ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ನಮ್ಮ ಭಾರತೀಯ ಸಂಸ್ಕೃತಿಯ ಬುನಾದಿ ನಾಥಪಂಥ. ಇದು ಕ್ರಿಸ್ತಪೂರ್ವದ ಅಂಚಿನಿಂದಲೂ ಆರಾಧನೆಯಿತ್ತು. ವಸ್ತುತಃ ಭೈರವನ ಆರಾಧನೆ ವೈದಿಕ ಸಂಸ್ಕೃತಿಯಲ್ಲಿಲ್ಲ. ಇದು ದ್ರಾವಿಡ ಪರಂಪರೆಯಿಂದ ಬಂದಿರುವ ಆತ್ಮಸಾಧನೆಗೆ ಮೂಲವಾಗಿರುವ ತಂತ್ರ ಸಂಸ್ಕೃತಿಯಲ್ಲಿದೆ. ಇದರ ಮೂಲ ತತ್ವ ಸಿದ್ದಾಂತ ಹಾಗೂ ಅನ್ವೇಷಣೆಯನ್ನು ಸರಿಯಾಗಿ ಅಧ್ಯಯನ ಮಾಡಿದರೆ ಈ ಪಂಥದಲ್ಲಿರುವ ಅನೇಕ ವಿಚಾರಧಾರೆಗಳ ಬಗ್ಗೆ ಅರ್ಥವಾಗುತ್ತದೆ ಎಂದು ಆದಿಚುಂಚನಗಿರಿ ಕಾವೂರು ಶಾಖಾ ಮಠಾಧೀಶ ಡಾ.ಧರ್ಮಪಾಲನಾಥ ಸ್ವಾಮೀಜಿ ಹೇಳಿದರು.
ಖಂಬದಕೋಣೆ ಗ್ರಾಮದ ಶ್ರೀ ಕ್ಷೇತ್ರ ಹಳಗೇರಿ ಶ್ರೀ ಕಾಲಭೈರೇಶ್ವರ ದೇವಸ್ಥಾನದ ಪುನರ್ಪ್ರತಿಷ್ಠೆ, ಅಷ್ಟಬಂಧ ಬ್ರಹ್ಮಕಲಶೋತ್ಸವದ 48ನೇ ದಿನದ ಪ್ರಯುಕ್ತ ಧೃಡಸಂಪ್ರೋಕ್ಷಣೆ ಹಾಗೂ ದೇವರ ಉತ್ಸವಮೂರ್ತಿ ಸಮರ್ಪಣಾ ಮಹೋತ್ಸವದಲ್ಲಿ ಆಶೀರ್ವಚನ ನೀಡಿದರು. ಉತ್ತರ ಭಾರತದಲ್ಲಿ ನಾಥ ಪರಂಪರೆ ಬಹಳ ಚೆನ್ನಾಗಿ ಬೆಳೆಯುತ್ತಿದ್ದು, ಈ ಭಾಗದಲ್ಲಿ ಮಾತ್ರ ಕುಂಟಿತವಾಗುತ್ತಿದೆ. ಕರ್ನಾಟಕದಲ್ಲಿ ಬಹಳ ವರ್ಷಗಳ ಹಿಂದಿನ ಇತಿಹಾಸವುಳ್ಳ ಭೈರವ ದೇವಾಲಯಗಳಿದ್ದು, ತನ್ನದೇ ಆದ ಅಂತರ್ಹಿತಗಳನ್ನು ಹೊಂದಿದೆ. ದುದೃಷ್ಟವಶಾತ್ ಇವುಗಳಲ್ಲಿ ಕೆಲವಾರು ದೇವಸ್ಥಾನಗಳು ಅವಸಾನದ ಅಂಚಿನಲ್ಲಿವೆ. ಧರ್ಮ, ಸಂಸ್ಕೃತಿಗಳು ಪುರುತ್ಥಾನಗೊಳ್ಳುವ ಧಾರ್ಮಿಕ ಕೇಂದ್ರವಾದ ದೇವಸ್ಥಾನ ಉದ್ಧಾರವಾದರೆ ಆ ಊರೇ ಶ್ರೇಷ್ಟತೆ ಹೊಂದಿದಂತೆ. ಗರ್ಭಗುಡಿಯಲ್ಲಿರುವ ಬಿಂಬದ ಶಕ್ತಿ ತಂತ್ರಿಗಳ ಮೂಲಕ ಸದೃಢವಾದಾಗ ಆ ಪ್ರದೇಶದಲ್ಲಿ ವಾಸಿಸುವ ಜನರ ಮಾನಸಿಕತೆ, ದೈಹಿಕತೆ ಎಲ್ಲವೂ ಬಲಾಢ್ಯವಾಗಿ ಅಲ್ಲಿ ಶಾಂತಿ, ನೆಮ್ಮದಿಯ ತಾಣವಾಗುತ್ತದೆ ಎಂದರು.
ಬಸ್ರೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಧರ್ಮದರ್ಶಿ ಬಿ ಅಪ್ಪಣ್ಣ ಹೆಗ್ಡೆ, ಕಂಬದಕೋಣೆ ರೈತರ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಎಸ್. ಪ್ರಕಾಶ್ಚಂದ್ರ ಶೆಟ್ಟಿ, ತಾಪಂ ಮಾಜಿ ಅಧ್ಯಕ್ಷ ಮಹೇಂದ್ರ ಪೂಜಾರಿ, ಗ್ರಾಪಂ ಅಧ್ಯಕ್ಷ ಸುಕೇಶ್ ಶೆಟ್ಟಿ, ತಾಲೂಕು ಜೋಗಿ ಸಮಾಜ ಸೇವಾ ಸಂಘದ ಅಧ್ಯಕ್ಷ ದಯಾನಂದ ಜೋಗಿ ನಾವುಂದ, ಕಾಲಭೈರವ ಸೇವಾ ಸಮಿತಿ ಗೌರವಾಧ್ಯಕ್ಷ ಎ. ಎಂ. ಬಳೆಗಾರ, ಹಳಗೇರಿ ಕಾಲಭೈರವ ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ನಾಗೇಶ್ ಜೋಗಿ, ದೇವಳದ ಪ್ರಧಾನ ತಂತ್ರಿ ರಘುರಾಮ ಮಧ್ಯಸ್ಥ ಉಪಸ್ಥಿತರಿದ್ದರು.
ಶಿಲ್ಪಾ ಜೋಗಿ ಸ್ವಾಗತಿಸಿದರು. ಜೀರ್ಣೋದ್ಧಾರ ಸಮಿತಿ ಕಾರ್ಯದರ್ಶಿ ರಮೇಶ್ ಜೋಗಿ ಕೆಳಮನೆ ಪ್ರಾಸ್ತಾವಿಸಿದರು. ರಾಘವೇಂದ್ರ ಜೋಗಿ ಕಟ್ಬೆಲ್ತೂರು ನಿರೂಪಿಸಿದರು. ಗೋಪಾಲ ಜೋಗಿ ಕೆಳಮನೆ ವಂದಿಸಿದರು. ಬೆಳಿಗ್ಗೆ ದೇವಳದಲ್ಲಿ ವಿವಿಧ ಧಾರ್ಮಿ ವಿಧಿವಿಧಾನಗಳು ನಡೆಯಿತು.