ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಬೈಂದೂರು ವಿಧಾನಸಭಾ ಕ್ಷೇತ್ರದ ನಾಲ್ಕು ಕಡೆಗಳಲ್ಲಿ ಫೆ.19ರಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರ ನೇತೃತ್ವದಲ್ಲಿ ನಡೆಯಲಿರುವ ಕಾಂಗ್ರೆಸ್ ಕರಾವಳಿ ಪ್ರಜಾಧ್ವನಿ ಯಾತ್ರೆಗೆ ಸಕಲ ಸಿದ್ಧತೆ ನಡೆಸಲಾಗಿದ್ದು, ಸಾವಿರಾರು ಸಂಖ್ಯೆಯಲ್ಲಿ ಕಾರ್ಯಕರ್ತರು ಭಾವಹಿಸುವ ನಿರೀಕ್ಷೆ ಇದೆ ಎಂದು ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ ಹೇಳಿದರು.
ಅವರು ಬೈಂದೂರು ಕಾಂಗ್ರೆಸ್ ಕಛೇರಿಯಲ್ಲಿ ಹಮ್ಮಿಕೊಂಡ ಮಾಧ್ಯಮಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿ, ಫೆ.19ರ ಬೆಳಿಗ್ಗೆ 9:30ಕ್ಕೆ ಬೈಂದೂರು ಯಡ್ತರೆ ಬೈಪಾಸ್ ಬಳಿ, 11:30ಕ್ಕೆ ನಾಗೂರು ರಾಷ್ಟ್ರೀಯ ಹೆದ್ದಾರಿ ಬಳಿ, ಮಧ್ಯಾಹ್ನ 3ಕ್ಕೆ ವಂಡ್ಸೆಯಲ್ಲಿ ಹಾಗೂ ಸಂಜೆ 5 ಗಂಟೆಗೆ ಸಿದ್ಧಾಪುರ ಪೇಟೆಯಲ್ಲಿ ಪ್ರತ್ಯೇಕ ಕಾರ್ಯಕ್ರಮಕ್ಕೆ ತಯಾರಿ ನಡೆಸಲಾಗಿದೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಮತ್ತು ವಿಧಾನಪರಿಷತ್ ವಿಪಕ್ಷ ನಾಯಕ ಬಿ.ಕೆ ಹರಿಪ್ರಸಾದ್, ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ, ಮುಖಂಡರಾದ ಆರ್.ವಿ. ದೇಶಪಾಂಡೆ, ಜಿಲ್ಲಾಧ್ಯಕ್ಷ ಅಶೋಕ ಕುಮಾರ್ ಕೊಡವೂರು, ಪಕ್ಷದ ವೀಕ್ಷಕರು, ಕೆಪಿಸಿಸಿ ಪ್ರಮುಖರು, ಪಕ್ಷಕದ ವಿವಿಧ ನಾಯಕರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.
ಕರಾವಳಿಗೆ ಕಾಂಗ್ರೆಸ್ ಪ್ರತ್ಯೇಕ ಪ್ರಣಾಳಿಕೆ:
ಕಾಂಗ್ರೆಸ್ ಪಕ್ಷ ಕರಾವಳಿಗಾಗಿ ತಯಾರಿಸಿದ ಪ್ರಣಾಳಿಕೆಯನ್ನು ಮನೆ ಮನೆಗೆ ತಲುಪಿಸುವ ಕಾರ್ಯ ಮಾಡಲಾಗುವುದು. ಕರಾವಳಿಯ ಮೀನುಗಾರರ ಸಮಸ್ಯೆ, ವಿವಿಧ ಸಮುದಾಯಗಳ ಅಭಿವೃದ್ಧಿಗೆ ನಿಗಮ ಹಾಗೂ ಇನ್ನಿತರ ಮೂಲಭೂತ ಸಮಸ್ಯೆಗಳ ಪರಿಹಾರಕ್ಕಾಗಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದ ಸಂದರ್ಭ ಶ್ರಮಿಸಲಾಗುವುದು. ಬಿಜೆಪಿ ಪಕ್ಷ ಕಳೆದ ಮೂರು ವರ್ಷದಲ್ಲಿ ಕರಾವಳಿಗಾಗಿ ನೀಡಿದ ಯಾವ ಯೋಜನೆಯೂ ಅನುಷ್ಠಾನಗೊಂಡಿಲ್ಲ. ಭರವಸೆಯನ್ನಷ್ಟೇ ನೀಡುತ್ತಿರುವ ಬಿಜೆಪಿಗೆ ಜನರ ಸಮಸ್ಯೆಗಳ ನೈಜ ಅರಿವಿಲ್ಲ ಎಂದರು.
ಮಾಧ್ಯಮಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡರಾದ ಎಸ್. ರಾಜು ಪೂಜಾರಿ, ನಾಗರಾಜ ಗಾಣಿಗ, ಶೇಖರ ಪೂಜಾರಿ, ಸೂರಜ್ ಪೂಜಾರಿ ಉಪಸ್ಥಿತರಿದ್ದರು.