ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ರಾಜ್ಯದಲ್ಲಿ ವಿಧಾನಸಭಾ ಚುನಾವಣೆಗೆ ಮೇ 10ರಂದು ದಿನಾಂಕ ನಿಗದಿಯಾಗಿದ್ದು, ವ್ಯವಸ್ಥಿತ ವ್ಯವಸ್ಥಿತ ಹಾಗೂ ಶಾಂತಿಯುತ ಮತದಾನಕ್ಕಾಗಿ ಚುನಾವಣಾ ಆಯೋಗ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ. ಮತದಾನದ ಸಂದರ್ಭ ಕಾನೂನು ಸುವ್ಯವಸ್ಥೆ ಕಾಪಾಡಿಕೊಳ್ಳಲು ಪ್ಯಾರಾ ಮಿಲಿಟರಿ ತುಕಡಿಗಳು, ಸಿ.ಆರ್.ಪಿ.ಎಫ್, ಪೊಲೀಸರು, ಹೋಂ ಗಾರ್ಡ್ ಸಿಬ್ಬಂದಿಗಳು ಕರ್ತವ್ಯ ನಿರ್ವಹಿಸಲಿದೆ.
ಜನರಿಗೆ ನಿರ್ಭೀತ ಚುನಾವಣೆಯ ಸಂದೇಶ ಸಾರುವ ಸಲುವಾಗಿ ಚುನಾವಣೆಯ ಭದ್ರತೆಗಾಗಿ ನಿಯೋಜನೆಗೊಂಡಿರುವ ಪ್ಯಾರಾ ಮಿಲಿಟರಿ ತುಕಡಿಗಳು ಹಾಗೂ ಪೊಲೀಸ್ ಸಿಬ್ಬಂದಿಯನ್ನು ಕುಂದಾಪುರ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯ ಕಂಡ್ಲೂರು ಹಾಗೂ ಬೈಂದೂರು ಠಾಣಾ ವ್ಯಾಪ್ತಿಯ ಬೈಂದೂರು ಮತ್ತು ಶಿರೂರು ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಶುಕ್ರವಾರ ಪಥ ಸಂಚಲನ ನಡೆಸಿದರು.
ಕಂಡ್ಲೂರು ಭಾಗದಲ್ಲಿ ನಡೆದ ಪಥ ಸಂಚಲನದ ವೇಳೆ ಕುಂದಾಪುರ ಗ್ರಾಮಾಂತರ ಪೊಲೀಸ್ ವೃತ್ತನಿರೀಕ್ಷಕ ಮಹಾಬಲೇಶ್ವರ ನಾಯ್ಕ್, ಬೈಂದೂರು ಪೊಲೀಸ್ ವೃತ್ತ ನಿರೀಕ್ಷಕ ಸಂತೋಷ್ ಕಾಯ್ಕಿಣಿ, ಗ್ರಾಮಾಂತರ ಠಾಣೆ ಪಿಎಸ್ಐ ಪವನ್ ನಾಯಕ್, ಕ್ರೈಂ ಪಿಎಸ್ಐ ನೂತನ, ಶಂಕರನಾರಾಯಣ ಪಿಎಸ್ಐ ಭರತ್, ಸುದರ್ಶನ್, ಕುಂದಾಪುರ ಟ್ರಾಫಿಕ್ ಪಿಎಸ್ಐ ನಾಸಿರ್ ಹುಸೆನ್ ಸೇರಿದಂತೆ ವಿವಿಧ ಠಾಣೆಗಳ ಪಿಎಸ್ಐಗಳು ಉಪಸ್ಥಿತರಿದ್ದರು.
ಬೈಂದೂರಿನಲ್ಲಿ ನಡೆದ ಪಥಸಂಚಲನದ ವೇಳೆ ಬೈಂದೂರು ವೃತ್ತ ನಿರೀಕ್ಷಕ ಸಂತೋಷ್ ಕಾಯ್ಕಿಣಿ, ಪಿಎಸ್ಐ ನಿರಂಜನ್ ಗೌಡ ಮೊದಲಾದವರು ಉಪಸ್ಥಿತರಿದ್ದರು.