವತ್ತು ರಕ್ತದಾನಿಗಳ ಜಿಲ್ಲೆ ಎಂದು ಘೋಷಿಸಲ್ಪಟ್ಟಿದೆ. ಈಗಾಗಳೆ ಮೊಗವೀರ ಯುವ ಸಂಘಟನೆ, ಜಿ.ಶಂಕರ್ ಫ್ಯಾಮಿಲಿ ಟ್ರಸ್ಟ್ ವಿವಿಧ ಸಂಘ ಸಂಸ್ಥೆಗಳ ನೆರವಿನಿಂದ ೬೦ ಸಾವಿರ ಯೂನಿಟ್ ರಕ್ತ ಸಂಗ್ರಹ ಮಾಡುವ ಮೂಲಕ ಸಾಧನೆ ಮಾಡಿದೆ ಎಂದು ಮೊಗವೀರ ಯುವ ಸಂಘಟನೆ ಉಡುಪಿ ಜಿಲ್ಲೆ ಇದರ ಅಧ್ಯಕ್ಷ ಸದಾನಂದ ಬಳ್ಕೂರು ಹೇಳಿದರು.
ಮೊಗವೀರ ಯುವ ಸಂಘಟನೆ ಉಡುಪಿ ಜಿಲ್ಲೆ, ಹೆಮ್ಮಾಡಿ ಘಟಕ, ಜಿ.ಶಂಕರ್ ಫ್ಯಾಮಿಲಿ ಟ್ರಸ್ಟ್ ಅಂಬಲಪಾಡಿ, ಉಡುಪಿ ಇವರ ನೇತೃತ್ವದಲ್ಲಿ ರಕ್ತನಿಧಿ, ಕೆಎಂಸಿ ಮಣಿಪಾಲ, ಜಿಲ್ಲಾಡಳಿತ ಉಡುಪಿ ಮತ್ತು ಶ್ರೀ ವಿನಾಯಕ ಯುವಕ ಸಂಘ ರಿ, ನೆಂಪು ಇವರ ಸಹಯೋಗದಲ್ಲಿ ನೆಂಪುವಿನ ಸ.ಪ.ಪೂ.ಕಾಲೇಜಿನಲ್ಲಿ ನqದ ಸ್ವಯಂ ಪ್ರೇರಿತ ರಕ್ತದಾನ ಶಿಬಿರ, ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮೊಗವೀರ ಯುವ ಸಂಘಟನೆ ಹೆಮ್ಮಾಡಿ ಘಟಕದ ಅಧ್ಯಕ್ಷ ವಾಸು ಜಿ.ನಾಯ್ಕ್ ಮಾತನಾಡಿ, ರಕ್ತದಾನ ಶಿಬಿರಗಳು ಇನ್ನೂ ತೀರಾ ಗ್ರಾಮೀಣ ಪ್ರದೇಶಗಳಲ್ಲಿ ನಡೆಯುವ ಅಗತ್ಯವಿದೆ. ಅಂಥಹ ಗ್ರಾಮೀಣ ಪ್ರದೇಶದಲ್ಲಿ ರಕ್ತದಾನದ ಅರಿವು ಮೂಡಿಸಲು ಸ್ಥಳೀಯ ಸಂಘ ಸಂಸ್ಥೆಗಳು ಹೆಚ್ಚು ಉತ್ಸಾಹ ತೋರಬೇಕು ಎಂದರು.
ನೆಂಪು ಶ್ರೀ ವಿನಾಯಕ ಯುವಕ ಸಂಘದ ಅಧ್ಯಕ್ಷ ಸಂತೋಷ್ ಮಂಗಲಸಕಟ್ಟೆ, ಬೆಂಗಳೂರು ಉದ್ಯಮಿ ಶಿವರಾಮ ಮಂಗಲಸನಕಟ್ಟೆ, ಮುಂಬಯಿ ಉದ್ಯಮಿ ರಾಜು ಮೆಂಡನ್ ಬಳ್ಳಿಹಿತ್ಲು, ಬೆಂಗಳೂರು ಉದ್ಯಮಿ ಸೀತಾರಾಮ ಶೆಟ್ಟಿ ನೆಂಪು, ನಿಟ್ಟೆ ವಿದ್ಯಾಸಂಸ್ಥೆಯ ರಾಘವೇಂದ್ರ ಭಟ್ ನೆಂಪು, ಜನತಾ ರೋಡ್‌ಲೈನ್ಸ್‌ನ ಗೋಪಾಲ ನಾಯ್ಕ್ ಶಾರಾಳ, ಸ.ಪ.ಪೂ.ಕಾಲೇಜು ನೆಂಪು ಇಲ್ಲಿಯ ಪ್ರಾಂಶುಪಾಲರಾದ ಕೆ.ಟಿ.ಶಿವರಾಮ್, ಮಣಿಪಾಲ ಕೆ.ಎಂ.ಸಿ ಆಸ್ಪತ್ರೆಯ ರಕ್ತನಿಧಿ ವಿಭಾಗದ ಡಾ.ವಿಜಯರಾಮ ಶೆಟ್ಟಿ, ಮೊಗವೀರ ಯುವ ಸಂಘಟನೆ ಹೆಮ್ಮಾಡಿ ಘಟಕದ ಸ್ಥಾಪಕಾಧ್ಯಕ್ಷ ಉದಯಕುಮಾರ್ ಹಟ್ಟಿಯಂಗಡಿ, ಆನಂದ ಮೊಗವೀರ ಉಪಸ್ಥಿತರಿದ್ದರು.
ಮೊಗವೀರ ಯುವ ಸಂಘಟನೆಯ ಕಾನೂನು ಸಲಹೆಗಾರರಾದ ಮಂಜುನಾಥ್ ಆರ್.ಆರಾಟೆ ಸ್ವಾಗತಿಸಿದರು. ಉಪನ್ಯಾಸಕ ಮಂಜುನಾಥ ಚಂದನ್ ನೆಂಪು ಕಾರ್ಯಕ್ರಮ ನಿರ್ವಹಿಸಿ, ಶ್ರೀ ವಿನಾಯಕ ಯುವಕ ಮಂಡಲದ ಕಾರ್ಯದರ್ಶಿ ಮಂಜುನಾಥ ವಂದಿಸಿದರು. ಮುಂಬಯಿ ಉದ್ಯಮಿ ರಾಜು ಮೆಂಡನ್ ಬಳ್ಳಿಹಿತ್ಲು, ಮತ್ತು ಚೇತನ್ ಬಿ.ಕುಂದರ್ ಅವರನ್ನು ಸನ್ಮಾನಿಸಲಾಯಿತು. ಎರಡು ಕಿಡ್ನಿ ವೈಫಲ್ಯಗೊಂಡವರಿಗೆ ಆರ್ಥಿಕ ನೆರವಿನ ಚೆಕ್ ವಿತರಿಸಲಾಯಿತು. ಯುವಕ ಮಂಡಲದ ವತಿಯಿಂದ ರೂ.೧೦ ಸಾವಿರ ನೆರವು ವಿತರಿಸಲಾಯಿತು. ೩ ಜನರಿಗೆ ವೈದ್ಯಕೀಯ ಸಹಾಯಧನ ನೀಡಲಾಯಿತು.