ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಎಲ್ಲಕ್ಕಿರುವಂತೆ ಸಾಹಿತ್ಯದ ಕಾಲಘಟ್ಟಗಳಿಗೂ ಏಳುಬೀಳುಗಳಿವೆ. ವ್ಯಾವಹಾರಿಕತೆ, ಬಾಹುಬಲ ಪ್ರಬಲವಾಗಿರುವ ಈಗಿನದು ಅದರ ಹಿನ್ನಡೆಯ ಕಾಲ. ಆದರೂ ಆಗಾಗ, ಅಲ್ಲಲ್ಲಿ ಬೆಳಕು ಗೋಚರಿಸುತ್ತಿರುವುದರಿಂದ ನಿರಾಸೆ ತಾಳಬೇಕಿಲ್ಲ ಎಂದು ಆಕಾಶವಾಣಿಯ ವಿಶ್ರಾಂತ ನಿಲಯ ನಿರ್ದೇಶಕ ಡಾ. ವಸಂತಕುಮಾರ ಪೆರ್ಲ ಹೇಳಿದರು.
ಉಳ್ಳೂರು ಮೂಕಜ್ಜಿ ಪ್ರತಿಷ್ಠಾನದ ಆಶ್ರಯದಲ್ಲಿ ನಾಗೂರು ಒಡೆಯರಮಠ ಶ್ರೀ ಗೋಪಾಲಕೃಷ್ಣ ಕಲಾಮಂದಿರದಲ್ಲಿ ನಡೆದ ಬವಳಾಡಿ ಹೆಬ್ಬಾರ ಕುಟುಂಬದ ಸಹೋದರ, ಸಹೋದರಿಯರು ರಚಿಸಿದ್ದ ಸಂಪ್ರದಾಯದ ಹಾಡುಗಳ ಸಂಗ್ರಹ ’ಪದ್ಯಪಂಚಾಮೃತ’ ಹೊತ್ತಗೆ ಬಿಡುಗಡೆ ಮಾಡಿ ಅವರು ಮಾತನಾಡಿದರು.
ಪದ್ಯಪಂಚಾಮೃತದಲ್ಲಿ ಸಂಗ್ರಹಿಸಿರುವ ಮೊಗೇರಿ ಪಾರ್ವತಿ ಅಡಿಗ, ಉಳ್ಳೂರು ಸರಸ್ವತಿ ಉಡುಪ, ಬವಳಾಡಿ ವೆಂಕಟರಮಣ ಹೆಬ್ಬಾರ, ಹಿರಿಯಣ್ಣ ಹೆಬ್ಬಾರ, ಸೀತಾರಾಮ ಹೆಬ್ಬಾರ ಅವರ ಕೃತಿಗಳ ಭಾಷಾ ಸಮೃದ್ಧಿ, ಭಾವ ಪರಿಪುಷ್ಟತೆ ಮತ್ತು ರಚನಾ ಕೌಶಲ ಬೆರಗುಗೊಳಿಸುತ್ತವೆ. ಎಲ್ಲ ಹಾಡುಗಳೂ ಸರ್ವಾಂಗ ಸುಂದರವಾಗಿವೆ. ಒಂದೊಮ್ಮೆ ನಾಡಿನ ಗ್ರಾಮೀಣರ ಬಾಯಿಯಲ್ಲಿ ವಿಜೃಂಭಿಸಿದ್ದ ಕನ್ನಡದ ಸಂಪ್ರದಾಯದ ಹಾಡುಗಳು ಮರೆವಿಗೆ ಸರಿಯುತ್ತಿರುವ ಈ ಕಾಲದಲ್ಲಿ ಅವುಗಳನ್ನು ಸಂಗ್ರಹಿಸಿ ಪ್ರಕಟಿಸಲು ಕಾರಣರಾದ ಮಕ್ಕಿದೇವಸ್ಥಾನ ಮಹಾಲಿಂಗ ಭಟ್, ಉಳ್ಳೂರು ಸುಬ್ರಹ್ಮಣ್ಯ ಐತಾಳ್ ಅವರು ಮಹತ್ವದ ಕೆಲಸ ಮಾಡಿದ್ದಾರೆ ಎಂದು ಅವರು ಶ್ಲಾಘಿಸಿದರು. ಹೀಗೆ ಸಂಗ್ರಹಿಸಿ ಉಳಿಸುವ ಕೆಲಸ ನಡೆಯುತ್ತಿರಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಸಾಹಿತಿ, ಹಿರಿಯ ವಕೀಲ ಎ. ಎಸ್. ಎನ್. ಹೆಬ್ಬಾರ್ ಹಾಡುಗಳ ಸಂಗ್ರಹ ಮತ್ತು ಪ್ರಕಟಣೆ ಐತಿಹಾಸಿಕ ಘಟನೆ. ಅದರಲ್ಲಿನ ಪ್ರತಿ ಹಾಡುಗಳೂ ಆಶುಕವಿತ್ವದ ರಸಘಟ್ಟಿಗಳು ಎಂದರು. ಸಂದೀಪನ್ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯೋಪಾಧ್ಯಾಯ ಬಿ. ವಿಶ್ವೇಶ್ವರ ಅಡಿಗ ಶುಭ ಹಾರೈಸಿದರು.
ಡಾ. ಭರತ್ ಐತಾಳ್ ದೇವತಾಸ್ತುತಿ ಮಾಡಿದರು. ಪ್ರತಿಷ್ಠಾನದ ಸಂಚಾಲಕ ಯು. ಸುಬ್ರಹ್ಮಣ್ಯ ಐತಾಳ್ ಸ್ವಾಗತಿಸಿ, ಹಾಡುಗಳ ರಚನೆ ಮತ್ತು ಸಂಗ್ರಹದ ಹಿನ್ನೆಲೆಯನ್ನು ವಿವರಿಸಿದರು. ಅಶ್ವಿನಿ ಐತಾಳ್ ವಂದಿಸಿದರು. ಹೊಸಬೆಟ್ಟು ರಾಕೇಶ ಉಡುಪ ನಿರೂಪಿಸಿದರು. ಗಾಯಕಿ ಶೈಲಜಾ ಭಟ್ ಸಂಗ್ರಹದ ಆಯ್ದ ಹಾಡುಗಳನ್ನು ಹಾಡಿದರು.