ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ನಾಟಕ, ಸಂಗೀತ, ಕಲೆ ಮೊದಲಾದವುಗಳು ಮನುಷ್ಯನ ಮನೋನೆಲೆಯ ಸೆಲೆಗಳು. ಬದುಕಿನ ಅವಕಾಶಗಳನ್ನು ಅರಸಿ ಎಲ್ಲೆಯೋ ನೆಲೆ ಕಾಣಲು ಹೊರಟರೂ ಅಂತಿಮವಾಗಿ ಕಲೆ ಮನುಷ್ಯನ ಕೈಹಿಡಿದು ನಡೆಸುತ್ತದೆ ಎಂದು ರಂಗನಟ, ನಿರ್ದೇಶಕ ಯತೀಶ್ ಎನ್. ಕೊಳ್ಳೆಗಾಲ ಹೇಳಿದರು.
ಸುರಭಿ ಬೈಂದೂರು ಆಶ್ರಯದಲ್ಲಿ ಇಲ್ಲಿನ ಶಾರದಾ ವೇದಿಕೆಯಲ್ಲಿ ಆಯೋಜಿಸಲಾದ ರಂಗಸುರಭಿ- 2023 ರ ನಾಲ್ಕು ದಿನಗಳ ರಾಜ್ಯಮಟ್ಟದ ನಾಟಕೋತ್ಸವದ ಸsಮಾರೋಪ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು. ಮನುಷ್ಯನ ಬಗೆ ಬಗೆಯ ಮುಖಗಳನ್ನು ರಂಗಭೂಮಿಯಿಂದ ಮಾತ್ರ ಬಯಲು ಮಾಡಲು ಸಾಧ್ಯವಿದೆ. ಪ್ರಾದೇಶಿಕ ಭಾಷಾ ಸೊಗಡನ್ನು ರಂಗಭೂಮಿಯಲ್ಲಿ ಅಳವಡಿಸಿಕೊಂಡರೆ ಸುಲಭವಾಗಿ ಜನರ ಮನಸ್ಸನ್ನು ತಟ್ಟಬಹುದು. ರಂಗಭೂಮಿ ಚಟುವಟಿಕೆಗಳು ನಿರಂತರವಾಗಿರುವ ಪ್ರದೇಶದಲ್ಲಿ ಸ್ವಭಾವ ಮತ್ತು ಪ್ರವೃತ್ತಿಯ ಆತ್ಮಾವಲೋಕನ ನಡೆಯುವುದರಿಂದ ಅಲ್ಲಿ ಅಧಿಕ ಸಾಮರಸ್ಯ ಮನೆಮಾಡಿರುತ್ತದೆ. ಕ್ರೀಯಾಶೀಲ ಚಟುವಟಿಕೆಗಳು ಇಲ್ಲದೇ ಹೋದರೆ ಸಮಾಜ ಬೇಗನೆ ಬಿದ್ದು ಹೋಗುತ್ತದೆ. ಈ ಹಿನ್ನೆಲೆಯಲ್ಲಿ ಸಮುದಾಯ ಹಾಗೂ ವ್ಯಕ್ತಿಗಳ ನಡುವೆ ಸಮನ್ವಯತೆ ಸಾಧಿಸುವ ನಗರಗಳು ಸಾಂಸ್ಕೃತಿಕವಾಗಿ ಬಲಿಷ್ಠವಾಗಿವೆ ಎಂದರು.
ಗಂಗಾನಾಡು-ವನಕೊಡ್ಲು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ ಡಾ. ರಾಜಮೋಹನ್ ಶೆಟ್ಟಿ ಅಧ್ದಕ್ಷತೆವಹಿಸಿದ್ದರು. ನಿವೃತ್ತ ಉಪನ್ಯಾಸಕ ವಾಸುದೇವ ಕಾರಂತ್, ನಿವೃತ್ತ ಮುಖ್ಯಶಿಕ್ಷಕ ಹುಂಚನಿ ಕೃಷ್ಣಪ್ಪ ಶೆಟ್ಟಿ, ಜಿಪಂ ಮಾಜಿ ಸದಸ್ಯ ಸುರೇಶ ಬಟ್ವಾಡಿ, ಉದ್ಯಮಿ ಕೃಷ್ಣಯ್ಯ ಮದ್ದೋಡಿ, ಜೆಸಿಐ ಬೈಂದೂರು ಸಿಟಿ ಅಧ್ಯಕ್ಷ ನರೇಂದ್ರ ಶೇಟ್, ಸುರಭಿ ಅಧ್ಯಕ್ಷ ನಾಗರಾಜ ಪಿ. ಯಡ್ತರೆ, ಕಾರ್ಯದರ್ಶಿ ಭಾಸ್ಕರ ಬಾಡ ಉಪಸ್ಥಿತರಿದ್ದರು.
ಸಂಸ್ಥೆಯ ಉಪಾಧ್ಯಕ್ಷ ಆನಂದ ಮದ್ದೋಡಿ ಸ್ವಾಗತಿಸಿದರು. ಸದಸ್ಯ ವಾಸುದೇವ ಪಡುವರಿ ವಂದಿಸಿದರು. ಕೀರ್ತಿ ಭಟ್ ನಿರೂಪಿಸಿದರು. ನಂತರ ವರ್ಕ್ಶಾಪ್ ಇನ್ ಮೈಸೂರ್ ಫಾರ್ ಥಿಯೇಟರ್ ತಂಡದವರಿಂದ ಕಾಂಬ್ರೇಡ್ ಕುಂಭಕರಣ ನಾಟಕ ಪ್ರದರ್ಶನಗೊಂಡಿತು.