ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಅಂಬೇಡ್ಕರ್ ಅವರು ಒಂದು ಸಮುದಾಯದಲ್ಲಿ ಜನಿಸಿದರೂ ಅವರ ಕೊಡುಗೆ, ವ್ಯಕ್ತಿತ್ವ, ಸಾಧನೆ ಕೇವಲ ಒಂದು ಸಮುದಾಯಕ್ಕೆ ಸೀಮಿತವಾಗಿಲ್ಲ. ಅಂಬೇಡ್ಕರ್ ಅವರನ್ನು ಓದಿನ ಮೂಲಕ ಅರಿಯುವುದರಿಂದ ಮಾತ್ರ ನಿಜ ವ್ಯಕ್ತಿತ್ವ ಅರಿವಾಗುವುದು ಎಂದು ದಸಂಸ ಜಿಲ್ಲಾ ಸಂಚಾಲಕ ಮಂಜುನಾಥ ಗಿಳಿಯಾರ್ ಹೇಳಿದರು.
ಅವರು ಇಲ್ಲಿನ ಅಂಬೇಡ್ಕರ್ ಭವನದಲ್ಲಿ ಸಮುದಾಯ ಕುಂದಾಪುರ ಸಾಂಸ್ಕೃತಿಕ ಸಂಘಟನೆ ನೇತೃತ್ವದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ, ಬುದ್ದಿಸ್ಟ್ ಸೊಸೈಟಿ ಆಫ್ ಇಂಡಿಯಾ ಸಹಯೋಗದೊಂದಿಗೆ ಆಯೋಜಿಸಲಾದ ಉಡುಪಿ ಜಿಲ್ಲಾ ಮಟ್ಟದ ಅಂಬೇಡ್ಕರ್ ಓದು – ಸ್ವರ್ಧಾ ಕಾರ್ಯಕ್ರಮದಲ್ಲಿ ಮಾತನಾಡಿ ದೇಶದ ಆಡಳಿತದಲ್ಲಿ ಅಂಬೇಡ್ಕರ್ ತನ ಹಾಸುಹೊಕ್ಕಾಗಿದೆ ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಎಸ್. ಕಾಂತರಾಜ್ ಅಧ್ಯಕ್ಷತೆ ವಹಿಸಿ ಮಾತನಾಡಿ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಗೌರವ ದೊರೆಯಬೇಕು ಎಂಬ ಕಳಕಳಿ ಅಂಬೇಡ್ಕರ್ ಅವರದ್ದಾಗಿತ್ತು. ಅಂಬೇಡ್ಕರ್ ಅವರು ಇಂದಿಗೂ ಜನರ ಮನಸ್ಸಿನಲ್ಲಿಯೂ ಇದ್ದಾರೆಂದರೆ ಅವರ ವ್ಯಕ್ತಿತ್ವವೇ ಕಾರಣ. ಅಂಬೇಡ್ಕರ್ ಅವರಲ್ಲಿದ್ದ ಜ್ಞಾನದ ಕಾರಣಕ್ಕೆ ದೊಡ್ಡ ಸ್ಥಾನ ದೊರೆಯಿತು ಎಂದರು.
ಕರ್ನಾಟಕ ಪುರಸಭಾ ಸದಸ್ಯ ಪ್ರಭಾಕರ್, ಪುರಸಭಾ ಇಂಜಿನಿಯರ್ ಸತ್ಯ, ಬುದ್ದಿಸ್ಟ್ ಸೊಸೈಟಿ ಆಪ್ ಇಂಡಿಯಾ ಜಿಲ್ಲಾ ಸಂಚಾಲಕ ರಾಘವೇಂದ್ರ ಉಪಸ್ಥಿತರಿದ್ದರು.
ಪ್ರಾಥಮಿಕ, ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಚಿತ್ರಕಲೆ, ಪೋಸ್ಟರ್ ಹಾಗೂ ಸಮೂಹ ಗಾನ ಸ್ಪರ್ಧೆ ನಡೆಯಿತು.
ಸಮುದಾಯ ಕುಂದಾಪುರದ ಅಧ್ಯಕ್ಷ ಸದಾನಂದ ಬೈಂದೂರು ಸ್ವಾಗತಿಸಿದರು. ಜೊತೆ ಕಾರ್ಯದರ್ಶಿ ರವಿ ಕಟ್ಕರೆ ವಂದಿಸಿದರು. ಕಾರ್ಯದರ್ಶಿ ವಾಸುದೇವ ಗಂಗೇರ ಕಾರ್ಯಕ್ರಮ ನಿರೂಪಿಸಿದರು.